ಬಿಜಾಪುರ: ವಿಶ್ವಕರ್ಮ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ದೊರೆಯದಿದ್ದರೆ ಉಳಿಗಾಲವಿಲ್ಲ ಎಂದು ಅಖಿಲ ಕರ್ನಾಟಕ ರಾಜ್ಯ ವಿಶ್ವ ಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ಹೇಳಿದರು. ಬೆಳಗಾವಿಯಲ್ಲಿ ಸೆ.17ರಂದು ನಡೆಯಲಿರುವ ರಾಜ್ಯ ಮಟ್ಟದ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದ ಕಂದಗಲ್ ಹನುಮಂತರಾಯ ರಂಗ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ 35 ಲಕ್ಷಕ್ಕೂ ಹೆಚ್ಚು ವಿಶ್ವಕರ್ಮರ ಜನಸಂಖ್ಯೆ ಇದೆ. ಆದರೆ, ರಾಜಕೀಯ ಕ್ಷೇತ್ರದಲ್ಲಿ ಈ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಸಮಾಜದ ಸಂಘಟನೆ ಅತ್ಯಗತ್ಯ. ರಾಜಕೀಯ ಪ್ರಾತಿನಿಧ್ಯ ಪಡೆಯಲು ತಮ್ಮ ಸಮಾಜದ ಜನಾಂಗ ನಿರಂತರ ಹೋರಾಟ ಮಾಡಬೇಕು ಎಂದು ಕರೆ ನೀಡಿದರು. ಸೆ.17ರಂದು ಬೆಳಗಾವಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ 6ನೇ ವಿಶ್ವ ಕರ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಐದು ಜನ ಸಾಧಕರಿಗೆ ವಿಶ್ವಕರ್ಮ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಮೂವರು ವಿಶ್ವಕರ್ಮ ಸಮಾಜ ಬಾಂಧವರಿಗೆ ಹಾಗೂ ಇತರ ಸಮಾಜದ ಇಬ್ಬರು ಸಾಧಕರಿಗೆ ವಿಶ್ವಕರ್ಮ ಪ್ರಶಸ್ತಿ ನೀಡಲಾಗುವುದು. ಒಂದು ಪ್ರಶಸ್ತಿ 75,000 ಹಾಗೂ ಫಲಕ ಹೊಂದಿರುತ್ತದೆ ಎಂದರು.
Advertisement