ಬಾಲ್ಯ ವಿವಾಹ: ಕ್ರಮಕ್ಕೆ ಆಗ್ರಹ

Updated on: 

ಆಲಮೇಲ: ಸಮೀಪದ ಬಳಗಾನೂರ ಗ್ರಾಮದಲ್ಲಿ ಈಚೆಗೆ ಸಾಮೂಹಿಕ ವಿವಾಹ ಸಂದರ್ಭದಲ್ಲಿ 17 ಬಾಲ್ಯ ವಿವಾಹಗಳು ನಡೆದರೂ ಕಾರ್ಯಕ್ರಮ ಸಂಘಟಕರ ಮೇಲೆ ಮತ್ತು ಸಂಭಂದಿಸಿದ ಅಧಿಕಾರಿಗಳ ಮೇಲೆ ಯಾವುದೇ ರೀತಿಯ ಕ್ರಮ ಜರುಗಿಸದೇ ಜಿಲ್ಲಾಡಳಿತ ಮೌನಕ್ಕೆ ಶರಣಾಗಿದ್ದು ವಿಷಾದನೀಯ ಎಂದು ಜಿಲ್ಲಾ ಮಕ್ಕಳ ಸಹಾಯವಾಣಿಯ ಜಿಲ್ಲಾ ಸಂಯೋಜಕಿ ಸುನಂದಾ ತೋಳಬಂದಿ ಆರೋಪಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಂಘಟಕರು ವಿವಾಹದ ಅನುಮತಿಗಾಗಿ ತಹಸೀಲ್ದಾರರಿಗೆ 20 ದಿನಗಳ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ಆದರೆ, ಈ ಕಾರ್ಯಕ್ರಮ 6 ದಿನ ಬಾಕಿ ಇರುವಾಗ ಸಂಘಟಕರು ಅರ್ಜಿ ಸಲ್ಲಿಸಿದ್ದಾರೆ ಮತ್ತು ಅವರು ತಹಸೀಲ್ದಾರರಿಗೆ ನೀಡಿದ ವಧು-ವರರ ದಾಖಲಾತಿಗಳು ಅಸ್ಪಷ್ಟವಾಗಿದ್ದರೂ ತಹಸೀಲ್ದಾರರು ಸೂಕ್ತವಾಗಿ ಪರೀಶೀಲಿಸದೆ ಅನುಮತಿ ನೀಡಿದ್ದರಿಂದ 17 ಅಪ್ರಾಪ್ತ ಬಾಲಕಿಯರು ಹಸೆಮಣೆ ಏರಿದ್ದಾರೆ. ಸಾಮೂಹಿಕ ವಿವಾಹ ನಡೆಯುವ ಕುರಿತಾದ ಮಾಹಿತಿ ಸಿಕ್ಕ ತಕ್ಷಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಬಂಧಿಸಿದ ತಾಲೂಕು ಅಧಿಕಾರಿಗಳು ಬಾಲ್ಯವಿವಾಹ ತಡೆಯಲು ಕಾರ್ಯಪ್ರವೃತ್ತರಾಗಬಹುದಿತ್ತು. ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿಯಲ್ಲಿ ರಾಜ್ಯಮಟ್ಟದಿಂದ ಜಿಲ್ಲಾ ಮಟ್ಟ ಹಾಗೂ ತಾಲೂಕು ಮಟ್ಟದವರೆಗೆ ಬಾಲ್ಯವಿವಾಹದ ನಿಯಂತ್ರಣದ ಕುರಿತು ಸಭೆ, ಕಾರ್ಯಾಗಾರ, ತರಬೇತಿ, ಸುತ್ತೋಲೆ, ಆದೇಶಗಳಿದ್ದರೂ ಅಧಿಕಾರಿಗಳು ಈ ವಿಷಯ ತಮಗೆ ಸಂಬಂಧ ಇಲ್ಲ ಎಂದು ವರ್ತಿಸುತ್ತಿರುವುದು ಬೇಸರ ಎನಿಸಿದೆ. ಸಂಘಟಕರು ಸುಳ್ಳು ದಾಖಲಾತಿ ಸೃಷ್ಠಿಸಿ ಎಲ್ಲ ವಧುವರರ ವಯಸ್ಸು ಸರಿಯಾಗಿವೆ ಎಂದು ಅಧಿಕಾರಿಗಳ ಕಣ್ಣಿಗೆ ಮಣ್ಣೆರಚುವ ಕಾರ್ಯ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೂ ಅಪ್ರಾಪ್ತ ವಧು-ವರರಿಗೆ ಅಕ್ಷತೆ ಹಾಕಿದ್ದು ಸಂವಿಧಾನದ ಉಲ್ಲಂಘನೆಯಾಗಿದೆ. ಇಲ್ಲಿ ಬಾಲನ್ಯಾಯ ಕಾಯಿದೆ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯಿದೆ-2006, ಅಲ್ಲದೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ-2012, ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚ್ಚೇದ 18,19 ಮತ್ತು 36 ಇವುಗಳು ಉಲ್ಲಂಘನೆಯಾಗಿದ್ದು, ಜಿಲ್ಲಾಡಳಿತ ಸೂಕ್ತ ಕ್ರಮ ಜರುಗಿಸಬೇಕು ಎಂದು ಸುನಂದಾ ತೋಳಬಂದಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com