ಭೂ ಹಗರಣ ಸಿಬಿಐಗೆ ವಹಿಸಿ

Updated on: 

ಮೈಸೂರು: ಮೈಸೂರು ನಗರಕ್ಕೆ ಹೊಂದಿಕೊಂಡತ್ತಿರುವ ಚಾಮುಂಡಿಬೆಟ್ಟದ ತಪ್ಪಲಿನ ಸುಮಾರು 2,000 ಎಕರೆ ಜಮೀನು ಸರ್ಕಾರದ್ದೆಂದು ಪ್ರಾದೇಶಿಕ ಆಯುಕ್ತರು ಸರ್ಕಾರಕ್ಕೆ ವರದಿ ನೀಡಿದ್ದು, ಈ ಜಮೀನನ್ನು ಕಬಳಿಸಲು ಹೊಂಚು ಹಾಕಿದ್ದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಈ ಕೂಡಲೇ ಸದರಿ ಪ್ರಕರಣವನ್ನು ಸಿಬಿಐ ಅಥವಾ ಲೋಕಾಯುಕ್ತರಿಗೆ ವಹಿಸುವಂತೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ್ ಸರ್ಕಾರವನ್ನು ಒತ್ತಾಯಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಷ್ಟು ದೊಡ್ಡ ಪ್ರಮಾಣದ ಜಾಗ ಸರ್ಕಾರದ್ದಲ್ಲ, ಖಾಸಗಿಯವರದ್ದು ಎಂದು ದಾಖಲೆ ಮಾಡಲು ಮುಂದಾಗಿದ್ದವರಲ್ಲಿ ಹಿಂದಿನ ಜಿಲ್ಲಾಧಿಕಾರಿ ಸೇರಿದಂತೆ 38 ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇವರ ಮೇಲೆ ಪ್ರಮುಖ ರಾಜಕಾರಣಿಗಳು ಪ್ರಭಾವ ಬೀರಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ನಾನು ಹಿಂದೆ ಅನುಮಾನ ಪಟ್ಟಂತೆ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಮೇಲೆ ಅನುಮಾನದ ಪಿಶಾಚಿ ಇದೆ ಎಂದು ಪುನರುಚ್ಚರಿಸಿದರು.
10 ಸಾವಿರ ಕೋಟಿ ಬೆಲೆ: ಸುಮಾರು 3,600 ಕೋಟಿ ಹೆಲಿಕಾಪ್ಟರ್ ಖರೀದಿ ಹಗರಣವನ್ನು ಸಿಬಿಐಗೆ ವಹಿಸಿರುವಾಗ, 10 ಸಾವಿರ ಕೋಟಿ ಬೆಲೆ ಬಾಳುವ ಚಾಮುಂಡಿಬೆಟ್ಟದ ತಪ್ಪಲಿನ ಭೂಕಬಳಿಕೆ ಪ್ರಕರಣವನ್ನು ಏಕೆ ಸಿಬಿಐಗೆ ವಹಿಸುತ್ತಿಲ್ಲ ಎಂದು ಅವರು ಪ್ರಶ್ನಿಸಿದರು. ಈ ವಿಚಾರದಲ್ಲಿ ರಾಜ್ಯದ ಎಲ್ಲಾ ಪಕ್ಷಗಳು ಮೌನವಹಿಸಿವೆ. ಸಾವಿರಾರು ಕೋಟಿ ರು. ಮೌಲ್ಯದ ಜಮೀನು ಉಳಿಸಲು ಎಲ್ಲರೂ ಮುಂದಾಗಬೇಕು. ಈ ಅವ್ಯವಹಾರದಲ್ಲಿ ಅಡಗಿ ಕುಳಿತಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಲು ಸಿಬಿಐ ಅಥವಾ ಲೋಕಾಯುಕ್ತಕ್ಕೆ ಒಳಪಡಿಸಿ ಕ್ರಿಮಿನಲ್ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಪ್ರಾದೇಶಿಕ ಆಯುಕ್ತರು ತಮ್ಮ ವರದಿಯಲ್ಲಿ ಈ ಭೂಮಿಯನ್ನು ಅಕ್ರಮವಾಗಿ ಪಡೆದಿರುವವರ ಬಗ್ಗೆಯಾಗಲಿ, ಜಿಲ್ಲಾಧಿಕಾರಿ ಅಕ್ರಮ ಎಸಗಲು ಕಾರಣರಾಗಿರುವ ಪ್ರೇರಕ ಶಕ್ತಿಗಳ ಬಗ್ಗೆಯಾಗಲಿ, ಯಾವ ತನಿಖೆಯನ್ನು ನಡೆಸಿರುವುದು ಕಂಡುಬಂದಿಲ್ಲ. ಬಹುಶಃ ಇಂತಹ ತನಿಖೆ ಅವರ ವ್ಯಾಪ್ತಿಗೆ ಮೀರಿದ ವಿಷಯವಾಗಿರಬಹುದು. ಸಚಿವ ಎಸ್.ಎ. ರಾಮದಾಸ್ ಜಿಲ್ಲಾಧಿಕಾರಿಯನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ. ಈ ಪ್ರಕರಣ ಬೆಳಕಿಗೆ ಬಂದ ನಂತರವೂ ವಸ್ತ್ರದ್ ಅವರನ್ನು ಜಿಲ್ಲಾಧಿಕಾರಿ ಸ್ಥಾನದಲ್ಲಿ ಮುಂದುವರಿಸಿ ಕಡತಗಳು ನಾಶವಾಗಲು ಕಾರಣರಾಗಿದ್ದಾರೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಅರ್ಜಿಗಳನ್ನು ಕಡತದಿಂದ ಮಾಯವಾಗಿಸಿದ್ದಾರೆ ಎಂದು ದೂರಿದರು.

