ಕ.ಪ್ರ. ವಾರ್ತೆ ಬೀದರ್ ಆ.4
ಡಿಸಿಸಿ ಬ್ಯಾಂಕ್ ಆರಂಭವಾಗಿನಿಂದ ಇಲ್ಲಿಯವರೆಗೆ ಯಾವುದೇ ರೀತಿಯ ಹಾನಿ ಹಾಗೂ ಅವ್ಯವಹಾರ ನಡೆದಿಲ್ಲ. ಆದರೆ ಜಿಲ್ಲಾ ಬಿಜೆಪಿ ಆರೋಪ ಸತ್ಯಕ್ಕೆ ದೂರ ಎಂದು ಬ್ಯಾಂಕಿನ ಅಧ್ಯಕ್ಷ ಹಾಗೂ ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ ಪ್ರತ್ಯುತ್ತರ ನೀಡಿದರು.
ಬ್ಯಾಂಕಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬ್ಯಾಂಕ್ ಹಾಗೂ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಅವ್ಯವಹಾರ ಆಗಿದೆ ಎಂದು ಭಾನುವಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಗಂದಗೆ, ಸಂಸದ ಭಗವಂತ ಖೂಬಾ ಹಾಗೂ ಶಾಸಕ ಪ್ರಭು ಚವ್ಹಾಣ ಆರೋಪಿಸಿದ್ದರು. ಅವರು ತಾವು ಅಧ್ಯಕ್ಷರಾಗಿದ್ದ ಸಮಯದಲ್ಲಿ 4 ಕೋಟಿ ಇದ್ದ ಬಂಡವಾಳ ಈಗ 1800 ಕೋಟಿ ಆಗಿದೆ. ಇಲ್ಲಿಯವರೆಗೆ ಬ್ಯಾಂಕ್ ಲಾಭದಲ್ಲಿಯೇ ಇದೆ ವಿನಃ ಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಇದು ರೈತರ ಸಂಸ್ಥೆಯಾಗಿದ್ದು, ಇದನ್ನು ಹಾಳು ಮಾಡಲು ಹೊರಟ ಸಂಸದ ಹಾಗೂ ಶಾಸಕ ಚವ್ಹಾಣಗೆ ರೈತರೇ ಕೇಳಬೇಕು. ಡಿಸಿಸಿ ಬ್ಯಾಂಕ್‌ನಿಂದಲೇ ಜಿಲ್ಲೆಯ ಮೂರು ಸಹಕಾರ ಸಕ್ಕರೆ ಕಾರ್ಖಾನೆಗಳು ನಡೆಯುತ್ತಿವೆ. ಇಲ್ಲದಿದ್ದರೆ ಕಾರ್ಖಾನೆ ಇದ್ದರೂ ಇಲ್ಲದಂತಾಗಿ ರೈತರು ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದರು ಎಂದು ತಿರುಗೇಟು ನೀಡಿದರು.
ನಾವು ಮಾಡುತ್ತಿದ್ದ ಸಂಸ್ಥೆಯ ಅಭಿವೃದ್ಧಿ ಸಹಿಸದೆ ಕೇವಲ ಟೀಕೆ ಮಾಡುವುದು ಸರಿಯಲ್ಲ. ನನ್ನ ವಿರುದ್ಧ ಕಾರ್ಖಾನೆಯಾಗಲಿ ಅಥವಾ ಇನ್ನೊಂದು ಬ್ಯಾಂಕ್ ಆಗಲಿ ತೆರೆದರೆ ಅವರಿಗೆ ಶಹಾಬ್ಬಾಶ್‌ಗಿರಿ ನೀಡುತ್ತೇನೆ. ಟೀಕೆ ಮಾಡುವುದನ್ನು ಬಿಟ್ಟು ಒಂದು ಸಂಸ್ಥೆ ಕಟ್ಟುವ ಬುದ್ಧಿ ಬರಲಿ, ಇದ್ದುದ್ದನ್ನೇ ಹದಗೆಡಿಸಿದರೆ ಜನರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.
