ಧರ್ಮಸ್ಥಳಕ್ಕೆ ಪಾದಯಾತ್ರೆ

Updated on: 

-ಅಂಶಿ ಪ್ರಸನ್ನಕುಮಾರ್
ಮೈಸೂರು: ಮೈಸೂರಿನಿಂದ ಧರ್ಮಸ್ಥಳಕ್ಕೆ ಸತತ 9ನೇ ವರ್ಷದ ಪಾದಯಾತ್ರೆ.
- ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ನಾನಾ ಸಂದರ್ಭಗಳಲ್ಲಿ ಬೇರೆ ಬೇರೆ ವಿಷಯಗಳನ್ನು ಕೈಗೆತ್ತಿಕೊಂಡು ಪಾದಯಾತ್ರೆ ನಡೆಸುವುದುಂಟು. ಕೆಲವು ಪೂರ್ಣಗೊಳ್ಳುತ್ತವೆ. ಇನ್ನೂ ಕೆಲವು ಅರ್ಧಕ್ಕೆ ಮೊಟಕಾಗುತ್ತವೆ.
ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ತಮಿಳನಾಡಿಗೆ ಕಾವೇರಿ ನೀರು ಬಿಡುವುದಿಲ್ಲ ಎಂದು ಘೋಷಿಸಿ ಬೆಂಗಳೂರಿನಿಂದ ಕೆಆರ್‌ಎಸ್‌ಗೆ ಪಾದಯಾತ್ರೆ ಹೊರಟರು. ಆದರೆ ಮಂಡ್ಯದಲ್ಲೇ ಪಾದಯಾತ್ರೆ ಮೊಟಕುಗೊಳಿಸಿ, ನಂತರ ನೀರು ಬಿಟ್ಟರು. ಕಾವೇರಿ ಐತೀರ್ಪು ಅಧಿಸೂಚನೆ ಹೊರಡಿಸದಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಕೆಜೆಪಿ ರಾಜ್ಯಾಧ್ಯಕ್ಷ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಇತ್ತೀಚೆಗೆ ಮೈಸೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಹೊರಟಿದ್ದರು. ಆದರೆ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟಿತು ಎಂದು ಮದ್ದೂರು ಬಳಿಯೇ ಮೊಟಕುಗೊಳಿಸಿ, ಕೆಆರ್‌ಎಸ್‌ಗೆ ತೆರಳಿ ಜಲಾಶಯಕ್ಕೆ ಮುತ್ತಿಗೆ ಹಾಕಿ ಪಾದಯಾತ್ರೆ ಅಂತ್ಯಗೊಳಿಸಿದರು. ಅಕ್ರಮ ಗಣಿಗಾರಿಕೆ ವಿರುದ್ಧ ಕಾಂಗ್ರೆಸ್ಸಿಗರು ಬೆಂಗಳೂರಿನಿಂದ ಬಳ್ಳಾರಿಗೆ, ಪಕ್ಷ ಸಂಘಟನೆ, ಸರ್ಕಾರದ ವಿರುದ್ಧ ಜನಜಾಗೃತಿಗಾಗಿ ಬಸವಕಲ್ಯಾಣದಿಂದ ಬೆಂಗಳೂರುವರೆಗೆ ಬಿಎಸ್‌ಆರ್ ಕಾಂಗ್ರೆಸ್ ಸಂಸ್ಥಾಪಕ ಬಿ. ಶ್ರೀರಾಮುಲು ಕೂಡ ಪಾದಯಾತ್ರೆ ನಡೆಸಿದರು.
ಆದರೆ ನಾವು ಹೇಳ ಹೊರಟಿರುವುದು ಇದ್ಯಾವ ಸ್ವಾರ್ಥವೂ ಇಲ್ಲದ ಕೇವಲ ಭಕ್ತಿಯೇ ಪ್ರಧಾನವಾದ ಪಾದಯಾತ್ರೆಯ ಬಗ್ಗೆ. ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರಾ ಸೇವಾ ಟ್ರಸ್ಟ್ ಆಶ್ರಯದಲ್ಲಿ ಸತತ 9ನೇ ವರ್ಷ ಮೈಸೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿರುವ ಬಗ್ಗೆ.
28ರಿಂದ ಪಾದಯಾತ್ರೆ ಶುರು: ಈ ಟ್ರಸ್ಟ್‌ಗೆ ಧರ್ಮಸ್ಥಳ ಪಾದಯಾತ್ರೆಯ ಸಂಸ್ಥಾಪಕ ಹನುಮಂತಪ್ಪ ಅವರ ಮಾರ್ಗದರ್ಶನವಿದೆ. ಆರ್. ಅಂಜನಪ್ಪ, ಕೆ. ಸುರೇಶ್‌ಕುಮಾರ್ ಸಲಹೆಗಾರರು. ಎಂ. ದುರ್ಗಣ್ಣ ಗೌ. ಅಧ್ಯಕ್ಷರು. ಅಧ್ಯಕ್ಷರಾಗಿ ಶಂಕರ್, ಉಪಾಧ್ಯಕ್ಷರಾಗಿ ಅಳಗಿರಿ, ಕಾರ್ಯದರ್ಶಿಯಾಗಿ ಎ. ಮುರುಗನ್, ಜಂಟಿ ಕಾರ್ಯದರ್ಶಿಯಾಗಿ ಎನ್. ಮಹೇಶ್‌ಕುಮಾರ್, ಸಂಘಟನಾ ಕಾರ್ಯದರ್ಶಿಯಾಗಿ ಪಿ. ಸೂರ್ಯನಾರಾಯಣ, ಖಜಾಂಚಿಯಾಗಿ ಸಿ. ಮಹದೇವ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಟ್ರಸ್ಟ್ ಆಶ್ರಯದಲ್ಲಿ ಸುಮಾರು 350 ಮಂದಿ ಫೆ.28 ರಂದು ಬೆಳಗಿನ ಜಾವ ಪಾದಯಾತ್ರೆ ಹೊರಡಲಿದ್ದಾರೆ. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಶುಭ ಹಾರೈಸುವರು. ಮಹಾಶಿವರಾತ್ರಿ ಸಂದರ್ಭದಲ್ಲಿ ಅಂದರೆ ಮಾ.9 ರಂದು ಧರ್ಮಸ್ಥಳ ಕ್ಷೇತ್ರ ತಲುಪಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲಿದ್ದಾರೆ.
ಉದ್ದೇಶ ಏನು?: ಭಗವಂತನ ನಾಮಸ್ಮರಣೆ ಮಾಡುತ್ತಾ, ಮಾರ್ಗಮಧ್ಯದಲ್ಲಿ ಜನರಿಗೆ ಭಗವಂತನ ವಿಚಾರದ ಬಗ್ಗೆ ಮಾರ್ಗದರ್ಶನ ಮಾಡುತ್ತಾ ಪುಣ್ಯ ಕ್ಷೇತ್ರ ಸಂದರ್ಶಿಸುವುದೇ ಆಗಿದೆ ಎನ್ನುತ್ತಾರೆ ಟ್ರಸ್ಟ್ ಅಧ್ಯಕ್ಷ ಶಂಕರ್.
ಹೀಗಾಗಿ ವರ್ಷದಿಂದ ವರ್ಷಕ್ಕೆ ಬರುವವರ ಸಂಖ್ಯೆ ಹೆಚ್ತುತ್ತಲೇ ಇದೆ ಎನ್ನುತ್ತಾರೆ ಅವರು.

