ಬಿಜಾಪುರ: ಕ್ರೀಡೆಯಿಂದ ಮಾನಸಿಕ, ದೈಹಿಕ ನೆಮ್ಮದಿ ಸಿಗುತ್ತದೆ ಎಂದು ಕೃಷಿ ಮಾರುಕಟ್ಟೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.
ಸೋಮವಾರ ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಬಿಜಾಪುರ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾಗಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿ ಜಿಲ್ಲೆಗೆ ಕೀರ್ತಿ ತರಬೇಕು. ರಾಜ್ಯ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸುವ ಎಲ್ಲ ಕ್ರೀಡಾಪಟುಗಳಿಗೂ ಕ್ರೀಡಾ ಸಮವಸ್ತ್ರ ನೀಡಲಾಗುವುದು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಜಿಪಂ ಅಧ್ಯಕ್ಷೆ ಕಾವ್ಯಾ ದೇಸಾಯಿ, ಸಿಇಒ ಗುತ್ತಿ ಜಂಬುನಾಥ್, ಜಿಪಂ ಸದಸ್ಯರಾದ ಬಿ.ಬಿ. ಪಾಟೀಲ, ಉಮೇಶ ಕೊಳಕೂರ, ಪ್ರಮುಖರಾದ ಮಮತಾ ಚವ್ಹಾಣ, ಜಾವೀದ ಜಮಾದಾರ, ಅಡಿವೆಪ್ಪ ಸಾಲಗಲ್, ನಾಗರಾಜ ಲಂಬು, ಸಂಜೀವ ಖೋತ ಮುಂತಾದವರು ಇದ್ದರು. ಸುರೇಶ ಶೆಡಶ್ಯಾಳ ಸ್ವಾಗತಿಸಿದರು. ಲೋಣಿ ನಿರೂಪಿಸಿದರು. ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಆರ್.ಬಿ. ಉಪಾಸೆ ವಂದಿಸಿದರು.