ಬ್ಯಾಂಕಿನಿಂದ ಇಲ್ಲಿಯವರೆಗೆ ಸುಮಾರು 1.95 ಲಕ್ಷ ಜನರಿಗೆ ಸಾಲ ನೀಡಿದ್ದೇನೆ. ಎಲ್ಲರೂ ನನ್ನ ನೆಂಟರು, ಬೇಕಾಗಿದ್ದವರೇ ಇದ್ದಾರೆ ಎಂದು ಪ್ರಶ್ನಿಸಿದ ಅವರು, ನಾನು ಯಾವುದೇ ತಾರತಮ್ಯ ಮಾಡದೇ ಸಾಲ ನೀಡಿದ್ದೇನೆ. ಕೆಲ ಸಂದರ್ಭದಲ್ಲಿ ಸಂಬಂಧಿಕರಿಗೆ ಸಾಲ ನೀಡಲಾಗಿದೆ ಎಂದಿದ್ದಾರೆ. ಆದರೆ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. 74 ಪ್ರಕಾರ ಕೆಲ ಹುದ್ದೆಗಳನ್ನು ತುಂಬಿಕೊಳ್ಳಲು ಅವಕಾಶ ಇರುವುದರಿಂದ ತಾತ್ಕಾಲಿಕವಾಗಿ ಭರ್ತಿ ಮಾಡಿದ್ದೇನೆ. ಇದಕ್ಕಾಗಿ ಯಾರ ಹತ್ತಿರ ಹಣ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಖಗಳು ಮಾತ್ರ ಬೇರೆ: ಬ್ಯಾಂಕಿನ ಬಗ್ಗೆ ಈ ಹಿಂದೆ ಕಾಂಗ್ರೆಸಿನವರು ಆರೋಪ ಮಾಡಿದ್ದರು. ಈಗ ಅದನ್ನೇ ಬಿಜೆಪಿಯವರು ಹೇಳುತ್ತಿದ್ದಾರೆ. ಈ ಬಾರಿ ಕೇವಲ ಮುಖಗಳು ಮಾತ್ರ ಬದಲಾವಣೆಯಾಗಿವೆ. ಉಳಿದೆಲ್ಲವೂ ಹಳೆಯದು ಎಂದು ನಾಗಮಾರಪಳ್ಳಿ ವ್ಯಂಗವಾಡಿದರು.
ಈಗಾಗಲೇ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಆದ್ದರಿಂದ ಅದರ ಬಗ್ಗೆ ಹೇಳುವುದಿಲ್ಲ. ಆದರೆ ಆದೇಶದಲ್ಲಿ ಸ್ಪಷ್ಟವಾಗಿ ತೀರ್ಮಾನ ಆಗುವವರೆಗೆ ಎಂದು ಹೇಳಲಾಗಿದ್ದರಿಂದ ನಾನು ಮತ್ತು ಆಡಳಿತ ಮಂಡಳಿ ಹುದ್ದೆಯಲ್ಲಿದ್ದೇನೆ. ಯಾರಾದರು ಬಿಟ್ಟುಕೊಡಿ ಎಂದರೆ ಬಿಡುವುದಕ್ಕೆ ಅಷ್ಟು ಸುಲಭದ ಮಾತಲ್ಲ ಎಂದರು.
ಕಾರ್ಖಾನೆಯ ಆಸ್ತಿಗಿಂತ ಹೆಚ್ಚಾಗಿ ಸಾಲ ನೀಡಲಾಗಿದೆ ಎಂದು ಸಂಸದ ಖೂಬಾ ಆರೋಪ ಮಾಡಿದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಆಸ್ತಿ ಬಹಳಷ್ಟಿದೆ ಎಂದರು.
