ಇಂಡಿ: ಇಲ್ಲಿನ ತಾಲೂಕು ಪಂಚಾಯಿತಿ 8ನೇ ಸಾಮಾನ್ಯ ಸಭೆ ಗುರುವಾರ ತಾಪಂ ಅಧ್ಯಕ್ಷ ಆನಂದ ಹೊಟಗಾರ ಅಧ್ಯಕ್ಷತೆಯಲ್ಲಿ ಜರುಗಿತು.
ಸಭೆಯಲ್ಲಿ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಮೇಲಧಿಕಾರಿಗಳಿಗೆ ಶಿಫಾರಸ್ಸು ಮಾಡುವ ನಿರ್ಣಯ ಕೈಗೊಳ್ಳಲಾಯಿತು.
ಇದೇ ಸಂದರ್ಭದಲ್ಲಿ ಸದಸ್ಯರಾದ ಸವಿತಾ ಜತ್ತಿ, ರಾಜೇಂದ್ರ ಬೊಮ್ಮನಳ್ಳಿ ಮತ್ತು ಬೌರಮ್ಮ ಮುಳಜಿ ಅವರು, ಸಭೆಯಲ್ಲಿ ಇಲಾಖೆ ಮುಖ್ಯಸ್ಥರ ಬದಲಾಗಿ ಸಹಾಯಕ ಅಧಿಕಾರಿಗಳು ಹಾಜರಿದ್ದು ಅವರನ್ನು ಸಭೆಯಿಂದ ಹೊರಹಾಕಬೇಕು ಎಂದು ಒತ್ತಾಯಿಸಿದರು.
ಸದಸ್ಯ ರಾಜೇಂದ್ರ ಬೊಮ್ಮನಹಳ್ಳಿ ಅವರು, ತಾಪಂ ಯೋಜನೆ ಅನುಷ್ಠಾನಗೊಳಿಸುವಲ್ಲಿ ತಾಪಂ ಎಂಜಿನಿಯರ್ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು.
ಹತ್ತಳ್ಳಿ ಗ್ರಾಮಕ್ಕೆ ಪೈಪಲೈನ್ ಮೂಲಕ ಕುಡಿವ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಸೂರ್ಯಕಾಂತ ಮಠಪತಿ ಮನವಿ ಮಾಡಿದರು.
ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಜಯರಾಮ ಚವ್ಹಾಣ, ಉಪಾಧ್ಯಕ್ಷೆ ಸರೂಬಾಯಿ ಆಸಂಗಿ, ಜಿಲ್ಲಾ ಪಂಚಾಯಿತಿ ಸದಸ್ಯ ಗುರಣ್ಣಗೌಡ ಪಾಟೀಲ, ರಾಮ ಅವಟಿ, ಚಂದ್ರಶೇಖರ ನಿರಾಳೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಇತರರು ಇದ್ದರು.