ಬಸವನಬಾಗೇವಾಡಿ: ತಾಲೂಕಿನ ಕೂಡಗಿ ವಿದ್ಯುತ್ ಸ್ಥಾವರ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಸೋಮವಾರ ಮುತ್ತಗಿ ಕ್ರಾಸಿನ ರಾ.ಹೆ.50ರಲ್ಲಿ ಸುಮಾರು ನಾಲ್ಕೂವರೆ ಗಂಟೆಗಳ ಕಾಲ ರಸ್ತೆ ತಡೆ ನಡೆಸಿದರು. ಮುಂಜಾನೆ 11.15ಕ್ಕೆ ಆರಂಭವಾದ ಪ್ರತಿಭಟನೆ ಮಧ್ಯಾಹ್ನ 3.25ರ ತನಕವೂ ಶಾಂತಿಯುತವಾಗಿ ನಡೆಯಿತು. ಚಳವಳಿಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ಪಾಲ್ಗೊಂಡಿದ್ದರು.
ಪ್ರತಿಭಟನೆಯನ್ನುದ್ದೇಶಿಸಿ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ ಸೇರಿದಂತೆ ಅನೇಕರು ಮಾತನಾಡಿ, ಪರಿಸರಕ್ಕೆ ಮಾರಕವಾಗಿರುವ ಎನ್ಟಿಪಿಸಿ ವಿದ್ಯುತ್ ಸ್ಥಾವರ ಯಾವುದೇ ಕಾರಣಕ್ಕೂ ನಿರ್ಮಾಣ ಮಾಡಬಾರದು. ಸರ್ಕಾರ ಯೋಜನೆ ಕೈಬಿಡುವ ತನಕವೂ ಹೋರಾಟ ಮುಂದುವರಿಯಲಿದೆ. ಇಂಧನ ಸಚಿವ ಡಿ.ಕೆ. ಶಿವಕುಮಾರ ಹೊರಗಿನ ರೈತರು ಬಂದು ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ. ಇಲ್ಲಿನ ರೈತರೇ ಹೋರಾಟ ಮಾಡುತ್ತಿದ್ದಾರೆ. ನಾವು ಅವರಿಗೆ ಬೆಂಬಲವಾಗಿ ನಿಂತಿದ್ದೇವೆ ಎಂದರು. ಕೂಡಗಿ ಬಳಿ ಗೋಲಿಬಾರ್ ನಡೆದು 29 ದಿನಗಳಾದರೂ ಈ ಭಾಗದ ಜನಪ್ರತಿನಿಧಿಗಳು ಇನ್ನೂ ಮೌನವಾಗಿದ್ದಾರೆ. ಸ್ಥಾವರ ಸ್ಥಗಿತಕ್ಕೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದರು. ಅಭಿವೃದ್ಧಿ ಯೋಜನೆಗಳಿಗೆ, ವಿದ್ಯುತ್ ಉತ್ಪಾದನೆಗೆ ರೈತರು ಎಂದೂ ವಿರೋಧಿಸಿಲ್ಲ. ಪರಿಸರಕ್ಕೆ ಮಾರಕವಾಗುವ ಯೋಜನೆ ಬೇಡವಷ್ಟೆ ಎಂದು ಆಗ್ರಹಿಸಿದರು. ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣದ ವಿರುದ್ಧ ಹೋರಾಟ ನಡೆಸುತ್ತಿರುವ ಚಳುವಳಿಗಾರರ ಮೇಲೆ ಹೂಡಿರುವ ಎಲ್ಲ ಪ್ರಕರಣಗಳನ್ನು ಸರ್ಕಾರ ಕೂಡಲೇ ವಾಪಸ್ ಪಡೆಯಬೇಕು. ಕೂಡಗಿ ವಿದ್ಯುತ್ ಸ್ಥಾವರ ಕೈಬಿಟ್ಟು ಈ ಉದ್ದೇಶಕ್ಕಾಗಿ ಸ್ವಾಧೀನ ಪಡಿಸಿಕೊಂಡುವ ಭೂಮಿಯನ್ನು ಬೇರೆ ಸಾರ್ವಜನಿಕ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಪತ್ರ ಸಲ್ಲಿಸಲಾಯಿತು.
ಹಾವೇರಿ ಬಂದ್ ಯಶಸ್ವಿ
ಹಾವೇರಿ: 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಿಲ್ಲಾ ಕೇಂದ್ರ ಹಾವೇರಿಯಲ್ಲಿಯೇ ನಡೆಸಲು ಆಗ್ರಹಿಸಿ ಸೋಮವಾರ ನಡೆದ ಹಾವೇರಿ ನಗರ ಬಂದ್ ಯಶಸ್ವಿಯಾಗಿದೆ. ಜನಪ್ರತಿನಿಧಿಗಳು, ಹತ್ತಾರು ಸಂಘಟನೆಗಳ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಮುಂಜಾನೆ 8 ಗಂಟೆಯಿಂದಲೇ ನಗರದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಯಿತು. ಶಾಲಾಕಾಲೇಜುಗಳು ರಜೆ ಘೋಷಿಸಿದ್ದವು. ಸಾರಿಗೆ ಸಂಸ್ಥೆಯವರು ನಗರ ಬಸ್ ಸಂಚಾರ ಸ್ಥಗಿತಗೊಳಿಸಿದ್ದರು. ಬಸ್ ನಿಲ್ದಾಣ, ಮಾರುಕಟ್ಟೆ ಸೇರಿದಂತೆ ಇನ್ನಿತರ ಜನನಿಬಿಡ ಪ್ರದೇಶಗಳು ಬಿಕೋ ಎನ್ನುತ್ತಿದ್ದವು.
Advertisement