ಧನಂಜಯಕುಮಾರ್ ವಿರುದ್ಧ ಗೋಮ ಕಿಡಿ
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ಜೆಡಿಎಸ್‌ಗೆ ಹೋಗುತ್ತಾರೆ ಎಂದಿರುವ ಕೆಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ವಿ. ಧನಂಜಯಕುಮಾರ್ ಹೇಳಿಕೆಗೆ ಬಿಜೆಪಿ ವಕ್ತಾರ ಗೋ. ಮಧುಸೂದನ್ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಧನಂಜಯಕುಮಾರ್ ಈ ರೀತಿ ಸುಳ್ಳು ಹೇಳುವ ಮೂಲಕ ಬೇರೆಯವರ ಚಾರಿತ್ರ್ಯ ಹರಣ ಮಾಡುತ್ತಿದ್ದಾರೆ. ಮರ್ಯಾದಸ್ಥರು ಮಾಡುವ ರಾಜಕರಣ ಇದಲ್ಲ. ಈ ಹಿಂದಿನ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತಮಗೆ ಟಿಕೆಟ್ ನೀಡದೆ ಸದಾನಂದಗೌಡರಿಗೆ ನೀಡಿದರು ಎಂಬ ಸೇಡಿನಿಂದ ಈ ರೀತಿ ಮಾತನಾಡುತ್ತಿದ್ದಾರೆ. ಡಿವಿಎಸ್ ಬಿಜೆಪಿಯ ಒಬ್ಬ ನಿಷ್ಠಾವಂತ ನಾಯಕ ಎಂದು ಗೋಮ ಸಮರ್ಥಿಸಿಕೊಂಡರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿಕೊಂಡಂತೆ, ನಾನು ಇಲ್ಲಿಯವರೆಗೆ ರಾಜಕಾರಣಿಯಾಗಿ ಇಷ್ಟು ದೊಡ್ಡ ಮಟ್ಟಕ್ಕೆ ಬೆಳದಿದ್ದೇನೆ ಎಂದರೆ ನಾನು ಯಾರ ಚಾರಿತ್ರ್ಯವನ್ನು ಹರಣ ಮಾಡದಿರುವುದರಿಂದ ಎಂಬ ಮಾತನ್ನು ನಾವು ಇಂದಿಗೂ ನೆನೆದುಕೊಳ್ಳಬೇಕು. ಅಂತಹವರ ಕೇಂದ್ರ ಸಂಪುಟದಲ್ಲಿ ಸಚಿವರಾಗಿದ್ದ ಧನಂಜಯ್‌ಕುಮಾರ್ ನೆನೆದುಕೊಳ್ಳಬೇಕು. ಈ ರೀತಿ ಹೇಳಿಕೆ ನೀಡುವುದು ಅವಿವೇಕದ ಪರಮಾವಧಿ ಎಂದು ಜರಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com