ನಿತ್ಯ ಕುಡಿವ ನೀರು: ನನಸಾಗದ ಜನರ ಕನಸು

Updated on: 

ಕನ್ನಡಪ್ರಭವಾರ್ತೆ, ಬಿಜಾಪುರ,ಮೇ.19
ಎರಡು ಹಂತದ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿದ್ದರೂ ಬಿಜಾಪುರ ನಗರಕ್ಕೆ ದಿನಂಪ್ರತಿ ಕುಡಿಯುವ ನೀರು ಪೂರೈಕೆ ಜನತೆಯ ಪಾಲಿಗೆ ಇನ್ನೂ ಹಗಲುಗನಸಾಗಿದೆ.
ಸುಮಾರು 3 ಲಕ್ಷ ಜನಸಂಖ್ಯೆ ಇರುವ ಬಿಜಾಪುರ ನಗರಕ್ಕೆ 40 ಕಿ.ಮೀ. ದೂರದ ಕೊಲ್ಹಾರ ಬಳಿ ಕೃಷ್ಣಾ ನದಿಯಿಂದ ಮೊದಲ ಹಾಗೂ ಎರಡನೇ ಹಂತದ ಯೋಜನೆಗಳಿಂದ ನೀರೆತ್ತಲಾಗುತ್ತದೆ. ಇಷ್ಟಾದರೂ ಬಿಜಾಪುರದ ಜನತೆಗೆ ದಿನಂಪ್ರತಿ ಕುಡಿಯಲು ನೀರು ದೊರೆಯುತ್ತಿಲ್ಲ. ಸಂಗ್ರಹಿಸಿದ ನೀರನ್ನು ವಾರದವರೆಗೆ ಕುಡಿಯುವ ಸ್ಥಿತಿ ಇದೆ.
ಆದಿಲ್‌ಶಾಹಿ ಕಾಲದಲ್ಲಿ ಬಿಜಾಪುರದ ಜನಸಂಖ್ಯೆ 10 ಲಕ್ಷ ಇತ್ತು ಎಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. 10 ಲಕ್ಷ ಜನಸಂಖ್ಯೆಗೆ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ಈಗ ಹಾಳು ಬಿದ್ದಿರುವ ಬಾವಿಗಳಿಂದ ನೀರು ಪೂರೈಕೆ ಮಾಡಲಾಗುತ್ತಿತ್ತು. ಆದರೆ, ಈಗ ಈ ಬಾವಿಗಳ ನೀರನ್ನು ಬಳಕೆ ಮಾಡುತ್ತಿಲ್ಲ. ಎಲ್ಲ ಬಾವಿಗಳು ಕಸದ ತೊಟ್ಟಿಯಾಗಿವೆ.
ಬಿಜಾಪುರ ನಗರದಲ್ಲಿ ಆದಿಲ್‌ಶಾಹಿ ಕಾಲದ ತಾಜ್‌ಬಾವಡಿ, ಚಂದಾಬಾವಡಿ ಸೇರಿದಂತೆ ನೂರಾರು ಬಾವಿಗಳು ಇವೆ. ಅವುಗಳಲ್ಲಿ ಹಲವಾರು ಬಾವಿಗಳನ್ನು ಕಸ ಚೆಲ್ಲಿ ಹಾಳುಗೆಡವಲಾಗಿದೆ. ಇನ್ನು ಕೆಲ ಬಾವಿಗಳನ್ನು ಸಂಪೂರ್ಣವಾಗಿ ಕಲ್ಲು, ಮಣ್ಣಿನಿಂದ ಮುಚ್ಚಿ ಬಾವಿಗಳ ಕುರುಹು ಸಿಗದಂತೆ ಮಾಡಲಾಗಿದೆ.
ತಾಜ್‌ಬಾವಡಿ, ಚಂದಾಬಾವಡಿ ಅತ್ಯಂತ ದೊಡ್ಡ ಬಾವಿಗಳಾಗಿದ್ದು, ಎಂತಹ ಬೇಸಿಗೆ ಬಂದರೂ ಈ ಬಾವಿಗಳ ನೀರು ಬತ್ತಿಲ್ಲ. ತಾಜ್‌ಬಾವಡಿ 100್ಢ120 ಉದ್ದಳತೆ ಹೊಂದಿದೆ. 52 ಅಡಿ ಆಳವಿದೆ. ಕಳೆದ ಹಲವಾರು ವರ್ಷಗಳಿಂದ ಈ ಬಾವಿಯಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಗಣೇಶ ವಿಗ್ರಹಗಳನ್ನು ವಿಸರ್ಜನೆ ಮಾಡಲಾಗುತ್ತಿದೆ. ಬಾವಿಯ ಸೆಲೆಗಳು ಬತ್ತಿವೆಯಾದರೂ ನೀರು ಮಾತ್ರ ಕಡಮೆಯಾಗದೇ ಹಾಗೇ ಇದೆ.
