ಆಧುನಿಕ ಶ್ರವಣಕುಮಾರನ ಅದಮ್ಯ ಮಾತೃಭಕ್ತಿ

Updated on: 

ಸಿಂದಗಿ: ತ್ರೇತಾಯುಗದಲ್ಲಿ ಶ್ರವಣಕುಮಾರ ತನ್ನ ಅಂಧ ಅಪ್ಪ ಅಮ್ಮನನ್ನು ಹೊತ್ತುಕೊಂಡು ಕಾಶಿಯಾತ್ರೆ ಪೂರೈಸಿದ್ದು ಎಲ್ಲರಿಗೂ ಗೊತ್ತಿದೆ. ಇದೀಗ ಇಂಡಿ ತಾಲೂಕಿನ ತಡವಲಗಾದ ಕಲಿಯುಗದ ಶ್ರವಣಕುಮಾರ, ಅಣ್ಣಾರಾಯ ರಾಯಪ್ಪ ಕುದರಿ (40) ತನ್ನ ವೃದ್ಧ ತಾಯಿಯ ಆಸೆ ಈಡೇರಿಸಲು ಅವಳನ್ನು ಹೆಗಲ ಮೇಲೆ ಹೊತ್ತು ಶ್ರೀಶೈಲಕ್ಕೆ ಪಾದಯಾತ್ರೆ ಹೊರಟಿದ್ದಾರೆ.
ಶುಕ್ರವಾರ ಪಟ್ಟಣದ ಹೊರವಲಯದಲ್ಲಿ ಹೃದಯ ಕಲಕುವ ಈ ದೃಶ್ಯ ಕಂಡು ಬಂದಿತು. ಸುಡು ಬಿಸಿಲನ್ನೂ ಲೆಕ್ಕಿಸದೆ ತಾಯಿಯನ್ನು ಹೆಗಲ ಮೇಲೆ ಹೊತ್ತು ನಡೆಯುವ ಮೂಲಕ ಆತ ಮಾತೃಭಕ್ತಿ ಪ್ರದರ್ಶಿಸಿದ್ದಾರೆ. ಇವರ ತಾಯಿ ನೀಲಾಬಾಯಿ ಕುದರಿ (85)ಗೆ ಬಹಳ ವರ್ಷಗಳಿಂದ ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನ ಮಾಡುವ ಅದಮ್ಯ ಬಯಕೆ. ಇಲ್ಲಿಯವರೆಗೂ ಅದು ಸಾಧ್ಯವಾಗಿರಲೇ ಇಲ್ಲ.
ಕೆಲ ವರ್ಷಗಳ ಹಿಂದೆ ಪತಿ ರಾಯಪ್ಪ ತೀರಿಹೋದಾಗ ಈ ಮಾತೆ ಹೊಲ ಗದ್ದೆಗಳಲ್ಲಿ ಕೂಲಿ ಕೆಲಸ ಮಾಡಿ ತನ್ನ ಮಕ್ಕಳ ಆರೈಕೆಯಲ್ಲಿ ತೊಡಗಿಕೊಂಡಳು. ಶ್ರೀಶೈಲದ ಕನಸು ಕನಸಾಗಿಯೇ ಉಳಿದಿತ್ತು. ಈ ಇಳಿ ವಯಸ್ಸಿನಲ್ಲೂ ತನ್ನ ಕೈಗೂಡದ ಶ್ರೀಶೈಲ ಯಾತ್ರೆಯ ಕುರಿತು ಈ ಒಳಗೊಳಗೆ ಮರುಗುತ್ತಲೇ ಇದ್ದಳು. ಇನ್ನು ಇದೆಂದೂ ಈಡೇರದ ಕನಸು ಎಂದರಿತ ಅವಳು ತನ್ನ ಹಿರಿಯ ಮಗ ಅಣ್ಣಾರಾಯನನ್ನು ಕರೆದು ಶ್ರೀಶೈಲ ಮಲ್ಲಿಕಾರ್ಜುನ ದರ್ಶನವಂತೂ ನನ್ನಿಂದಾಗಲಿಲ್ಲ. ಆದರೆ ನನ್ನಾಸೆಯನ್ನು ನಿನ್ನ ಮುಖಾಂತರ ಪೂರೈಸಿಕೊಳ್ಳುವೆ. ಊರವರೊಂದಿಗೆ ಶ್ರೀಶೈಲ ಯಾತ್ರೆಗೆ ಹೋಗಿ ಬಾ ಎಂದಳು.
ತಾಯಿಗೆ ಆಸೆ ಪೂರೈಕೆ: ತಾಯಿಯ ಮನದಿಂಗಿತವನ್ನು ಅರ್ಥೈಸಿಕೊಂಡಿದ್ದ ಅಣ್ಣಾರಾಯ ತಾಯಿಯ ಕೊನೆಯಾಸೆಯನ್ನು ಪೂರೈಸಲು ಟೊಂಕಕಟ್ಟಿ ನಿಂತ. ಎಷ್ಟೇ ಕಷ್ಟಗಳೂ ಬಂದರೂ ತನ್ನ ತಾಯಿಯನ್ನು ತನ್ನೊಂದಿಗೆ ಶ್ರೀಶೈಲಕ್ಕೆ ಕರೆದೊಯ್ಯಲೇಬೇಕೆಂದು ಮಾ.28 ರಂದು ತಡವಲಗಾದಿಂದ ಸುಮಾರು 800 ಕಿ.ಮೀ. ದೂರವಿರುವ ಶ್ರೀಶೈಲಕ್ಕೆ ತನ್ನೂರ ಜೊತೆಗಾರರೊಂದಿಗೆ ತಾಯಿಯನ್ನು ಹೆಗಲ ಮೇಲೆ ಕುಳ್ಳಿರಿಸಿಕೊಂಡು ಹೊರಟಿದ್ದಾರೆ.  ನಿತ್ಯ ಸುಮಾರು 60 ಕಿ.ಮೀ. ಪ್ರಯಾಣಿಸಿ, ಯುಗಾದಿಯಂದು ಶ್ರೀಶೈಲ ತಲುಪಿಸುವ ನಿರೀಕ್ಷೆ ಇದೆ.
-ಇಂದುಶೇಖರ ಮಣೂರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com