-ಅಂಶಿ ಪ್ರಸನ್ನಕುಮಾರ್
ಕ.ಪ್ರ.ವಾರ್ತೆ ಮೈಸೂರು ಡಿ.19
ಸುದೀರ್ಘ ಕಾಲ ಮೈಸೂರು ಸಂಸ್ಥಾನವನ್ನು ಆಳಿದ ಯದುವಂಶಸ್ಥರು ಯುದ್ಧ ಮಾಡಿದ್ದಾರೆ, ಶತ್ರುಗಳ ಜೊತೆ ಸಂಧಿ ಮಾಡಿಕೊಂಡಿದ್ದಾರೆ. ಕೆಲವು ಬಾರಿ ಕಪ್ಪಕಾಣಿಕೆಯನ್ನು ಸಲ್ಲಿಸಿರುವುದು ಸಹ ಇತಿಹಾಸವನ್ನು ಅವಲೋಕಿಸಿದಾಗ ಕಂಡು ಬರುತ್ತದೆ.
ಯದುರಾಯ ಮತ್ತು ಕೃಷ್ಣರಾಯ ಸಹೋದರರು ಉತ್ತರದ ದ್ವಾರಕಾ ಪಟ್ಟಣದ ರಾಜದೇವನ ಮಕ್ಕಳು. ಅಂದಿನ ಯಾದವಗಿರಿಗೆ (ಇಂದಿನ ಮೇಲುಕೋಟೆ) ಮನೆ ದೇವರಾದ ನಾರಾಯಣಸ್ವಾಮಿಯ ಸೇವೆಗೆ ಬಂದು, ನಂತರ ಮೈಸೂರು ತಲುಪಿದರು. ಮೈಸೂರಿನ ಪಾಳೇಗಾರರಾಗಿದ್ದ ಚಾಮರಾಜರು ನಿಧನರಾಗಿದ್ದರು. ಅವರಿಗೆ ಪತ್ನಿ, ಒಬ್ಬ ಪುತ್ರಿ ಇದ್ದರು. ರಾಜಕುಮಾರಿ ದೇವರಾಜಮ್ಮಣ್ಣಿಯನ್ನು ಮಹಾರಾಣಿ ಯದುರಾಯರಿಗೆ ಕೊಟ್ಟು ವಿವಾಹ ಮಾಡಿ, ರಾಜ್ಯಪಟ್ಟ ಕಟ್ಟಿದರು.
ತಿಮ್ಮರಾಜ ಒಡೆಯರು ಮೈಸೂರು ಸುತ್ತಮುತ್ತಲಿನ ಪಾಳೇಗಾರರ ವಿರುದ್ಧ ಹೋರಾಡಿ ಗೆದ್ದರು. ಬೋಳ ಚಾಮರಾಜ ಒಡೆಯರು ತೊರೆಮಾವಿನಹಳ್ಳಿಯ ವೆಂಕಟಾದ್ರಿ ನಾಯಕನನ್ನು ಸೋಲಿಸಿದರು.
ಬೆಟ್ಟದ ಚಾಮರಾಜ ಒಡೆಯರು ಮಧುರೆ, ಪಿರಿಯಾಪಟ್ಟಣ, ಕೊತ್ತಗಾಲದ ಪಾಳೇಗಾರರಿಂದ ಕಪ್ಪ ಪಡೆಯುತ್ತಿದ್ದರು. ರಣಧೀರ ಕಂಠೀರವ ಜಟ್ಟಿಗಳ ವಿರುದ್ಧ ಹೋರಾಡಿ ಗೆದ್ದರು. ಬಿಜಾಪುರದ ರಣದುಲ್ಲಾ ಖಾನ್ ಜೊತೆ ಸಂಧಿ ಮಾಡಿಕೊಂಡರು. ದೊಡ್ಡ ದೇವರಾಜ ಒಡೆಯರು ಬಿದನೂರಿನ ಇಕ್ಕೇರಿ ಶಿವಪ್ಪನಾಯಕ, ಟಿ.ನರಸೀಪುರದ ಲಕ್ಷ್ಮಪ್ಪನಾಯಕ, ಕೆಳದಿಯ ಶಿವಪ್ಪನಾಯಕರನ್ನು ಸೋಲಿಸಿದರು. ಚಿಕ್ಕದೇವರಾಜ ಒಡೆಯರು ಮಧುರೆಯ ಚೊಕ್ಕನಾಯಕ, ಜಯಾಜಿಘಟ, ನಿಂಬಾಳಿಘಟರನ್ನು ಸೋಲಿಸಿದರು.
ಕಂಠೀರವ ಮಹಾರಾಜ ಒಡೆಯರು ದ. ಭಾರತದ ಗವರ್ನರ್ ಮೇಲೆ ಯುದ್ಧ ಎದುರಿಸಲಾಗದೇ ಸಂಧಿ ಮಾಡಿಕೊಂಡರು. ದೊಡ್ಡ ಕೃಷ್ಣರಾಜ ಒಡೆಯರ್ ಅವರು ಪಾಳೇಗಾರರು ಒಟ್ಟಾಗಿ ಯುದ್ಧಕ್ಕೆ ಬಂದಾಗ 1 ಕೋಟಿ ಕೊಟ್ಟು ಸಂಧಾನ ಮಾಡಿಕೊಂಡರು. ನಂತರ ಮರಾಠೆಯ ಪೇಶ್ವೆ ಬಾಜಿರಾವ್ ಅವರನ್ನು ಯುದ್ಧದಲ್ಲಿ ಸೋಲಿಸಿದರು.
