ಕ.ಪ್ರ. ವಾರ್ತೆ ಬೀದರ್ ಆ.4
ರೈತರ ಹಿತದೃಷ್ಟಿಯಿಂದ ಹಾಗೂ ಮಳೆ ಬಾರದ ಹಿನ್ನೆಲೆ ಬರಪೀಡಿತ ಜಿಲ್ಲೆಯೆಂದು ಘೋಷಿಸಲು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಭರವಸೆ ನೀಡಿದರು.
ನಗರದ ಜಿಲ್ಲಾ ಪಂಚಾಯ್ತಿಯಲ್ಲಿ ಸೋಮವಾರ ಏರ್ಪಡಿಸಿದ್ದ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವಷ್ಟು ಮಳೆಯಾಗದಿರುವ ಹಿನ್ನೆಲೆಯಲ್ಲಿ ಬರಪೀಡಿತ ಜಿಲ್ಲೆಯೆಂದು ಘೋಷಿಸಲು ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಸಂಸದ ಭಗವಂತ ಖೂಬಾ, ಜಿಪಂ ಅಧ್ಯಕ್ಷೆ ನೀಲಮ್ಮ ವಡ್ಡೆ, ಉಪಾಧ್ಯಕ್ಷೆ ದೀಪಿಕಾ ರಾಠೋಡ, ಜಿಲ್ಲಾಧಿಕಾರಿ ಡಾ. ಪಿ.ಸಿ. ಜಾಫರ್, ಜಿಪಂ ಸಿಇಒ ಉಜ್ವಲ್‌ಕುಮಾರ ಘೋಷ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಎಚ್. ಸುಧೀರಕುಮಾರ ರೆಡ್ಡಿ ಇದ್ದರು.
ಶಾಸಕರಾದ ಪ್ರಭು ಚವ್ಹಾಣ, ರಾಜಶೇಖರ ಪಾಟೀಲ, ಮಲ್ಲಿಕಾರ್ಜುನ ಖೂಬಾ, ಈಶ್ವರ ಖಂಡ್ರೆ, ಅಶೋಕ್ ಖೇಣಿ, ರಘುನಾಥರಾವ ಮಲ್ಕಾಪೂರೆ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಸಚಿವೆ ಉಮಾಶ್ರೀಗೆ ರೈತ ಸಂಘದಿಂದ ಘೇರಾವ್
ಬೀದರ್: ಜಿಲ್ಲೆಯ ರೈತರ ನಾನಾ ಬೇಡಿಕೆಗಳ ಈಡೇರಿಸಬೇಕೆಂದು ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಅವರಿಗೆ ಸೋಮವಾರ ರೈತ ಸಂಘದಿಂದ ಘೇರಾವ್ ಹಾಕಿ ಮನವಿ ಸಲ್ಲಿಸಲಾಯಿತು. ಜಿಪಂ ಕಚೇರಿಗೆ ಆಗಮಿಸಿ ಸಚಿವೆ ಉಮಾಶ್ರೀ ಅವರನ್ನು ರೈತ ಸಂಘದ ಜಿಲ್ಲಾಧ್ಯಕ್ಷ ವಿಶ್ವನಾಥ ಪಾಟೀಲ್ ಕೌಠಾ ನೇತೃತ್ವದಲ್ಲಿ ಕಚೇರಿ ಆವರಣದಲ್ಲಿಯೇ ತಡೆದು ಮನವಿ ಸಲ್ಲಿಸಿದರು. ಮಾರ್ಚ್ ತಿಂಗಳಿನಲ್ಲಿ ಸುರಿದ ಆಲಿಕಲ್ಲು ಮಳೆಯಿಂದ ಆದ ಹಾನಿ ಕುರಿತು ಮರುಪರಿಶೀಲಿಸಿ ಪರಿಹಾರ ಒದಗಿಸಬೇಕು, ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಘೋಷಿಸಿದ ಪ್ರತಿ ಟನ್ ಕಬ್ಬಿಗೆ 2650ರಂತೆ ಶೀಘ್ರ ಪಾವತಿಸಬೇಕು, ಇಲ್ಲದಿದ್ದರೆ ಮೂರು ಕಾರ್ಖಾನೆಯ ಅಧ್ಯಕ್ಷರು ರಾಜಿನಾಮೆ ಕೊಡಬೇಕೆಂದರು. ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಬಿತ್ತಿದ ಬೀಜದ ಮೊಳಕೆ ಒಡೆಯದೆ ಬೆಳೆ ನಷ್ಟ ಆಗಿದೆ. ಅದಕ್ಕಾಗಿ ಪ್ರತಿ ಎಕರೆಗೆ 15 ಸಾವಿರ ಪಾವತಿಸಬೇಕೆಂದು ಆಗ್ರಹಿಸಿದರು. ಬೆಳೆ ವಿಮೆ ಜುಲೈ ತಿಂಗಳಿನಿಂದ ವಿಸ್ತರಿಸಿ ಆಗಸ್ಟ್ ತಿಂಗಳದ ಅಂತ್ಯದವರೆಗೆ ವಿಸ್ತರಿಸಬೇಕು, ವಿಮೆ ಕಂತಿನ ಹಣ ಸರ್ಕಾರವೇ ಭರಿಸಬೇಕು. ವಿದರ್ಭ ಮಾದರಿಯಂತೆ ಬೀದರ್ ಜಿಲ್ಲೆಯ 371(ಜೆ) ಕಲಂ ಅನ್ವಯ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಲಾಯಿತು. ವಿವಿಧ ತಾಲೂಕಿನ ಅಧ್ಯಕ್ಷರಾದ ಸತೀಶ್ ನನ್ನೂರೆ, ಚಂದ್ರಶೇಖರ ಜಮಖಂಡಿ, ಸಿದ್ದಪ್ಪ ಸಣ್ಣಮಣಿ, ಸಿದ್ರಾಮಪ್ಪ ಆಣದೂರೆ, ಶ್ರೀಮಂತ ಬಿರಾದಾರ, ಮುಖಂಡರಾದ ಪರಮೇಶ್ವರ ಪಾಟೀಲ್, ಸಿದ್ದಣ್ಣ ಭೂಶೆಟ್ಟಿ, ಗುರುಲಿಂಗಪ್ಪ ಮೇಲ್ದೊಡ್ಡಿ, ಬಸವರಾಜ ಹುಚ್ಚೆ, ದಿಲೀಪ್ ಕುಲಕರ್ಣಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಸಂತ್ರಸ್ತರಿಗೆ ಅನುದಾನ ಸಿಕ್ಕಿಲ್ಲ: ಚವ್ಹಾಣ
