ದೇವರಹಿಪ್ಪರಗಿ: ಸಮೀಪದ ಚಟ್ಟರಕಿ ಗ್ರಾಮದಲ್ಲಿ ಗ್ರಾಮದ ಆರಾಧ್ಯ ದೈವ ಹನುಮಾನ ದೇವರ ಜಾತ್ರೆ ನಿಮಿತ್ತ ವಿವಿಧ ಗ್ರಾಮಗಳ ದೇವರ ಪಲ್ಲಕ್ಕಿ ಉತ್ಸವ ಈಚೆಗೆ ನಡೆಯಿತು.
ಜಾತ್ರೆಯ ಅಂಗವಾಗಿ ಹನುಮಾನ ಭಕ್ತ ಡಾ. ಸಂತೋಷ ಕುಲಕರ್ಣಿ ದಂಪತಿಯಿಂದ ಹೋಮ ಮತ್ತು ಬಿಜಾಪುರದ ಶಂಕರಭಟ್ ಅಗ್ನಿಹೋತ್ರಿ ಅವರ ನೇತೃತ್ವದಲ್ಲಿ ಪೂಜೆ ನಡೆಯಿತು. ಗ್ರಾಮದ ಬೀರಲಿಂಗೇಶ್ವರ ಹಾಗೂ ಹನುಮಾನ ದೇವರ ಪಲ್ಲಕ್ಕಿ ಮೆರವಣಿಗೆ ಜರುಗಿತು. ಪುರವಂತರ ಮೆರವಣಿಗೆ ಆಕರ್ಷಕವಾಗಿ ಕಂಡು ಬಂತು. ಜಾತ್ರೆಗೆ ಆಗಮಿಸಿದ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಇದಕ್ಕೂ ಮುಂಚಿನ ರಾತ್ರಿ ಮುದ್ದೇಬಿಹಾಳ ತಾಲೂಕಿನ ಗುಳಬಾಳ ಹಾಗೂ ಇಂಡಿ ತಾಲೂಕಿನ ಸಾಲೋಟಗಿ ಭಜನಾ ಮಂಡಳದಿಂದ ಜಾನಪದ ಹಾಡುಗಳ ಕಾರ್ಯಕ್ರಮ ನಡೆಯಿತು.
ಕರಿದೇವರ ಜಾತ್ರೆ: ಕಡ್ಲೆವಾಡ ಪಿಸಿ ಗ್ರಾಮದಲ್ಲಿ ಕರಿದೇವರ ಜಾತ್ರೆ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು.
ಮಂಗಳವಾರ ಬೆಳಗ್ಗೆ ಗ್ರಾಮದ ಕರಿದೇವರ ಪಲ್ಲಕ್ಕಿ, ಬಸವೇಶ್ವರ ಪಲ್ಲಕ್ಕಿ, ಚಿಕ್ಕರೂಗಿಯ ಗುತ್ತಿಲಿಂಗೇಶ್ವರ, ಬಮ್ಮನಜೋಗಿಯ ಬೀರಲೀಂಗೇಶ್ವರ,ಚಟ್ಟರಕಿ ಬೀರದೇವರ ಪಲ್ಲಕ್ಕಿ ಹೀಗೆ ಐದೂರು ಗ್ರಾಮಗಳ ಪಲ್ಲಕ್ಕಿ ಉತ್ಸವ ಪ್ರಮುಖ ಬೀದಿಗಳಲ್ಲಿ ನಡೆಯಿತು.
ಪಲ್ಲಕ್ಕಿಗಳೊಂದಿಗೆ ಭಕ್ತಿಯಿಂದ ಕುರಿಗಳನ್ನು ಸುತ್ತು ಹಾಕಿಸಿ ಪೂಜೆ ಸಲ್ಲಿಸುವ ಮೂಲಕ ಕರಿದೇವರ ದೇವಸ್ಥಾನಕ್ಕೆ ಕರೆ ತಂದ ನಂತರ ಮೆರವಣಿಗೆ, ಉತ್ಸವ ನಡೆಯುತ್ತದೆ. ಗ್ರಾಮದ ರೈತರು ತಮ್ಮ ಮನೆಯಲ್ಲಿನ ಕುರಿಗಳನ್ನು ಸ್ನಾನ ಮಾಡಿಸಿ ಪ್ರತಿಯೊಂದು ಕುರಿಯನ್ನು ಅಲಂಕರಿಸಿ ದೇವಸ್ಥಾನದ ಸುತ್ತು ಪ್ರದಕ್ಷಿಣೆ ಮಾಡಿಸಲಾಗುತ್ತದೆ.
ಸಿಇಟಿ ಪರೀಕ್ಷೆ ನಾಳೆಯಿಂದ
ಬಿಜಾಪುರ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಸೀಟುಗಳಿಗಾಗಿ ಮೇ 1 ಮತ್ತು 2ರಂದು ಬಿಜಾಪುರ ನಗರದ 9 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ಕೇಂದ್ರಗಳಲ್ಲಿ ಮೊಬೈಲ್, ವಾಯರಲೆಸ್ ಸೆಟ್, ಮಾರ್ಕರ್, ಕ್ಯಾಲಕುಲೇಟರ್, ಲಾಪ್ಟಾಪ್ ಸೇರಿಂದಂತೆ ಇತರೆ ಸಾಮಗ್ರಿ ತರುವುದನ್ನು ನಿಷೇಧಿಸಲಾಗಿದೆ.