ಜನರು ಬ್ಯಾಂಕಿನ ವಿರುದ್ಧ ಆರೋಪ ಹಾಗೂ ಪ್ರಕರಣಗಳು ದಾಖಲಿಸುತ್ತಿದ್ದಾರೆ. ಆದರೆ ಬ್ಯಾಂಕಿನ ಸಾಧನೆ ಗುರುತಿಸಿ ಪ್ರತಿ ವರ್ಷ ನಬಾರ್ಡ್‌ನಿಂದ ಪ್ರಶಸ್ತಿಗಳು ಬರುತ್ತಿವೆ. ಬ್ಯಾಂಕ್ ಆಡಿಟ್ ಎ ಗ್ರೇಡ್ ಆಗಿದೆ ಎಂದ ಅವರು, ನೂತನ ಸಂಸದರು ಅನುಭವಸ್ಥರು ಎಂದು ತಿಳಿದಿದ್ದೆ. ಆದರೆ ಅವರು ಕೂಡ ಒಬ್ಬ ಶಾಸಕನೊಂದಿಗೆ ಟೀಕೆ ಮಾಡಲು ಹೊರಟಿದ್ದಾರೆ. ದೇವರು ಅವರಿಗೆ ಸದ್ಬುದ್ಧಿ ನೀಡಲಿ ಎಂದು ಗುರುಪಾದಪ್ಪ ನಾಗಮಾರಪಳ್ಳಿ ತಿಳಿಸಿದರು.
ಶಾಸಕರ 103 ಪ್ರಶ್ನೆಗೆ ಸಿಕ್ಕ ಉತ್ತರ
ಬೀದರ್ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕುರಿತು ಕಳೆದ 1 ತಿಂಗಳು 11 ದಿನಗಳವರೆಗೆ ನಡೆದ ವಿಧಾನಸಭಾ ಕಲಾಪದಲ್ಲಿ ಸುಮಾರು 103 ಪ್ರಶ್ನೆಗಳನ್ನು ಕೇಳಿದ್ದೇನೆ ಎಂದು ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ ತಿಳಿಸಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧಾನಸಭೆಯಲ್ಲಿ ಕೇಳಿದ ಪ್ರಶ್ನೆಗೆ ಸರ್ಕಾರದಿಂದ ಬಂದ ಮಾಹಿತಿ ನೀಡುತ್ತ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ 2.2 ಎಕರೆ ಜಾಗದಲ್ಲಿ ಮಿನಿ ವಿಧಾನಸೌಧ ನಿರ್ಮಿಸಲು 10 ಕೋಟಿ ವೆಚ್ಚದ ಅಂದಾಜು ಪಟ್ಟಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಕುರಿತು ಪ್ರಧಾನ ಮುಖ್ಯ ವಾಸ್ತುಶಿಲ್ಪಿಗಳ ಹಾಗೂ ಇತರೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಕೆಲಸ ಆರಂಭಿಸುವ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು. ವಿಧಾನಸಭೆಯಲ್ಲಿ ವಿವಿಧ ಇಲಾಖೆಗಳ ಕುರಿತು ಪ್ರಶ್ನೆ ಕೇಳಿ ಅದಕ್ಕೆ ಸಂಬಂಧಿಸಿದಂತೆ ಉತ್ತರ ಸಿಕ್ಕಿದೆ ಎಂದರು.
ಬರಗಾಲ ಜಿಲ್ಲೆ ಘೋಷಣೆ ಮಾಡಿ: ಜಿಲ್ಲೆಯಲ್ಲಿ 1972ರ ನಂತರ ಇಂತಹ ಭೀಕರ ಬರಗಾಲ ಬಿದ್ದಿದ್ದು, ಜನರು ಇದರಿಂದ ತತ್ತರಿಸಿ ಹೋಗಿದ್ದಾರೆ. ಕೆಲವರು ತಮ್ಮ ಜಮೀನಿನಲ್ಲಿ ಬಿತ್ತನೆ ಮಾಡಿ ಇದ್ದುದನ್ನು ಕಳೆದುಕೊಂಡಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕೆಂದು ಆಗ್ರಹಿಸಿದರು. ರಾಜಕೀಯ ಬಿಟ್ಟು ಎಲ್ಲರೂ ಒಂದಾಗಿ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದರು.