ಕಳೆದ ಮಾರ್ಚ್‌ನಲ್ಲಿ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ಹಾನಿಗೊಳಗಾದ ನನ್ನ ಕ್ಷೇತ್ರದ ನಿಜವಾದ ಫಲಾನುಭವಿಗಳಿಗೆ ಅನುದಾನ ಸಿಕ್ಕಿಲ್ಲ ಎಂದು ಆರೋಪಿಸಿ ಔರಾದ್ ಶಾಸಕ ಪ್ರಭು ಚವ್ಹಾಣ ಪ್ರತಿಭಟಿಸಿದ ಪ್ರಸಂಗ ಜರುಗಿತು. ಜಿಪಂ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಅಧ್ಯಕ್ಷತೆಯಲ್ಲಿ ಜರುಗಿದ ಕೆಡಿಪಿ ಸಭೆ ಆರಂಭವಾಗುತ್ತಿದ್ದಂತೆ ಶಾಸಕ ಚವ್ಹಾಣ ಅವರು, ಆಲಿಕಲ್ಲು ಮಳೆ ಹಾನಿಯಿಂದ ನೀಡಿದ ಪರಿಹಾರದಲ್ಲಿ ಶೇ.80ರಷ್ಟು ಬೋಗಸ್ ಆಗಿದೆ. ಇದನ್ನು ಹೇಗೆ ಸರ್ವೇ ಮಾಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿ, ನಿಜವಾದ ಫಲಾನುಭವಿಗಳಿಗೆ ನ್ಯಾಯ ಸಿಗುವವರಗೆ ಸಭೆ ನಡೆಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಔರಾದ್ ತಾಲೂಕಿನಲ್ಲಿ 9 ಸಾವಿರ ಜನರ ಸರ್ವೇ ಆಗಿದೆ. ಅದರಲ್ಲಿ 7 ಸಾವಿರ ಜನರು ಬೋಗಸ್ ಇದ್ದಾರೆ. ಕಬ್ಬು ಬೆಳೆ ಇದ್ದವರಿಗೆ ಲಕ್ಷಾಂತರ ರು. ಪರಿಹಾರ ನೀಡಲಾಗಿದೆ. ಜೋಳ, ಕಡಲೆ ಮತ್ತಿತರ ಬೆಳೆ ಇದ್ದವರ ಹೆಸರುಗಳೇ ಇಲ್ಲ. ಆದ್ದರಿಂದ ಸಚಿವರು ತಾಲೂಕಿನ ಯಾವುದಾದರೂ ಒಂದು ಗ್ರಾಮಕ್ಕೆ ಭೇಟಿ ನೀಡಿ ನಿಜ ಸಂಗತಿ ಅರಿಯಬೇಕೆಂದರು. ಜಿಲ್ಲೆಯಲ್ಲಿ ಮಳೆಯಿಲ್ಲದೆ ರೈತರು, ಜಾನುವಾರುಗಳು ತತ್ತರಿಸಿವೆ. ಆದ್ದರಿಂದ ಕೂಡಲೇ ಬರ ಜಿಲ್ಲೆಯೆಂದು ಘೋಷಿಸಬೇಕೆಂದು ಬಸವಕಲ್ಯಾಣ ಶಾಸಕ ಮಲ್ಲಿಕಾರ್ಜುನ ಖೂಬಾ ಆಗ್ರಹಿಸಿ, ಜಾನುವಾರುಗಳ ಮೇವಿಗೆ ಹಣ ಎಷ್ಟು ಮೀಸಲಿಟ್ಟಿದ್ದೀರಿ ಎಂದು ಮಾಹಿತಿ ನೀಡಬೇಕೆಂದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಭೆಗೆ ಮಾಹಿತಿ ನೀಡಿ, ಸಿಆರ್‌ಎಫ್ ಅಡಿಯಲ್ಲಿ ನಮ್ಮಲ್ಲಿ 3 ಕೋಟಿ ಇದೆ. ಇದನ್ನು ಕೇವಲ ಮೇವಿಗೆ ಎಂದು ಇಟ್ಟಿಲ್ಲ, ಯಾವುದೇ ತುರ್ತು ಕಾರ್ಯಗಳಿಗೆ ಬಳಸಬಹುದಾಗಿದೆ ಎಂದರು.
