ಕ.ಪ್ರ. ವಾರ್ತೆ ಬೀದರ್ ಜು. 15
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೂರನೇ ಹಾಗೂ ಕೊನೆಯ ಅವಧಿ ಚುನಾವಣೆಯಲ್ಲಿ ಅವಿರೋಧ ಆಯ್ಕೆ ನಡೆದು ಬಿಜೆಪಿ ನಿಟ್ಟುಸಿರು ಬಿಡುವಂತಾದರೆ, ಔರಾದ್ ವಿಧಾನಸಭಾ ಕ್ಷೇತ್ರಕ್ಕೆ ಅಧ್ಯಕ್ಷ ಉಪಾಧ್ಯಕ್ಷ ಎರಡೂ ಸ್ಥಾನಗಳು ಲಭಿಸುವ ಮೂಲಕ ಶಾಸಕ ಪ್ರಭು ಚವ್ಹಾಣ ಬಂಪರ್ ಹೊಡೆದಂತಾಗಿದೆ.
ಜಿಪಂ ಸಭಾಂಗಣದಲ್ಲಿ ಮಂಗಳವಾರ ಈ ಎರಡೂ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದ್ದು, ಅಧ್ಯಕ್ಷರಾಗಿ ಕಮಲನಗರ ಕ್ಷೇತ್ರದ ಜಿಪಂ ಸದಸ್ಯೆ ನೀಲಮ್ಮ ವಡ್ಡೆ ಆಯ್ಕೆಯಾಗಿದ್ದರೆ ಪರಿಶಿಷ್ಟ ಜಾತಿಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಸಂತಪೂರ್ನ ದೀಪಿಕಾ ರಾಠೋಡ ಆಯ್ಕೆಯಾಗಿದ್ದಾರೆ.
ಒಟ್ಟು 31 ಸದಸ್ಯರಲ್ಲಿ 17 ಜನ ಮಹಿಳಾ ಸದಸ್ಯರಿದ್ದು, ಸ್ಪಷ್ಟ ಬಹುಮತ ಹೊಂದಿರುವ ಬಿಜೆಪಿ ಅವಿರೋಧ ಆಯ್ಕೆಗಾಗಿ ಕೋರ್ ಕಮಿಟಿ ಸಭೆ ನಡೆಸಿ ಸದಸ್ಯರಿಗೆ ಈ ಇಬ್ಬರು ಸದಸ್ಯ ಅಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ಸೂಚಿಸಿದ್ದು ಜಯ ಸರಳವಾಗಲು ಸಾಧ್ಯವಾಯಿತು.
ಬೆಂಬಲಿಗರಿಗೆ ಬಲ: ಶಾಸಕ ಪ್ರಭು ಚವ್ಹಾಣ ಕಟ್ಟಾ ಬೆಂಬಲಿಗ ವಲಯದಲ್ಲಿ ಕಂಡು ಬರುವ ಕಮಲನಗರ ಕ್ಷೇತ್ರದ ಜಿಪಂ ಸದಸ್ಯೆ ನೀಲಮ್ಮ ವಡ್ಡೆ ಹಾಗೂ ಅವರ ಸೋದರ ಸಂಬಂಧಿ ದೀಪಿಕಾ ರಾಠೋಡ ಉಪಾಧ್ಯಕ್ಷರಾಗುವ ಮೂಲಕ ಜಿಪಂ ಕೊನೆಯ ಅವಧಿಯಲ್ಲಿ ಔರಾದ್ ಕ್ಷೇತ್ರ ಪ್ರಾಬಲ್ಯ ಮೆರೆಯುವಂತಾಗಿದೆ.
ಚುನಾವಣೆಗೂ ಮುನ್ನ ಭಾಲ್ಕಿ ಮಾಜಿ ಶಾಸಕ ಪ್ರಕಾಶ ಖಂಡ್ರೆ ಅವರ ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿ ಕ್ಷೇತ್ರದ ಶ್ರೀದೇವಿ ಸುಭಾಷ್ ಅಧ್ಯಕ್ಷ ಸ್ಥಾನದ ಪೈಪೋಟಿಯಲ್ಲಿ ಮುಂಚೂಣಿಯಲ್ಲಿದ್ದರಾದರೂ ಪಕ್ಷದ ಕೋರ್ ಕಮಿಟಿಯ ನಿರ್ಧಾರದಲ್ಲಿ ಔರಾದ್ ಶಾಸಕರ ಕೈ ಮೇಲಾಗಿದ್ದು ಸ್ಪಷ್ಟ.