ಸುಮಾರು 40 ವರ್ಷಗಳ ಹಿಂದೆ ಬಿಜಾಪುರ ನಗರದ ತಾಜ್‌ಬಾವಡಿ, ಚಂದಾಬಾವಡಿ, ಇಬ್ರಾಹಿಂಪುರ ಬಾವಡಿ ನೀರನ್ನು ಕುಡಿಯಲು ಬಳಸಲಾಗುತ್ತಿತ್ತು. 20 ವರ್ಷಗಳಿಂದೀಚೆಗೆ ಈ ಬಾವಿಯಲ್ಲಿ ಕಸ, ಕಡ್ಡಿ ಹಾಕಿ ನೀರನ್ನು ಮಲಿನಗೊಳಿಸಲಾಗಿದೆ. ಬಾವಿಯ ಅಕ್ಕಪಕ್ಕದಲ್ಲಿ ಅತಿಕ್ರಮಣ ಮಾಡಿಕೊಳ್ಳಲಾಗಿದೆ.
ಇದು ಒಂದು ಬಾವಿಯ ಕಥೆಯಲ್ಲ. ನಗರದಲ್ಲಿ ಇರುವ ನೂರಾರು ಬಾವಿಗಳದ್ದು ಇದೇ ಕಥೆಯಾಗಿದೆ. ಅಲಿಖಾನ ಬಾವಡಿ, ಇಲಾನ ಬಾವಡಿ, ಅಧೇರಿ ಬಾವಡಿ, ಗುಮ್ಮಟ ಬಾವಡಿ, ದೌಲತಕೋಟೆ ಬಾವಡಿ, ನವಾಬ್ ಬಾವಡಿ, ನಾಲಬಂದ ಬಾವಡಿ, ಗುಂಡಬಾವಡಿ, ಸೋನಾರ ಬಾವಡಿ, ಗ್ಯಾಂಗ್‌ಬಾವಡಿ ಮುಂತಾದ ಬಾವಿಗಳು ಈಗ ಕಸದ ತೊಟ್ಟಿಗಳಾಗಿವೆ.
ಬಿಜಾಪುರದ ತಾಜ್‌ಬಾವಡಿಯನ್ನು ಎರಡು ಬಾರಿ ಸ್ವಚ್ಛಗೊಳಿಸಿದ್ದನ್ನು ಹೊರತುಪಡಿಸಿದರೆ ಆದಿಲ್‌ಶಾಹಿ ಕಾಲದ ಯಾವುದೇ ಬಾವಿಗಳನ್ನು ಸ್ವಚ್ಛಗೊಳಿಸಲು ಸರ್ಕಾರ ಇನ್ನೂವರೆಗೆ ಮುಂದಾಗಿಲ್ಲ.
ಶೇ. 40ರಷ್ಟು ನೀರಿನ ಸಮಸ್ಯೆ ಪರಿಹಾರ: ಬಿಜಾಪುರದಲ್ಲಿನ ಆದಿಲ್‌ಶಾಹಿ ಕಾಲದ ಬಾವಿಗಳನ್ನು ಸ್ವಚ್ಛಗೊಳಿಸಿ ನೀರನ್ನು ಮರು ಬಳಕೆ ಮಾಡಲು ಸರ್ಕಾರ ಕ್ರಮ ಕೈಗೊಂಡರೆ ಬಿಜಾಪುರದ ಶೇ. 40ರಷ್ಟು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ. ಈ ಹಿಂದೆ ಜನರು ಆದಿಲ್‌ಶಾಹಿ ಬಾವಿಗಳ ನೀರು ಕುಡಿಯುತ್ತಿದ್ದರು.  ಆದರೆ ಈಗ ಬಾವಿಯಲ್ಲಿ ಕಸ, ಕಡ್ಡಿ ಚೆಲ್ಲಲಾಗುತ್ತದೆ. ಅದನ್ನು ಪರಿಣಾಮಕಾರಿಯಾಗಿ ತಡೆಗಟ್ಟಬೇಕು. ಬಾವಿಯಲ್ಲಿನ ಕಲುಷಿತ ನೀರು ಸ್ವಚ್ಛಗೊಳಿಸಿ ಮರು ಬಳಕೆಗೆ ಸರ್ಕಾರ ಯೋಚಿಸಬೇಕು ಎಂದು ಇತಿಹಾಸ ತಜ್ಞ ಡಾ. ಆನಂದ ಕುಲಕರ್ಣಿ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com