ಚಾಮರಾಜ ಒಡೆಯರ್ ಕಾಲದಲ್ಲಿ ದೇವರಾಜಯ್ಯ, ನಂಜರಾಜಯ್ಯ ಅವರು ಶ್ರೀರಂಗಪಟ್ಟಣ ಅರಮನೆಯನ್ನು ಪಶಪಡಿಸಿಕೊಂಡು ರಾಜ ಕುಟುಂಬದವರನ್ನು ಸೆರೆಯಲ್ಲಿಟ್ಟಿದ್ದರು. ಇಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ನಜೀಮುಲ್ಲಾ ಮುಲ್ಕ್ ದಾಳಿ ಮಾಡಿದಾಗ ಸಂಧಿ ಮಾಡಿಕೊಳ್ಳಲಾಯಿತು.
ಟಿಪ್ಪು ಫ್ರೆಂಚರ ಪರವಾಗಿದ್ದರೆ ಮೈಸೂರು ರಾಜರು ಇಂಗ್ಲಿಷರ ಪರವಾಗಿದ್ದರು. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಟಿಪ್ಪು ಮಡಿದ ನಂತರ ಮೈಸೂರು ರಾಜ್ಯಾಡಳಿತ ಮತ್ತೆ ಯದುವಂಶಸ್ಥರ ಕೈಸೇರಿತು. ಮುಂದೆ ಬಂದ ಮುಮ್ಮಡಿ ಕೃಷ್ಣರಾಜ ಒಡೆಯರ್, ಚಾಮರಾಜೇಂದ್ರ ಒಡೆಯರ್ ರಾಜ್ಯದ ಅಭಿವೃದ್ಧಿಯತ್ತ ಗಮನಹರಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಂತೂ ಜನಪರವಾಗಿ ಹತ್ತು ಹಲವು ನಿರ್ಣಯಗಳನ್ನು ಮಾಡಿ, ಇವತ್ತಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅವರ ನಂತರ ಬಂದ ಜಯಚಾಮರಾಜ ಒಡೆಯರ್ 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದರಿಂದ ರಾಜಪ್ರಮುಖರಾದರು.
ರತ್ನಖಚಿತ ಸಿಂಹಾಸನ ಬಂದ ಕಥೆ: ವಿಜಯನಗರದರಸರ ಪ್ರತಿನಿಧಿಯಾಗಿ ಶ್ರೀರಂಗರಾಯರು ಶ್ರೀರಂಗಪಟ್ಟಣದಲ್ಲಿ ಆಳ್ವಿಕೆ ನಡೆಸುತ್ತಿದ್ದರು. ರಾಜ ಒಡೆಯರ್ ಕಾಲದಲ್ಲಿ ಶ್ರೀರಂಗಪಟ್ಟಣ ಮೈಸೂರು ಅರಸರ ವಶಕ್ಕೆ ಬಂದಿತು. ಶ್ರೀರಂಗರಾಯರು ತಲಕಾಡು ಬಳಿಯ ಮಾಲಂಗಿಗೆ ಹೋದರೆ, ಮೈಸೂರು ರಾಜಧಾನಿ ಶ್ರೀರಂಗಪಟ್ಟಣಕ್ಕೆ ಸ್ಥಳಾಂತರವಾಯಿತು. ಆಗ ವಿಜಯನಗರ ಪ್ರತಿನಿಧಿಯ ರತ್ನ ಸಿಂಹಾಸನದಲ್ಲಿ ಅರಸರು ಆಸೀನರಾದರು. ಇವತ್ತಿಗೂ ಮೈಸೂರು ಅರಮನೆಯಲ್ಲಿ ಇರುವುದು ಇದೇ ಸಿಂಹಾಸನ. ವಯೋವೃದ್ಧರಾಗಿದ್ದ ಶ್ರೀರಂಗರಾಯರು ಸ್ವಯಂ ಮೈಸೂರು ಅರಸರಿಗೆ ರಾಜ್ಯಭಾರ ವಹಿಸಿದರು ಎಂದು ಒಂದು ಕಡೆ ಹೇಳಿದರೆ ಮತ್ತೊಂದು ಕಡೆ ರಾಜ ಒಡೆಯರು ಶ್ರೀರಂಗರಾಯರ ಮೇಲೆ ಯುದ್ಧ ಮಾಡಿ, ಓಡಿಸಿದರು ಎನ್ನಲಾಗುತ್ತದೆ. ಶ್ರೀರಂಗರಾಯರ ಪತ್ನಿ ಅಲಮೇಲಮ್ಮ ಅವರಿಂದ ಬಲವಂತವಾಗಿ ಚಿನ್ನಾಭರಣ ಕಸಿದುಕೊಂಡರು ಎಂಬ ಕಾರಣಕ್ಕಾಗಿ ಆಕೆ ತಲಕಾಡು ಮರಳಾಗಿ, ಮಾಲಂಗಿ ಮಡುವಾಗಿ ಮೈಸೂರು ಅರಸರಿಗೆ ಮಕ್ಕಳಾಗದಿರಲಿ ಎಂದು ಶಾಪ ಹಾಕಿದರು ಎಂಬ ಪ್ರತೀತಿ ಇದೆ.
Advertisement