ಭವ್ಯ ಭವನದಲ್ಲಿ ಕುಡಿವ ನೀರಿಗೆ ಬರ!

Updated on: 

-ಮಾ.ವೆಂಕಟೇಶ್
ಮೈಸೂರು: ಇಡೀ ರಾಜ್ಯದಲ್ಲಿಯೇ ಭವ್ಯವೂ ಹಾಗೂ ವಿಶಾಲವೂ ಆದ ರಂಗಮಂದಿರವನ್ನು ಸಾಂಸ್ಕೃತಿಕ ರಾಜಧಾನಿ ಮೈಸೂರು  ಹೊಂದಿದೆ. ಅದುವೇ ಕರ್ನಾಟಕ ಕಲಾಮಂದಿರ. ಆದರೆ, ಈ  ಭವ್ಯ ಸೌಧದಲ್ಲಿ ವ್ಯವಸ್ಥೆ ಎಷ್ಟರ ಮಟ್ಟಿಗೆ ಸಮರ್ಪಕವಾಗಿದೆ ಎಂಬುದೇ ಈಗ ಸಾರ್ವಜನಿಕರನ್ನು ಕಾಡುತ್ತಿರುವ ಪ್ರಶ್ನೆ.   
ಸರ್ಕಾರಿ ಹಾಗೂ ಖಾಸಗಿ ಸಂಘ ಸಂಸ್ಥೆಗಳು ಸೇರಿದಂತೆ ಒಂದಲ್ಲ ಒಂದು ಕಾರ್ಯಕ್ರಮ ಇಲ್ಲಿ ದಿನನಿತ್ಯ ನಡೆಯುವುದನ್ನು ಕಾಣಬಹುದು. ಇದು ಕೇವಲ ಬೃಹತ್ ಆಸನಗಳನ್ನು ಹೊಂದಿರುವ ಸಭಾಭವನ ಮಾತ್ರವಲ್ಲ. ಮನೆಯಂಗಳ ಎಂಬ ಮಿನಿ ಸಭಾಂಗಣ, ಅಂತರಂಗ ಎಂಬ ಸ್ಥಗಿತ ಕಿರುಮಂದಿರ ಅಲ್ಲದೆ, ಸುಚಿತ್ರ ಎಂಬ ಕಲಾ ಗ್ಯಾಲರಿಯನ್ನೂ ಒಳಗೊಂಡಿದೆ. ಹೀಗಾಗಿ ಇಲ್ಲಿನ ಆವರಣದಲ್ಲಿ ಯಾವುದಾದರೂ ಸಭೆ. ಸಮಾರಂಭಕ್ಕೆ ಕೊರತೆಯಿಲ್ಲ.  ಕೊರತೆ ಉಂಟಾಗಿರುವುದು ಇಲ್ಲಿಗೆ ಬರುವ ಕಲಾಪ್ರೇಮಿಗಳು ಹಾಗೂ ಸಭಿಕರಿಗೆ ಮತ್ತು ಕಲಾವಿದರಿಗೆ ಎಂಬುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಇಷ್ಟು ದೊಡ್ಡ ಭವನದಲ್ಲಿ ಕುಡಿಯುವ ನೀರಿಗೆ ಪರಿತಪಿಸಬೇಕಿದೆ. ಎರಡು ಕಡೆ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಲಾಗಿದೆ. ಅದರೆ ಅದರಲ್ಲಿ ಸಮರ್ಪಕವಾಗಿ ನಿರಂತರ ನೀರು ಸರಬರಾಜು ಆಗದ ಕಾರಣ, ದಾಹ ತಣಿಸಿಕೊಳ್ಳಲು ಬರುವವರು ನಿರಾಶರಾಗಬೇಕಿದೆ. ಅಲ್ಲದೆ ಬಾಲ್ಕಾನಿಯಲ್ಲೂ ಸಹ ಕುಡಿವ ನೀರಿನ ವ್ಯವಸ್ಥೆ ಇರುವುದಿಲ್ಲ.       
ಕಲಾಮಂದಿರದ ಮುಂಭಾಗದಲ್ಲಿ ಇರುವ ಹಚ್ಚ ಹಸುರಿನ ಗಿಡಮರಗಳು ನೀರಿಲ್ಲದೆ ಒಣಗುವ ಪರಿಸ್ಥಿತಿಯಿದೆ. ಈ ಬಗ್ಗೆ ಇಲ್ಲಿನ ಸಿಬ್ಬಂದಿಯನ್ನು ಈ ಸಂಬಂಧ ವಿಚಾರಿಸಿದರೆ, ಕಳೆದ ನಾಲ್ಕು ದಿನಗಳಿಂದ ನೀರಿಗೆ ತುಂಬ ತೊಂದರೆಯಾಗಿದೆ. ಈ ಸಂಬಂಧ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಪುಸ್ತಕ ಮಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಕಟಣೆಗಳು ಸೇರಿದಂತೆ ವಿವಿಧ ಪ್ರಕಾರಗಳ ಪುಸ್ತಕ ಮಾರಾಟ ಮಳಿಗೆಯು ಇಲ್ಲನ ನೆಲಹಂತಸ್ತಿನ ಅಂಗಳದಲ್ಲಿದೆ. ಆದರೆ ಈ ಮಳಿಗೆ ಉಗ್ರಾಣದಂತಿದ್ದು, ಅಮೂಲ್ಯ ಪುಸ್ತಕಗಳನ್ನು ಸರಿಯಾಗಿ ಸಂಗ್ರಹಿಸುವ ಮುತುವರ್ಜಿ ವಹಿಸಬೇಕು. ಮಾರಾಟ ಮಳಿಗೆಯನ್ನು ಸಮರ್ಪಕವಾಗಿ ತೆಗೆಯುವ ವ್ಯವಸ್ಥೆ ಮಾಡಬೇಕು ಎಂಬುದು ಪುಸ್ತಕ ಖರೀದಿಸಲು ಬರುವವರ ಅನಿಸಿಕೆ.  ಗ್ಯಾಲರಿ ಇಲ್ಲಿನ ಸುಚಿತ್ರ ಕಲಾಗ್ಯಾಲರಿಯಲ್ಲಿ ಕಲಾಕೃತಿಗಳ  ಪ್ರದರ್ಶನಗಳು ನಡೆಯಲಿದೆ. ಆದರೆ, ಸಭಾಂಗಣಕ್ಕೆ ಸೂಕ್ತ ದೀಪ  ಹಾಗೂ ಕಲಾಕೃತಿಗಳನ್ನು ತೂಗು ಹಾಕಲು ಸರಿಯಾದ ವ್ಯವಸ್ಥೆ ಕಲ್ಪಿಸಬೇಕು. ಮೈಸೂರಿನಲ್ಲಿ ಯಾವುದೇ ಸುಸಜ್ಜಿತ ಕಲಾ ಗ್ಯಾಲರಿಯಿಲ್ಲ. ಹೀಗಿರುವಾಗ ಉತ್ತಮ ಜಾಗದಲ್ಲಿ ಇರುವ ಸುಚಿತ್ರ ಕಲಾ ಗ್ಯಾಲರಿಯನ್ನು ಉನ್ನತಿಕರಣಗೊಳಿಸಬೇಕು ಎಂಬುದು ಕಲಾವಿದರ ಆಶಯ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com