ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ

Updated on: 

ಮುದ್ದೇಬಿಹಾಳ: ತಾಲೂಕಿನ ನೆರಬೆಂಚಿ ಗ್ರಾಮದ ಎಸ್ಸಿ ಕಾಲೋನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದರೂ ಪರಿಹಾರಕ್ಕೆ ಮುಂದಾಗದ ಪಂಚಾಯಿತಿ ಆಡಳಿತದ ಬೇಜವಾಬ್ದಾರಿತನ ಪ್ರತಿಭಟಿಸಿ ಬುಧವಾರ  ಹಿರೇಮುರಾಳ ಗ್ರಾಪಂ ಕಚೇರಿ ಮುಂದೆ ಎಸ್ಸಿ ಕಾಲೋನಿ ನಿವಾಸಿಗಳು ಖಾಲಿ ಕೊಡಗಳ ಸಮೇತ ಪ್ರತಿಭಟನೆ ನಡೆಸಿದರು.
ಹಿರೇಮುರಾಳದಿಂದ ಅಂದಾಜು 7 ಕಿ.ಮೀ ಅಂತರದಲ್ಲಿರುವ ನೆರಬೆಂಚಿ ಗ್ರಾಮದಿಂದ ಆಗಮಿಸಿ ಪಂಚಾಯಿತಿ ಕಚೇರಿ ಮುಂದೆ ಖಾಲಿ ಕೊಡ ಇಟ್ಟು ಪ್ರತಿಭಟನೆಗೆ ಮುಂದಾದ ಕಾಲೋನಿ ನಿವಾಸಿಗಳನ್ನು ಪ್ರತಿಭಟನೆ ನಡೆಸದಂತೆ ಕೆಲವರು ತಡೆಯಲು ಪ್ರಯತ್ನಿಸಿದರೂ ಫಲ ದೊರಕಲಿಲ್ಲ.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಸಿ ಕಾಲೋನಿ ಮುಖಂಡರು, ಕಳೆದ 6 ತಿಂಗಳಿಂದ ಕಾಲೋನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಈ ಬಗ್ಗೆ ಪಂಚಾಯಿತಿಯವರಿಗೆ ಹಲವು ಬಾರಿ ಹೇಳಿದರೂ ಇದುವರೆಗೂ ಸಮಸ್ಯೆ ಪರಿಹಾರವಾಗಿಲ್ಲ. ಧೋಬಿ ಘಾಟಗೆ ಬಿಡುವ ನೀರನ್ನೇ ಬಳಸುವ ಅನಿವಾರ್ಯತೆ ಬಂದೊದಗಿದೆ ಎಂದು ಅಳಲು ತೋಡಿಕೊಂಡರು.
 ಪಂಚಾಯಿತಿಯವರು ಪ್ರತಿಭಟನೆಗೆ ಸ್ಪಂದಿಸದಿದ್ದಾಗ ಆಕ್ರೋಶಗೊಂಡ ನಿವಾಸಿಗಳು ಪಂಚಾಯಿತಿಗೆ ಬೀಗ ಹಾಕಲು ಮುಂದಾದರು. ಪಿಡಿಒ, ಸಂಬಂಧಿಸಿದ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದರೂ ಅವರಿಂದ ಪ್ರತಿಕ್ರಿಯೆ ಬರಲಿಲ್ಲ. ಪಂಚಾಯಿತಿಯಲ್ಲಿರುವ ಸಿಬ್ಬಂದಿ ತಮಗೇನು ಸಂಬಂಧ ಇಲ್ಲದವರಂತೆ ನಡೆದುಕೊಂಡರು.
ಈ ಮಧ್ಯೆ ಓರ್ವ ಸಿಬ್ಬಂದಿ ನಿಮ್ಮೂರಿಗೆ ಬೋರಮಶಿನ್ ಬಂದಿದೆ, ಬೋರ ಹಾಕಲು ತಯಾರಿ ನಡೆದಿದೆ. ಇಲ್ಲೇಕೆ ಪ್ರತಿಭಟಿಸುತ್ತೀರಿ? ನಿಮ್ಮೂರಿಗೆ ಹೋಗಿ ಎಂದು ಪ್ರತಿಭಟನಾಕಾರರನ್ನು ಸ್ಥಳದಿಂದ ಕಳಿಸಲು ಪ್ರಯತ್ನಿಸಿದರೂ ಪ್ರತಿಭಟನಾಕಾರರು ಪಟ್ಟು ಸಡಿಲಿಸಲಿಲ್ಲ. ದೂರವಾಣಿ ಮೂಲಕ ತಮ್ಮೂರಿನ ಜನರನ್ನು ಸಂಪರ್ಕಿಸಿ ಅಲ್ಲಿ ಬೋರವೆಲ್ ತೋಡುತ್ತಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಂಡು ಧರಣಿ ಮುಂದುವರಿಸಿದರು.
 ಬಿಸಿಲಲ್ಲಿ ಮಕ್ಕಳು ಮಹಿಳೆಯರೊಂದಿಗೆ ಪ್ರತಿಭಟನೆ ನಡೆಸಿ ಬೇಸತ್ತ ನಿವಾಸಿಗಳು ಇನ್ನೊಂದು ಬಾರಿ ಎಲ್ಲ ಜನರನ್ನು ಕರೆದುಕೊಂಡು ಪಂಚಾಯಿತಿಗೆ ಮುಳ್ಳುಕಂಟಿ ಹಚ್ಚಿ, ಬೀಗ ಹಾಕಿ ಉಗ್ರ ಹೋರಾಟ ನಡೆಸಲು ತೀರ್ಮಾನಿಸಿ ಬಂದ ದಾರಿಗೆ ಸುಂಕವಿಲ್ಲದಂತೆ ಮರಳಿ ತಮ್ಮೂರಿಗೆ ತೆರಳಿದರು.
ಮರೆಪ್ಪ ಚಲವಾದಿ, ಬಸವರಾಜ ಚಲವಾದಿ, ಭೀಮಣ್ಣ ಚಲವಾದಿ, ಜೋಗಪ್ಪ ಚಲವಾದಿ, ಬಸಪ್ಪ ಕಟಗಿ, ಮಹಾದೇವಿ ಚಲವಾದಿ, ಮರೆವ್ವ ಚಲವಾದಿ, ನಿಂಗಮ್ಮ ಚಲವಾದಿ, ರೇಣುಕಾ ಮಾದರ, ಯಮನವ್ವ ಕಪನೂರ, ಸಂಗಮ್ಮ ಚಲವಾದಿ, ರೇಣುಕಾ ಚಲವಾದಿ, ಶರಣಮ್ಮ ಚಲವಾದಿ, ನಿಜಮ್ಮ ಮಾದರ, ಸೋಮವ್ವ ಚಲವಾದಿ, ಬಸಲಿಂಗಮ್ಮ ಚಲವಾದಿ, ಬೈಲಪ್ಪ ಚಲವಾದಿ, ಸಿದ್ದಮ್ಮ ಚಲವಾದಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com