ಶೋಷಣೆ ವಿರುದ್ಧ ಸಿಡಿದೆದ್ದ ಜ್ಯೋತಿಬಾ ಫುಲೆ

ಬೀದರ್: ಸಮಾಜದಲ್ಲಿನ ಶೋಷಣೆಗಳ ವಿರುದ್ಧ ಕ್ರಾಂತಿಕಾರಿ ಚಳವಳಿ ಆರಂಭಿಸಿದ ಮಹಾತ್ಮ ಜ್ಯೋತಿಬಾ ಫುಲೆ ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬ ಭಾರತೀಯರು ತಿಳಿದುಕೊಳ್ಳಬೇಕೆಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ ತಿಳಿಸಿದರು.
ನಗರದ ಡಾ. ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಸಂಜೆ ದಲಿತ ಪ್ಯಾಂಥರ್ಸ ಆಫ್ ಇಂಡಿಯಾ ಹಾಗೂ ಅಂಬೇಡ್ಕರ್ ದಲಿತ ಚಳವಳಿ ವೇದಿಕೆ ಜಿಲ್ಲಾ ಸಮಿತಿಯಿಂದ ಹಮ್ಮಿಕೊಂಡಿದ್ದ ಮಹಾತ್ಮ ಜ್ಯೋತಿಬಾ ಫುಲೆ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಂಬೇಡ್ಕರ್ ಹೇಳಿದ ಮತದಾನದ ಮೌಲ್ಯ ಅರಿತು ಅಧಿಕಾರ ಪಡೆದು ರಾಜಕೀಯ ಸೇವೆ ನೀಡಬೇಕೆಂದರು.
ಅಕ್ಷರ ಕ್ರಾಂತಿ ಮಾಡಿದ ಮಹಾತ್ಮ: ಹೈ-ಕ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಪಂಡಿತ ಚಿದ್ರಿ ಮಾತನಾಡಿ, ದೇಶದಲ್ಲಿ ಅನೇಕ ಅನಿಷ್ಟ ಪದ್ಧತಿಗಳಿದ್ದು ಮಹಿಳೆ ಹಾಗೂ ಶೋಷಿತ ವರ್ಗದವರನ್ನು ಕಾಡುತ್ತಿದ್ದವು. ಸತಿಸಹಗಮನ ಪದ್ಧತಿ, ಬಾಲ್ಯ ವಿವಾಹ, ಅನಕ್ಷರತೆ ಮುಂತಾದವುಗಳನ್ನು ನಿರ್ಮೂಲನೆ ಮಾಡಲು ಸತ್ಯಶೋಧನ ಸಂಘ ಸ್ಥಾಪಿಸಿ, ಅಕ್ಷರ ಕ್ರಾಂತಿ ತಂದರು, ಮಹಿಳೆಯರಿಗಾಗಿ ಶಿಕ್ಷಣ ಕಲಿಕಾ ಕೇಂದ್ರಗಳು, ವಸತಿ ಗೃಹಗಳನ್ನು ಜಾರಿಗೊಳಿಸಿ ತನ್ನ ಪತ್ನಿಗೆ ಶಿಕ್ಷಣ ನೀಡಿ ಶಿಕ್ಷಕಿಯನ್ನಾಗಿ ಮಾಡಿದರು ಎಂದರು.
ನಾಂದೇಡ್‌ನ ಅಂಬೇಡ್ಕರವಾದ ಮಿಷನ್ ಸಂಸ್ಥಾಪಕ ದೀಪಕ ಕಧಮ ಮಾತನಾಡಿ, ಮಹಾತ್ಮ ಜ್ಯೋತಿಬಾ ಫುಲೆ ಅವರ ಜೀವನ ಹೋರಾಟ ಕುರಿತು ತಿಳಿಸಿದರು. ಅಲ್ಲದೇ ಡಾ. ಅಂಬೇಡ್ಕರ್ ಜೀವನ ಮತ್ತು ಹೋರಾಟಗಳ ಕುರಿತು ಜನರಿಗೆ ತಿಳಿಸಿದರು.
