ಬಿಜಾಪುರ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಬಿಜಾಪುರದಲ್ಲಿ ನಡೆದ 79ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗೈರಾಗಿರುವುದು ಸಮ್ಮೇಳನಕ್ಕೇನೂ ನಷ್ಟವಿಲ್ಲ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಕೋ. ಚನ್ನಬಸಪ್ಪ ಹೇಳಿದರು.
ನಗರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ನಿವಾಸದಲ್ಲಿ ಬೀಳ್ಕೊಡುಗೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ವೈಯಕ್ತಿಕ ಕೆಲಸದಲ್ಲಿ ಬಿಜಿಯಾಗಿರಬೇಕು. ಅನಾರೋಗ್ಯವಿರಬಹುದು. ಬೇರೆ ಕೆಲಸದಲ್ಲಿ ಇರಬಹುದು ಇಲ್ಲವೆ ಇದಕ್ಕೂ ಮಹತ್ವದ ಸಾಹಿತ್ಯ ರಚನೆಯಲ್ಲಿ ತೊಡಗಿರಬಹುದು. ಅವರು ಸಮ್ಮೇಳನಕ್ಕೆ ಆಗಮಿಸಿದ್ದರೆ ಲಕ್ಷಾಂತರ ಜನರ ಪ್ರಶಂಸೆ, ಗೌರವಕ್ಕೆ ಪಾತ್ರರಾಗುತ್ತಿದ್ದರು. ಅವರನ್ನು ಜನರು ನೋಡಿ ಖುಷಿ ಪಡುತ್ತಿದ್ದರು. ಆದರೆ ಅವರು ಬರಲಿಲ್ಲ. ಬಹುಶಃ ಸಮ್ಮೇಳನಕ್ಕೆ ತಮಗೆ ಆಮಂತ್ರಣ ನೀಡಿಲ್ಲ. ತಮ್ಮನ್ನು ಕರೆಯಬೇಕಿತ್ತು ಎಂಬ ಭಾವನೆಯಿಂದಲೂ ಸಮ್ಮೇಳನಕ್ಕೆ ಬಾರದಿರಲು ಕಾರಣವಿರಬಹುದು. ಇದರಿಂದ ಸಮ್ಮೇಳಕ್ಕೇನೂ ನಷ್ಟವಿಲ್ಲ ಎಂದರು.
ಮಧುರ ನೆನೆಪುಗಳೊಂದಿಗೆ ತೆರಳುತ್ತಿದ್ದೇನೆ: ನಮ್ಮ ರಾಜ್ಯಕ್ಕೆ ಬೇರೆ ಭಾಷಿಕರು ಬಂದರೆ ಕನ್ನಡಿಗರು ಅವರ ಜತೆ ಕನ್ನಡದಲ್ಲಿಯೇ ಮಾತನಾಡದೆ ಹೊರಗಿನವರಿಗಿಂತಲೂ ಮುಂಚೆಯೇ ಬೇರೆ ಭಾಷೆಯಲ್ಲಿ ಮಾತನಾಡುತ್ತಾರೆ. ಕನ್ನಡವನ್ನು ಮರೆತು ಬಿಡುತ್ತಾರೆ. ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆಯಾಗಲು ಕನ್ನಡಿಗರೇ ಕಾರಣರಾಗಿದ್ದಾರೆ. ಸಮಸ್ತ ಕನ್ನಡಿಗರಿಗೆ ಬಿಜಾಪುರದಲ್ಲಿ ನಡೆದ 79ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುಭ ಸಂದೇಶ ನೀಡಿದೆ. ಸುಮಧುರ ನೆನಪಿನೊಂದಿಗೆ ನಮ್ಮ ಊರಿಗೆ ತೆರಳುತ್ತಿದ್ದೇನೆ. ಬಿಜಾಪುರದ ಸಾಹಿತ್ಯ ಸಮ್ಮೇಳನ ಹಾಗೂ ಜನರನ್ನು ನೋಡಿ ನನಗೆ ತುಂಬಾ ಖುಷಿಯಾಗಿದೆ ಎಂದರು.
ಅನಂತರ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಕೋ. ಚೆನ್ನಬಸಪ್ಪನವರನ್ನು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಮತ್ತಿತರರು ಆತ್ಮೀಯವಾಗಿ ಬೀಳ್ಕೊಟ್ಟರು.
Advertisement