ಬಸವನಬಾಗೇವಾಡಿ: ಪಟ್ಟಣದ ಕ್ಷೇತ್ರಶಿಕ್ಷಣಾಧಿಕಾರಿ ಕಾರ್ಯಾಲಯದಲ್ಲಿ ಸೋಮವಾರ ಕ್ಷೇತ್ರಶಿಕ್ಷಣಾಧಿಕಾರಿ ಎನ್.ಹೆಚ್. ನಾಗೂರ ಅವರು ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಅಂಬಿಗೇರ ಚೌಡಯ್ಯನವರ ಜಯಂತಿ ಆಚರಿಸಲಾಯಿತು.
ನಂತರ ಮಾತನಾಡಿದ ಅವರು, ಸಮಾಜ ಕೊಳೆ ತೊಡೆದುಹಾಕುವಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ವಚನಗಳು ತುಂಬಾ ಪ್ರೇರಣೆ ನೀಡಿವೆ. ಇವರು ಭವಸಾಗರವನ್ನು ದಾಟಿಸಿದ ಧೀಮಂತ ಶರಣ. ಇವರು ಅಂದಿನ ಸಮಾಜದಲ್ಲಿರುವ ಅಂಕುಡೊಂಕನ್ನು ನಿಷ್ಠುರವಾಗಿ ತಮ್ಮ ವಚನಗಳ ಮೂಲಕ ಖಂಡಿಸಿದ್ದಾರೆ. ಇಂತಹ ಶರಣರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕೆಂದರು.
ಶಿಕ್ಷಣ ಸಂಯೋಜಕರಾದ ಎಸ್.ಬಿ. ಹಿಪ್ಪರಗಿ, ಎಸ್.ಎಸ್. ಹೊಸಮನಿ ಇದ್ದರು. ಕಾರ್ಯಕ್ರಮಕ್ಕೆ ಕಚೇರಿ ಇತರೆ ಸಿಬ್ಬಂದಿ ಗೈರು ಕುರಿತಾಗಿ ಕ್ಷೇತ್ರಶಿಕ್ಷಣಾಧಿಕಾರಿಗಳನ್ನು ಪತ್ರಿಕೆ ಕೇಳಿದಾಗ ಈ ಜಯಂತಿ ಕಾರ್ಯಕ್ರಮಕ್ಕೆ ಎಲ್ಲರೂ ಬರಬೇಕಿತ್ತು. ಇದರ ಬಗ್ಗೆ ಇಂದೇ ಅವರಿಗೆ ಎಲ್ಲ ರಾಷ್ಟೀಯ ಕಾರ್ಯಕ್ರಮಗಳಲ್ಲಿ ಮುಂಚಿತವಾಗಿ ಆಗಮಿಸಬೇಕೆಂದು ಸೂಚಿಸುವುದಾಗಿ ಹೇಳಿದರು.
ರಾಷ್ಟ್ರೀಯ ಬಸವಸೈನ್ಯ ಸಂಘಟನೆಯಿಂದ: ಪಟ್ಟಣದ ರಾಣಿ ಚೆನ್ನಮ್ಮ ವೃತ್ತದಲ್ಲಿ ರಾಷ್ಟ್ರೀಯ ಬಸವಸೈನ್ಯ ಸಂಘಟನೆ ವತಿಯಿಂದ ಅಂಬಿಗರ ಚೌಡಯ್ಯನವರ ಜಯಂತಿ ಆಚರಿಸಲಾಯಿತು.
ಬಸವಸೈನ್ಯ ಸಂಸ್ಥಾಪಕ ಶಂಕರಗೌಡ ಬಿರಾದಾರ ಮಾತನಾಡಿ, 12 ನೇ ಶತಮಾನದ ಬಸವಣ್ಣನವರ ಸಮಕಾಲೀನರಾದ ಅಂಬಿಗರ ಚೌಡಯ್ಯನವರು ಒಬ್ಬ ಶ್ರೇಷ್ಠ ವಚನಕಾರ. ಇವರು ಸಮಾಜ ಪರಿವರ್ತನೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ಬಸವಸೈನ್ಯ ತಾಲೂಕಾಧ್ಯಕ್ಷ ಶ್ರೀಕಾಂತ ಪಡಶೆಟ್ಟಿ, ಕಾರ್ಯದರ್ಶಿ ಮಹೇಶ ಹಿರೇಕುರಬರ, ಶ್ರೀಕಾಂತ ಕೊಟ್ರಶೆಟ್ಟಿ, ಪರಶುರಾಮ ಅಡಗಿಮನಿ, ಸಂದೇಶ ಪಟ್ಟಣಶೆಟ್ಟಿ, ಸುರೇಶ ಹೂಗಾರ, ಮುತ್ತು ಡಂಬಳ, ಬಾಲನಾಗಮ್ಮ ಬೆಣ್ಣೂರ, ಮುತ್ತು ಬಡಿಗೇರ, ಸಂಗು ಜಾಲಗೇರಿ, ಮುದುಕು ಅಡಗಿಮನಿ, ಶ್ರೀಧರ ಪಾಟೀಲ, ಕುಶಾಲ ಬೆಣ್ಣೂರ ಇತರರು ಇದ್ದರು.