ಅಂಬೇಡ್ಕರ್ ಕನಸು ನನಸು ಮಾಡಬೇಕಿದೆ: ಮಾಧ್ಯಮ ವರದಿಗಾರ ಲುಂಬಿಣಿ ಗೌತಮ ಮಾತನಾಡಿ, ದಿನನಿತ್ಯ ಅನೇಕ ಟಿವಿಗಳನ್ನು ನೋಡುತ್ತೇವೆ. ಲಾರ್ಡ್ ಬುದ್ಧ ಟಿವಿಯನ್ನು ವೀಕ್ಷಿಸಿ, ನಿಮ್ಮ ಸಮಸ್ಯೆಗಳ ನಿವಾರಣೆಗೆ ದಾರಿ ದೀಪವಾಗುತ್ತದೆ. ನಾವು ಬಯಸಿದ್ದ ಅಂಬೇಡ್ಕರ್ ಕನಸು ನನಸು ಮಾಡಲು ಬುದ್ಧ ಧಮ್ಮ ಪ್ರಚಾರ ಮಾಡಲು ಸಹಕಾರಿಯಾಗುತ್ತದೆ ಎಂದರು.
ಮೈಸೂರಿನ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ವಿಶ್ವದಲ್ಲಿ ಬಸವೇಶ್ವರ ನಂತರ ಜ್ಯೋತಿಬಾ ಫುಲೆ ಅವರು ಜಾತಿಯ ವ್ಯವಸ್ಥೆ ಸಮಾಜದ ಅಂಧಶ್ರದ್ಧೆಗಳ ವಿರುದ್ಧ ಹೋರಾಡಿ ಬೆಳಕು ನೀಡಿದ ಮಹಾತ್ಮರಾಗಿದ್ದರು ಎಂದು ತಿಳಿಸಿದರು.
ಸಂಘಟನೆಗಳು ಹೋರಾಟದ ಶಕ್ತಿಯಾಗಲಿ: ಹೈ-ಕ ಹೋರಾಟ ಸಮಿತಿಯ ಅನೀಲಕುಮಾರ ಬೆಲ್ದಾರ್ ಮಾತನಾಡಿ, ಸಂಘಟನೆಗಳು ಹೋರಾಟದ ಶಕ್ತಿಯಾಗಬೇಕು. ಮಹಾತ್ಮರ ಚರಿತ್ರೆಗಳನ್ನು ಜನರಿಗೆ ತಿಳಿಸಲು ಬಹಿರಂಗ ಸಭೆಗಳನ್ನು ಜರುಗಿಸಿ ಬುದ್ಧಿಜೀವಿಗಳಿಂದ ಉಪನ್ಯಾಸ, ಭಾಷಣಗಳನ್ನು ಆಯೋಜಿಸಬೇಕು ಎಂದರು.
ಚಂದ್ರಕಾಂತ ಹಿಪ್ಪಳಗಾಂವ, ಅಂಬೇಡ್ಕರ್ ಬೌದ್ಧೆ, ಶಿವಕುಮಾರ ಮೇತ್ರೆ, ದತ್ತು ಸೋರಳ್ಳಿಕರ್, ದಶರಥ ರತ್ನಾಕರ್, ಗೋಪಿಸಿಂಗ್, ವಿ.ಎಲ್. ಮಾರ್ಟಿನ್, ಸಂಜಯ ಭೋಸ್ಲೆ ಇದ್ದರು.
 ದಲಿತ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅಂಬಾದಾಸ ಗಾಯಕವಾಡ ಸ್ವಾಗತಿಸಿದರು. ಸುಬ್ಬಣ್ಣ ಕರಕನಳ್ಳಿ ನಿರೂಪಿಸಿದರೆ ಸುಭಾಷ ಸಿಕಿಂದ್ರಾಪೂರ ವಂದಿಸಿದರು. ಇದೇ ಸಂದರ್ಭದಲ್ಲಿ ಜ್ಞಾನಪ್ರಕಾಶ ಸ್ವಾಮಿ, ಲುಂಬಿಣಿ ಮೇಡಂ, ದೀಪಕ ಕದಂರನ್ನು ಸನ್ಮಾನಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com