ಜಿಲ್ಲೆಯಲ್ಲಿ ಗಂಜಿ ಕೇಂದ್ರಗಳು, ಗೋ ಶಾಲೆಗಳು ತೆರೆದು ಜನರು ಹಾಗೂ ಜಾನುವಾರುಗೆ ಅನುಕೂಲ ಮಾಡಿಕೊಡಬೇಕು. ರೈತರ ಪ್ರತಿ ಎಕರೆಗೆ 10 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ನವೆಂಬರ್‌ನಿಂದ ಒಪಿಡಿ ಆರಂಭ
ಆಸ್ಪತ್ರೆ ಆರಂಭಿಸಲು ಕೇಂದ್ರ ಸರ್ಕಾರದ ನಿಯಮದಂತೆ ಇಂತಿಷ್ಟು ಶೇರು ಹಣ ಸಂಗ್ರಹಿಸಿದ್ದರೆ ಮಾತ್ರ ನೋಂದಣಿ ಮಾಡಲಾಗುವುದು ಎಂಬ ಕಾರಣಕ್ಕೆ ಸುಮಾರು 26 ಕೋಟಿವರೆಗೆ ಶೇರು ಹಣ ಸಂಗ್ರಹಿಸಿದ್ದೇನೆ. ಈಗ ಅದರ ನೋಂದಣಿ ಕೂಡ ಆಗಿದೆ. ಸುಮಾರು 35 ಎಕರೆ ಜಮೀನು ಕೂಡ ಇದೆ. ಅದನ್ನು ನೋಂದಣಿ ಮಾಡುವುದಿದೆ ಎಂದ ಅವರು, ಬರುವ ನವೆಂಬರ್ ತಿಂಗಳಿನಿಂದ ಬಾಡಿಗೆ ಕಟ್ಟಡದಲ್ಲಿಯೇ ಆಸ್ಪತ್ರೆಯ ಒಪಿಡಿ ಆರಂಭಿಸಲಾಗುವುದು ಎಂದರು.
ಚವ್ಹಾಣಗೆ ಪ್ರಶ್ನೆ ಕೇಳಲು ದಮ್ಮಿಲ್ಲ
ವಿಧಾನಸಭೆಯಲ್ಲಿ ಬ್ಯಾಂಕ್ ಹಾಗೂ ಕಾರ್ಖಾನೆಯ ಬಗ್ಗೆ ಕೇಳಿದ ಪ್ರಶ್ನೆಗೆ ಸರ್ಕಾರವೇ ಉತ್ತರ ನೀಡಿದೆ. ಆದರೆ ಅವು ಸರಿಯಾಗಿಲ್ಲ ಎಂದು ಶಾಸಕ ಚವ್ಹಾಣ ಹೇಳುತ್ತಿದ್ದಾರೆ. ಅವರಲ್ಲಿ ದಮ್ಮಿದ್ದರೆ ಪ್ರಶ್ನೆ ಕೇಳಬಹುದಿತ್ತು. ಅಲ್ಲದೇ ಸರಿಯಾಗಿ ಉತ್ತರ ಸಿಕ್ಕಿಲ್ಲ ಎಂದು ಹೇಳಿ ಚರ್ಚೆಗೆ ಅವಕಾಶ ನೀಡಿರಿ ಎಂದು ಕೇಳಬಹುದಿತ್ತು ಎಂದು ಕುಟುಕಿದರು. ಸರ್ಕಾರ ಏನು ಉತ್ತರ ಕೊಡಬೇಕೋ ಅದನ್ನು ಕೊಟ್ಟಿದೆ. ಆದರೆ ಅದು ಸರಿಯಾಗಿಲ್ಲ ಎಂದರೆ ಹೇಗೆ ಎಂದ ಅವರು, ಪ್ರಶ್ನೆ ಕೇಳುವ ದಮ್ಮೆ ಅವರಿಗಿಲ್ಲ ಎಂದು ಶಾಸಕ ನಾಗಮಾರಪಳ್ಳಿ ಛೇಡಿಸಿದರು.
Advertisement