ಕಲಘಟಗಿ: ಆರು ವರ್ಷ ಹಿಂದೆ ಮೃತಪಟ್ಟ ವ್ಯಕ್ತಿಯೊಬ್ಬ ಇಲ್ಲಿನ ಉಪನೋಂದಣಾಧಿಕಾರಿ ಕಚೇರಿಗೆ ಮೂರು ವರ್ಷ ಹಿಂದೆ ಬಂದು ಜಮೀನೊಂದರ ಖರೀದಿ ಕಾಗದಪತ್ರಗಳಿಗೆ ಸಹಿ ಮಾಡಿದ್ದಾರೆ!
ತಾಲೂಕಿನ ದೇವರಲಿಂಗೇಕೊಪ್ಪ ಗ್ರಾಮದ ರೈತ ಮಾದೇಗೌಡ ಚಂದ್ರಗೌಡ ಪಾಟೀಲ 2008ರಲ್ಲಿ ನಿಧನರಾಗಿದ್ದು, 2011ರ ನವೆಂಬರ್ 20ರಂದು ದೇವರಲಿಂಗೇಕೊಪ್ಪ ಗ್ರಾಮದ ರಿ.ಸ.ನಂ. 61ರ 1.17 ಎಕರೆ ಜಮೀನು ಖರೀದಿಗಾಗಿ ತನ್ನ ಭಾವಚಿತ್ರ ಹಾಗೂ ಹೆಬ್ಬೆರಳಿನ ಗುರುತು ನೀಡಿದ್ದಾರೆ.
ಮೃತರು ಭಾವಚಿತ್ರ ಹಾಗೂ ಹೆಬ್ಬೆರಳಿನ ಗುರುತು ನೀಡಲು ಸಾಧ್ಯವಿಲ್ಲ. ನಕಲಿ ಸಹಿ ಮಾಡಿಸಿ, ಕಾಗದಪತ್ರ ಸಿದ್ಧಪಡಿಸಲಾಗಿದೆ ಎನ್ನುವುದು ಹಿರೇಹೊನ್ನಳ್ಳಿ ಗ್ರಾಮದ ಬಸಮ್ಮ ಬಸರಿಕೊಪ್ಪ ಅವರ ಆರೋಪ. ಈ ಕುರಿತು ತನಿಖೆ ಮಾಡಬೇಕೆಂದು ಧಾರವಾಡ ಜಿಲ್ಲಾಧಿಕಾರಿಗೆ, ಲೋಕಾಯುಕ್ತರಿಗೆ ಆಕೆ ದೂರು ನೀಡಿದ್ದಾರೆ.
ಮಾದೇಗೌಡನ ಪತ್ನಿಯೂ ಹಲವು ವರ್ಷಗಳ ಹಿಂದೆಯೇ ನಿಧನರಾಗಿದ್ದಾರೆ. ಸಂಬಂಧಿಯಾದ ನಾನು ಇವರ ಪುತ್ರಿ ಶೃತಿಯನ್ನು 10 ವರ್ಷಗಳಿಂದಲೂ ನನ್ನ ಮಕ್ಕಳಂತೆ ಸಾಕುತ್ತಿದ್ದೇನೆ. ಇತ್ತೀಚೆಗೆ ಸರ್ಕಾರಿ ಇಲಾಖೆಗಳಲ್ಲಿ ದಾಖಲೆಗಳನ್ನು ಪಡೆಯುವ ವೇಳೆ ಈ ಆಕ್ರಮ ದಾಖಲೆಗಳು ಬೆಳಕಿಗೆ ಬಂದಿವೆ ಎಂದು ಆಕೆ ಹೇಳಿದ್ದಾರೆ.
Advertisement