ಪಾದಯಾತ್ರೆಯ ಮಾರ್ಗ...
ಮಾ.1- ಇಲವಾಲ, ಬಿಳಿಕೆರೆ, ಲಕ್ಷ್ಮಣತೀರ್ಥ ನದಿ ದಂಡೆ
ಮಾ.2- ಅರ್ಕೇಶ್ವರ ದೇವಸ್ಥಾನ, ಹಳೆ ಎಡತೊರೆ, ಭೇರ್ಯ
ಮಾ.3- ಹೊಳೆನರಸೀಪುರ, ಹಂಗರಹಳ್ಳಿ
ಮಾ.4- ಹೂವಿನಹಳ್ಳಿ ಕಾವಲ್, ಅಂಗಡಿಹಳ್ಳಿ
ಮಾ.5- ಸಂಕೇನಹಳ್ಳಿ, ಚಿಲ್ಕೂರು, ಬೇಲೂರು
ಮಾ.6- ಕಸ್ಗೆಬೈಲ್, ಮೂಡಿಗೆರೆ ಚೆಕ್‌ಪೋಸ್ಟ್
ಮಾ.7- ಚಾರ್ಮಾಡಿ ಘಾಟ್, ಅಣ್ಣಪ್ಪಸ್ವಾಮಿ ಪೂಜೆ, ಪಂಚಲಿಂಗೇಶ್ವರ ಸ್ವಾಮಿ ದೇವಸ್ಥಾನ
ಮಾ.8- ಪರಶುರಾಮ ದೇವಸ್ಥಾನ, ಸನ್ಯಾಸಿಕಟ್ಟೆ, ಮುಂಡಾಜೆ, ಉಜಿರೆ
ಮಾ.9- ಶ್ರೀ ಕ್ಷೇತ್ರ ಧರ್ಮಸ್ಥಳ

ಪಾದಯಾತ್ರಿಗಳು ಹೇಗಿರಬೇಕು
    ಮನೆಯ ಹಿರಿಯರ ಆಶೀರ್ವಾದ ಪಡೆದು ಒಂದು ಹಿಡಿ ಅಕ್ಕಿ ಹಾಗೂ ಒಂದು ಅಚ್ಚು ಬೆಲ್ಲದ ಜತೆ ಹೊರಡಬೇಕು
    ಪಾದಯಾತ್ರೆ ಸಮಯದಲ್ಲಿ ಭಜನೆ, ದೇವರ ಧ್ಯಾನ, ಶ್ರೀ ಮಂಜುನಾಥಸ್ವಾಮಿಯ ಸ್ಮರಣೆ ಕಡೆ ಹೆಚ್ಚು ಗಮನ ನೀಡಬೇಕು
    ಪಾದಯಾತ್ರಿಗಳು ಕಡ್ಡಾಯವಾಗಿ ಕೇಸರಿ ಸಮವಸ್ತ್ರ, ರುದ್ರಾಕ್ಷಿಮಾಲೆ ಧರಿಸಿರಬೇಕು
    ಧೂಮಪಾನ, ಪದೇ ಪದೇ ಕಾಫಿ, ಟೀ ಕುಡಿಯುವುದರಿಂದ ದೂರ ಇರಬೇಕು
    ಕೋಪ ತ್ಯಜಿಸಿ, ಜವಾಬ್ದಾರಿಯೊಂದಿಗ ಕೆಲಸ ಹಂಚಿಕೊಂಡು ಮುನ್ನಡೆಯಬೇಕು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com