ಕಮಲನಗರ: ಬಿಜೆಪಿ ಸರ್ಕಾರದ ಕಾಲಾವಧಿಯಲ್ಲಿ 43 ಹೊಸ ತಾಲೂಕುಗಳ ಘೋಷಣೆ ಮಾಡಿದ್ದರು. ಅದನ್ನು ಇಂದಿನ ಕಾಂಗ್ರೆಸ್ ಸರ್ಕಾರ ಕಾರ್ಯರೂಪಕ್ಕೆ ತರಲು ತಯಾರಿಲ್ಲವೆಂದು ಬಿಜೆಪಿ ಆರೋಪಿಸಿದೆ. ಭಾನುವಾರ ಗ್ರಾಮದಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕಾರಣಿಯ ನಂತರ ಗ್ರಾಮದ ಅಲ್ಲಮಪ್ರಭು ವೃತ್ತದಲ್ಲಿ ಸಭೆ ಸೇರಿದ ಪಕ್ಷದ ಪ್ರಮುಖರು, ಕಮಲನಗರ ತಾಲೂಕು ಕೇಂದ್ರಕ್ಕಾಗಿ 80 ಗ್ರಾಮಗಳನ್ನು ಕೂಡ ಆಯ್ಕೆ ಮಾಡಲಾಗಿತ್ತು. ಅಂದಿನ ಸರ್ಕಾರ ಆದೇಶ ಕೂಡ ಮಾಡಿತ್ತು. ಆದರೆ ಕಾಂಗ್ರೆಸ್ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದರು. ಜಿಲ್ಲೆಯಲ್ಲಿ ಮಳೆಯಾಗದೇ ರೈತರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಜಿಲ್ಲೆಯನ್ನು ಬರಪೀಡಿತವೆಂದು ಘೋಷಣೆ ಮಾಡಬೇಕು. ಅಲ್ಲದೇ ಪ್ರತಿ ಎಕರೆಗೆ 25 ಸಾವಿರ ಪರಿಹಾರ ಧನ ನೀಡಬೇಕೆಂದು ಜಿಲ್ಲಾ ಅಧ್ಯಕ್ಷ ಶಿವರಾಜ ಗಂದಗೆ ಆಗ್ರಹಿಸಿದರು.
ಶಾಸಕ ಪ್ರಭು ಚವ್ಹಾಣ ಮಾತನಾಡಿ, ಸರ್ಕಾರ ತಾಲೂಕು ಕೇಂದ್ರಗಳಿಗಾಗಿ ಅನುದಾನ ಬಿಡುಗಡೆ ಮಾಡದಿದ್ದರೆ ತಮ್ಮ ಸ್ಥಾನಗಳನ್ನು ಖಾಲಿ ಮಾಡಬೇಕು. ಕಮಲನಗರದಲ್ಲಿ ಸರ್ಕಾರಿ ಕಾರ್ಯಾಲಯಗಳು ಕೂಡಲೇ ಆರಂಭಿಸಬೇಕೆಂದರು.
ಈ ಸಂದರ್ಭದಲ್ಲಿ ಸಂಸದ ಭಗವಂತ ಖೂಬಾ ಮಾತನಾಡಿದರು. ಬಿಜೆಪಿ ಸ್ಲಂ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬಾಬು ವಾಲಿ, ಪ್ರಕಾಶ ಟೊಣ್ಣೆ, ಶಿವಾನಂದ ವಡ್ಡೆ, ಈಶ್ವರಸಿಂಗ್ ಠಾಕೂರ, ಅಶೋಕ ಹೊಕ್ರಾಣಿ ಸೇರಿದಂತೆ ಕಾರ್ಯಕರ್ತರು ಇದ್ದರು.
'ಆಶಾ'ಗೆ ರಾಜ್ಯ ಸರ್ಕಾರ ಸ್ಪಂದಿಸಲಿ
ಹುಮನಾಬಾದ್: ಗ್ರಾಮೀಣ ಭಾಗದಲ್ಲಿ ಗರ್ಭಿಣಿಯರು, ಮಕ್ಕಳ ಬಗ್ಗೆ ಆಶಾ ಕಾರ್ಯಕರ್ತೆಯರು ವಿಶೇಷ ಕಾಳಜಿ ವಹಿಸುತ್ತಿದ್ದು, ಆದರೆ ಸರ್ಕಾರ ಇವರ ಬೇಡಿಕೆಗಳಿಗೆ ಸ್ಪಂದಿಸದಿರುವುದು ದುರದೃಷ್ಟಕರ ಎಂದು ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಸಮಿತಿ ಕಾರ್ಯದರ್ಶಿ ಲಕ್ಷ್ಮೀ ದೇವಮ್ಮ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಭವಾನಿ ಮಂದಿರದಲ್ಲಿ ಸೋಮವಾರ ತಾಲೂಕು ಮಟ್ಟದ ಆಶಾ ಕಾರ್ಯಕರ್ತೆಯರ ದ್ವಿತೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಕಾರ್ಯಕರ್ತೆಯರಿಗೆ ಸರ್ಕಾರ ಮೂಲ ಸೌಕರ್ಯ ಒದಗಿಸಬೇಕು ಎಂದರು.ಸಂಘದ ತಾಲೂಕು ಅಧ್ಯಕ್ಷೆ ಕವಿತಾ ದುಮುಕುತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಂಗನವಾಡಿ ಕಾರ್ಯಕರ್ತೆಯರ ಸಂಘದ ತಾಲೂಕು ಅಧ್ಯಕ್ಷೆ ಸುಮಿತ್ರಾಬಾಯಿ ಜಮಾದಾರ, ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಕಾರ್ಯದರ್ಶಿ ರೇಷ್ಮಾ ಹಂಸರಾಜ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಪ್ರಭು ಸಂತೋಷಕರ್ ಸೇರಿದಂತೆ ಆಶಾ ಕಾರ್ಯಕರ್ತೆಯರು ಇದ್ದರು.
ಹಳೇ ತಹಸೀಲ್ದಾರ್ ಕಚೇರಿಯಿಂದ ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣದ ಮೂಲಕ ಭವಾನಿ ಮಂದಿರದವರೆಗೆ ರ್ಯಾಲಿ ನಡೆಸಿದರು.
Advertisement