ಅಧ್ಯಕ್ಷ ಗದ್ದುಗೆಗೆ ಬಿಜೆಪಿಯ ಇತರೆ ಸದಸ್ಯರು ಅರ್ಹತೆ ಹೊಂದಿದ್ದರೂ ಜಿ.ಪಂನಲ್ಲಿ ಯಾವುದೇ ಅಧಿಕಾರ ಅನುಭವಿಸಿದವರಿಗೆ ಮತ್ತೆ ಅಧಿಕಾರ ನೀಡದಿರಲು ಪಕ್ಷ ತೀರ್ಮಾನಿಸಿದ್ದೂ ವಡ್ಡೆ ಅವರಿಗೆ ವರದಾನವಾಗಿ ಪರಿಣಮಿಸಿತು.
ಬಿಜೆಪಿಯ ಪ್ರಮುಖರಲ್ಲಿ ಗುರುತಿಸಿಕೊಳ್ಳುತ್ತಿದ್ದ ಜಿಪಂ ಮಾಜಿ ಸದಸ್ಯ ಡಿ.ಕೆ. ಸಿದ್ರಾಮ್ ಇತ್ತೀಚೆಗೆ ಪಕ್ಷ ವಿರೋಧಿ ಚಟುವಟಿಕೆ ಆರೋಪದಿಂದಾಗಿ ಪಕ್ಷದಿಂದ ಉಚ್ಚಾಟಿತಗೊಂಡಿದ್ದು, ಅವರ ಪತ್ನಿ ಜಿಪಂ ಹಾಲಿ ಸದಸ್ಯೆ ಪ್ರಜಾದೇವಿ ಅವರ ಅಧ್ಯಕ್ಷ ಗದ್ದುಗೆಗಾನಿ ಪೈಪೋಟಿಗೆ ಪೆಟ್ಟು ಬಿದ್ದಿದೆ. ಆದರೂ ಮಂಗಳವಾರ ಚುನಾವಣೆ ನಡೆದ ಜಿಪಂ ಕಚೇರಿ ಪ್ರಾಂಗಣದಲ್ಲಿ ಡಿ.ಕೆ. ಸುತ್ತ ಇತರ ಬಿಜೆಪಿ ಪ್ರಮುಖರು ಗಿರಕಿ ಹೊಡೆಯುತ್ತಿದ್ದದ್ದು ಆಶ್ಚರ್ಯ ಮೂಡಿಸಿತ್ತು.
ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದು ಬಿಜೆಪಿಯ ಇಬ್ಬರು ಮಹಿಳಾ ಸದಸ್ಯರು ಅರ್ಹತೆ ಪಡೆಯುವಂತಾಗಿತ್ತು. ಆದರೆ ಈ ಇಬ್ಬರೂ ಹಿಂದೊಮ್ಮೆ ಅಧ್ಯಕ್ಷರಾಗಿ ಅಧಿಕಾರ ಚಲಾಯಿಸಿದವರು.
ಇನ್ನು ಅಧ್ಯಕ್ಷ ಸ್ಥಾನ ಔರಾದ್ ತಾಲೂಕಿನ ಕಮಲನಗರ ಕ್ಷೇತ್ರದ ನೀಲಮ್ಮ ವಡ್ಡೆ ಅವರಿಗೆ ಲಭಿಸಿದರೆ ಉಪಾಧ್ಯಕ್ಷ ಸ್ಥಾನ ಬಸವಕಲ್ಯಾಣದ ರಾಜೇಶ್ವರ ಕ್ಷೇತ್ರದ ಸಂತೋಷಮ್ಮ ಕೌಡಿಯಾಳ ಅವರಿಗೆ ಸಿಗಬಹುದು ಎಂಬ ಊಹಾಪೋಹಗಳು ಕೊನೆ ಘಳಿಗೆಯಲ್ಲಿ ಠುಸ್ಸೆಂದಿದೆ.
ಚುನಾವಣಾಧಿಕಾರಿಯಾದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಇಲ್ಲಿನ ಜಿಪಂ ಸಭಾಂಗಣದಲ್ಲಿ ಮಧ್ಯಾಹ್ನ 3ರ ಸುಮಾರಿಗೆ ಚುನಾವಣೆ ನಡೆಸಿ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಪಿ.ಸಿ. ಜಾಫರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರಕುಮಾರ್ ರೆಡ್ಡಿ ಹಾಗೂ ಜಿಪಂ ಸಿಇಒ ಉಜ್ವಲಕುಮಾರ್ ಘೋಷ್ ಉಪಸ್ಥಿತರಿದ್ದರು.
ಆಯ್ಕೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಗಂದಗೆ, ಶಾಸಕ ಪ್ರಭು ಚವ್ಹಾಣ, ಪ್ರಮುಖರಾದ ಬಾಬುರಾವ್ ಮದಕಟ್ಟಿ, ಉಪೇಂದ್ರ ದೇಶಪಾಂಡೆ ಸೇರಿದಂತೆ ಜಿಪಂ ಬಿಜೆಪಿ ಸದಸ್ಯರು ಹಾಗೂ ಮತ್ತಿತರರ ಮುಖಂಡರು ಆಗಮಿಸಿ ಶುಭ ಕೋರಿದರು ಇದ್ದರು.