ಬಿಜಾಪುರ: ಕಲಾವಿದ ಅಶೋಕ ಪತ್ತಾರ ವಿನ್ಯಾಸಗೊಳಿಸಿ ರಚಿಸಿದ ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ಫಲಕಗಳನ್ನು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಿಗೆ ಅಂಟಿಸುವ ಮೂಲಕ ಸಮ್ಮೇಳನದ ಕಾರ್ಯಾಧ್ಯಕ್ಷ ಹಾಗೂ ನಗರ ಶಾಸಕ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರು ಉದ್ಘಾಟಿಸಿ ಪ್ರಚಾರಕ್ಕೆ ಮಂಗಳವಾರ ಚಾಲನೆ ನೀಡಿದರು.
ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲಿ ಎಂಬ ಘೋಷಣೆಗಳನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಎಲ್ಲಾ ಕನ್ನಡ ಅಭಿಮಾನಿಗಳು ಕೂಗಿ ಕನ್ನಡ ತೇರೆಳೆಯುವ ಉತ್ಸಾಹ ತೋರಿದರು.
ಪ್ರಚಾರ ಫಲಕದಲ್ಲಿ ಕನ್ನಡದ ಮನಸ್ಸುಗಳಿಗೆ ಹಾರ್ದಿಕ ಸ್ವಾಗತ, ಬನ್ನಿ ಪಾಲ್ಗೊಳ್ಳಿ, ಯಶಸ್ವಿಗೊಳಿಸಿ ಎಂಬ ಅಭಿಮಾನದ ಕನ್ನಡ ಕರೆಯ ನುಡಿಗಳು ಪ್ರಚಾರ ಫಲಕದಲ್ಲಿರುವುದು ಕನ್ನಡ ಮನಸ್ಸುಗಳಿಗೆ ಆಕರ್ಷಿಸುವಂತಿದೆ. ಈ ಕಾರ್ಯಕ್ರಮದಲ್ಲಿ ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಯಂಡಿಗೇರಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಿಜಾಪುರ ವಿಭಾಗೀಯ ನಿಯಂತ್ರಣಾಧಿಕಾರಿ ಪಿ.ವಿ. ಬಸವರಾವ, ಕೆಎಸ್ಆರ್ಟಿಸಿ ಅಧಿಕಾರಿಗಳಾದ ಬಸವರಾಜ ಅಮ್ಮಣ್ಣವರ, ಎ.ಎಚ್. ಮದಭಾವಿ, ಪಿ.ಎಸ್. ಹಳಗೊಂಡ, ಎಸ್.ಆರ್. ಕುಲಕರ್ಣಿ, ಅಶೋಕ ಕಾಳೆ, ಹಿರಿಯ ಸಾಹಿತಿ ಮಹಾಂತ ಗುಲಗಂಜಿ, ಸೋಮಶೇಖರ ವಾಲಿ, ಚನ್ನವೀರ ಝಳಕಿ, ಎಸ್.ಎಸ್. ಖಾದ್ರಿಇನಾಮದಾರ, ಮಲ್ಲಿಕಾರ್ಜುನ ಭ್ರಂಗಿಮಠ, ಕನ್ನಡ ಸಂಘಟಣೆಗಳ ಅನ್ವರ ಶೇಖ, ಆರ್.ಜಿ. ಜಹಾಗೀರದಾರ, ದಸ್ತಗೀರ ಸಾಲೋಟಗಿ, ಸಾಯಬಣ್ಣ ಮಡಿವಾಳರ, ಎಂ.ಎಂ.ಕುಂಬಾರ, ರಂಗನಾಥ ಅಕ್ಕಲಕೋಟ, ಮಲ್ಲಿಕಾರ್ಜುನ ಮೇತ್ರಿ, ಲೋಹಿತ ಪಾತ್ರೋಟ, ಶ್ರೀನವಾಸ ಗುರ್ಜಾಲ, ಸಿದ್ದು ಮಲ್ಲಿಕಾರ್ಜುನಮಠ, ಕಾಂತು ಇಂಡಿ ಉಪಸ್ಥಿತರಿದ್ದರು.
ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ: 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ ಪ್ರವಾಸೋದ್ಯಮ ಇಲಾಖೆ ಅನುದಾನದಡಿ ರು. 1.20 ಕೋಟಿ ವೆಚ್ಚದ ರಸ್ತೆ ಡಾಂಬರೀಕರಣಕ್ಕೆ ನಗರ ಶಾಸಕ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಂಗಳವಾರ ಭೂಮಿ ಪೂಜೆ ನೆರವೇರಿಸಿದರು. ನಗರದ ಕೇಂದ್ರ ಬಸ್ ನಿಲ್ದಾಣದಿಂದ ತಾಜ್ಬಾವಡಿ, ಶಿವಾಜಿ ವೃತ್ತ, ಉಪ್ಪಲಿಬುರುಜ ವರೆಗಿನ ರಸ್ತೆ ಡಾಂಬರೀಕರಣ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನದ ಪೂರ್ವದಲ್ಲೇ ನೆನೆಗುದಿಗೆ ಬಿದ್ದ ನಗರದ ಎಲ್ಲ ರಸ್ತೆಗಳನ್ನು ಡಾಂಬರೀಕರಣಗೊಳಿಸಲಾಗುವುದು. ಈಗಾಗಲೇ ಕಾಮಗಾರಿಗಳು ಆರಂಭಗೊಂಡಿವೆ ಎಂದು ತಿಳಿಸಿದರು.
ಪ್ರವಾಸೋದ್ಯಮ ಇಲಾಖೆಯ ವಿಶೇಷ ಅನುದಾನದಡಿ 1.2 ಕಿ.ಮೀ. ರಸ್ತೆ ಡಾಂಬರೀಕರಣಗೊಳಿಸುವ ಕಾಮಗಾರಿಗೆ ಚಾಲನೆ ನೀಡಿದ್ದು, ಸಾಹಿತ್ಯ ಸಮ್ಮೇಳನದ ಮುಂಚಿತವಾಗಿ ಕಾಮಗಾರಿ ಪೂರ್ಣವಾಗಲಿದೆ ಎಂದು ಹೇಳಿದರು.