ಶೇ.69ರಷ್ಟು ಮಾತ್ರ ಬಿತ್ತನೆ ಕಾರ್ಯ
ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿ.ಟಿ. ಪುತ್ರಾ ಅವರಿಂದ ಜಿಲ್ಲೆಯ ಬಿತ್ತನೆ ಹಾಗೂ ವಾಡಿಕೆಯ ಸರಾಸರಿ ಮಳೆ ಪ್ರಮಾಣದ ಮಾಹಿತಿ ಪಡೆದ ನಂತರ ಈ ವಿಷ ತಿಳಿಸಿದ ಸಚಿವರು, ಜಿಲ್ಲೆಯಲ್ಲಿ ಕಳೆದ ವರ್ಷ ಸುರಿದ ಮಳೆಯಂತೆ ವರ್ಷ ಮಳೆಯಾಗಿರುವುದಿಲ್ಲ. ಕೃಷಿ ಯೋಗ್ಯ ತೇವಾಂಶ ಪ್ರದೇಶವು ಈ ಬಾರಿ ನಿರ್ಮಾಣವಾಗಿಲ್ಲ. ಅಲ್ಲದೆ ಜೂನ್-ಜುಲೈ ತಿಂಗಳ ವಾಡಿಕೆ ಮಳೆ ಅವಲೋಕಿಸಿದರೆ ಬೆಳೆಗಳಿಗೆ ಅಗತ್ಯವಿರುವಷ್ಟು ಮಳೆಯಾಗಿರದೆ ಜಿಲ್ಲೆಯಲ್ಲಿ ಶೇ.69ರಷ್ಟು ಮಾತ್ರ ಬಿತ್ತನೆ ಕಾರ್ಯ ಮುಗಿದಿದೆ ಎಂದರು. ಜಿಲ್ಲೆಯಲ್ಲಿ ಮಳೆ ಕಡಿಮೆಯಾದ ಹಿನ್ನೆಲೆ ಸಮಗ್ರ ವರದಿ ತಯಾರಿಸಿ ಸರ್ಕಾರಕ್ಕೆ ಕಳುಹಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು. ಜಿಲ್ಲಾ ಸಹಕಾರಿ ಬ್ಯಾಂಕಿನಲ್ಲಿ ರೈತರಿಗೆ ನೀಡಲಾಗುವ ಕೃಷಿ ಸಾಲಕ್ಕೆ ಹಲವು ಸಮಸ್ಯೆಗಳು ಕಂಡುಬಂದಿವೆ. ಇವುಗಳ ನಿವಾರಣೆಗೆ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ನೇತೃತ್ವದಲ್ಲಿ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಹೆಚ್ಚು ತೇವಾಂಶ ದಾಖಲಾಗಿಲ್ಲ
ಜೂನ್-ಜುಲೈ ತಿಂಗಳಿನಲ್ಲಿ ಮಳೆಯ ದಿನಗಳು ಕಡಿಮೆಯಾಗಿವೆ. ಈ ಬಾರಿಯ ಜೂನ್‌ನಲ್ಲಿ ನಾಲ್ಕು ದಿನ ಹಾಗೂ ಜುಲೈನಲ್ಲಿ ಏಳು ದಿನ ಮಳೆ ಬಿದ್ದಿದೆ. ಬಸವಕಲ್ಯಾಣದ ಕಸಬಾ ಹೋಬಳಿ ಹೊರತುಪಡಿಸಿ ಜಿಲ್ಲೆಯ ಉಳಿದ 29 ಹೋಬಳಿಗಳಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಜಿಲ್ಲೆಯ ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಿಸಲಾಗಿದೆ. 6,700 ಮೆಟ್ರಿಕ್ ಟನ್ ರಸಗೊಬ್ಬರ ಇಲಾಖೆಯಲ್ಲಿ ದಾಸ್ತಾನಿದೆ. ಮಳೆಯಿಂದಾಗಿ ಜಿಲ್ಲೆಯ ಒಂದು ಕಡೆಯೂ ಶೇ.50ಕ್ಕಿಂತ ಹೆಚ್ಚು ತೇವಾಂಶ ದಾಖಲಾಗಿಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
ಜಾನುವಾರುಗಳಿಗೆ ಮೇವಿನ ಕೊರತೆ ಇಲ್ಲ