ಬಿಜಾಪುರ ನಗರದ ಬಾಲಕರ ಸರ್ಕಾರಿ ಪಿಯು ಕಾಲೇಜ್, ಪಿಡಿಜೆ ಪಿಯು ಕಾಲೇಜ್, ಎಸ್.ಬಿ.ಆರ್ಟ್ಸ್ ಮತ್ತು ಕೆಸಿಪಿ ವಿಜ್ಞಾನ ಕಾಲೇಜ್, ಬಿಡಿಇ ಪಿಯು ಕಾಲೇಜ್, ಬಾಲಕಿಯರ ಪಿಯು ಕಾಲೇಜ್, ಎಸ್.ಎಸ್.ಪಿಯು ಕಾಲೇಜ್, ಶಾಂತಿನಿಕೇತನ ಪಿಯು ಕಾಲೇಜ್, ಸಿಕ್ಯಾಬ್ ಮಹಿಳಾ ಪಿಯು ಕಾಲೇಜ್, ವಿ.ಬಿ.ದರಬಾರ ಪಿಯು ಕಾಲೇಜ್ಗಳಲ್ಲಿ ಸಿಇಟಿ ಪರೀಕ್ಷೆ ನಡೆಯಲಿದೆ.
ಪರೀಕ್ಷಾರ್ಥಿಗಳಿಗೆ ಪ್ರಾಧಿಕಾರದಿಂದ ಪ್ರವೇಶ ಪತ್ರಗಳನ್ನು ಕಳುಹಿಸಲಾಗಿದೆ.
ಒಂದೊಮ್ಮೆ ಪ್ರವೇಶ ಪತ್ರ ತಲುಪದಿದ್ದಲ್ಲಿ ಢಿಢಿಢಿ.್ಞಜಛ.್ಞಛ್ಠ.ಟ್ಝ್ಛಿ.್ಝಟಿವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಂಡು, ತಮ್ಮ ಇತ್ತೀಚಿನ ಭಾವಚಿತ್ರವನ್ನು ಪ್ರವೇಶ ಪತ್ರಕ್ಕೆ ಅಂಟಿಸಿಕೊಂಡು ಪರೀಕ್ಷೆಗೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗಾಗಿ 08352251289 ಇಲ್ಲಿಗೆ ಸಂಪರ್ಕಿಸಲು ಕೋರಿದೆ.
ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ಐಪಿಸಿ ಕಲಂ 144ರ ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪರೀಕ್ಷೆಯ ಸಮಯದಲ್ಲಿ ಪರೀಕ್ಷಾ ಕೇಂದ್ರದ ಸುತ್ತಲೂ ಇರುವ ಝರಾಕ್ಸ್ ಅಂಗಡಿಗಳನ್ನು ಬಂದ್ ಮಾಡುವಂತೆ ಸೂಚಿಸಲಾಗಿದೆ.
ಕಾರ್ಮಿಕರ ದಿನಾಚರಣೆ ನಾಳೆ
ಬಿಜಾಪುರ: ನಗರದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ವತಿಯಿಂದ ಮೇ 1ರಂದು ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಅನೌಪಚಾರಿಕ ಶಿಕ್ಷಣ ಸಂಸ್ಥೆ, ಸ್ಲಂ ಅಭಿವೃದ್ಧಿ ಕೇಂದ್ರ, ನಗರ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಯೂನಿಯನ್, ಗೃಹ ಕಾರ್ಮಿಕರ ಯೂನಿಯನ್, ಮಹಾತ್ಮಾ ಗಾಂಧಿ ಅಟೋ ಚಾಲಕರ ಯೂನಿಯನ್ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಮಿಕ ದಿನಾಚರಣೆ ಆಯೋಜಿಸಲಾಗಿದೆ.
ಮೇ 1ರಂದು ಬೆಳಗ್ಗೆ 10.30ಕ್ಕೆ ನಗರದ ಸಿದ್ದೇಶ್ವರ ದೇವಸ್ಥಾನದಿಂದ ವಿವಿಧೆಡೆ ಸಂಚರಿಸುವ ಜಾಥಾದಲ್ಲಿ ಕಾರ್ಮಿಕರು ಭಾಗವಹಿಸಲಿದ್ದಾರೆ. ಅನಂತರ ಗಾಂಧಿ ಚೌಕ ಬಳಿ ಇರುವ ಸಂತ ಅನ್ನಮ್ಮ ದೇವಾಲಯ ತಲುಪುವುದು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ ನಿವಾಸ ಸೆಪಟ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಅನೌಪಚಾರಿಕ ಶಿಕ್ಷಣ ಸಂಸ್ಥೆ ನಿರ್ದೇಶಕ ಫಾದರ್ ಜೆರಾಲ್ಡ್ ಡಿಸೋಜ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜಿಲ್ಲಾ ಕಾರ್ಮಿಕ ಅಧಿಕಾರಿ ಎ.ಎಸ್. ಪಾಟೀಲ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಎಸ್.ಯು.ಸಿ.ಆಯ್. ಸಂಚಾಲಕ ಭಗವಾನರೆಡ್ಡಿ ಉಪನ್ಯಾಸ ನೀಡಲಿದ್ದಾರೆ. ಕಾರ್ಮಿಕರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.