ಜಿಲ್ಲೆಯಲ್ಲಿರುವ ಸುಮಾರು 4.50 ಲಕ್ಷ ಜಾನುವಾರುಗಳಿಗೆ ಮುಂದಿನ 40 ದಿನಗಳವರೆಗೆ ಮೇವು ಪೂರೈಸಲು ದಾಸ್ತಾನು ಇದೆ. ಅಲ್ಲದೇ ಪಶು ಸಂಗೋಪನಾ ಇಲಾಖೆಯಿಂದ ಈಗಾಗಲೇ 12 ಸಾವಿರ ಹೆಕ್ಟೇರ್‌ನಲ್ಲಿ ಹಸಿ ಮೇವು ಕಟಾವಿಗೆ ಬಂದಿದೆ ಎಂದು ಜಿಲ್ಲಾಧಿಕಾರಿ ಡಾ. ಪಿ.ಸಿ. ಜಾಫರ್ ಸಭೆಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಬರುವ ದಿನಗಳಲ್ಲಿ ಗೋಶಾಲೆ ಹಾಗೂ ಮೇವು ಕೇಂದ್ರಗಳನ್ನು ಆರಂಭಿಸುವ ಕಾರ್ಯ ಮಾಡಲಾಗುವುದು. ಇದನ್ನು ಆರಂಭಿಸುವ ಮುಂಚೆ ಸಂಬಂಧಪಟ್ಟ ಕ್ಷೇತ್ರದ ಶಾಸಕರ ಗಮನಕ್ಕೆ ತರಬೇಕೆಂದು ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಅಂಕಿ-ಅಂಶ ಕೇಳಿ ಕೆಂಡಾಮಂಡಲರಾದ ಶಾಸಕ ಪಾಟೀಲ್: ಮಾರ್ಚ್ ತಿಂಗಳಿನಲ್ಲಿ ಆಲಿಕಲ್ಲು ಮಳೆಯಿಂದ ಹಾನಿಗೊಳಗಾದ ರೈತರ ಸಂಖ್ಯೆ ತಿಳಿಸಬೇಕೆಂದು ಸಭೆಯಲ್ಲಿ ಮನವಿ ಮಾಡಿದರು. ಅದರಂತೆ ಜಿಲ್ಲೆಯಲ್ಲಿ ಸುಮಾರು 29 ಸಾವಿರ ರೈತರ ತಾಲೂಕುವಾರು ವಿವರವನ್ನು ಜಿಲ್ಲಾಧಿಕಾರಿ ನೀಡುತ್ತಲೇ, ಹುಮನಾಬಾದ್ ಶಾಸಕರು ಕೆಂಡಾಮಂಡಲವಾಗಿ ಎದ್ದು ನಿಂತು ನೀವೇ ಸಭೆ ಮಾಡಿಕೊಳ್ಳಿ ಎಂದು ಎದ್ದು ನಿಂತು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಡಿ.ಕೆ. ಸಿದ್ರಾಮ ನೇತೃತ್ವಸಚಿವೆಗೆ ಮನವಿ
ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕೆಂದು ಆಗ್ರಹಿಸಿ ಯುವ ಮುಖಂಡ ಡಿ.ಕೆ. ಸಿದ್ರಾಮ ನೇತೃತ್ವದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು. ನಗರದ ಜಿಪಂ ಕಚೇರಿಗೆ ಆಗಮಿಸಿ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಅವರನ್ನು ಗೇಟ್ ಹತ್ತಿರ ತಡೆದು ಮನವಿ ಸಲ್ಲಿಸಿ, ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಶೇ.65ರಷ್ಟು ಕಡಿಮೆ ಮಳೆಯಾಗಿದ್ದರಿಂದ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದುವರೆಗೆ 563 ಮಿ.ಮೀ. ಸರಾಸರಿ ಮಳೆಯಾಗಬೇಕಾಗಿತ್ತು. ಆದರೆ ಕೇವಲ 210 ಮಿ.ಮೀ. ಮಾತ್ರ ಮಳೆ ಆಗಿರುತ್ತದೆ ಎಂದರು. ಸರ್ಕಾರ ಬೇಡಿಕೆಗಳನ್ನು ಈಡೇರಿಸಲು ವಿಫಲವಾಗಿದ್ದಲ್ಲಿ ಆ.15ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ರವೀಂದ್ರ ಕಣಜೆ, ಚಂದ್ರಕಾಂತ ಪಾಟೀಲ, ಶಿವಾಜಿರಾವ ದೇಶಮುಖ, ರಾಜು ಗಂದಗೆ, ರವಿ ಕೇರೂರ, ಸಂಗ್ರಾಮ ಬೀರಗೆ, ಪ್ರದೀಪ ಸಿಂಧೆ, ಶಿವರಾಜಪ್ಪ ಬಿರಾದಾರ, ಪ್ರಭು ಬಾಲಕುಂದೆ, ಚಂದ್ರಕಾಂತ ಗಂದಗೆ ಹಾಜರಿದ್ದರು.
Advertisement