ಮೈಸೂರು: ಕರ್ನಾಟಕ ಮಾಧ್ಯಮ ಅಕಾಡೆಮಿ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ವಾರ್ತಾ ಇಲಾಖೆ ಸಂಯುಕ್ತವಾಗಿ ಮಾಹಿತಿ ಹಕ್ಕು ಮತ್ತು ಮಾಧ್ಯಮ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಫೆ.23 ಮತ್ತು 24 ರಂದು ಮಾನಸಗಂಗೋತ್ರಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಆಯೋಜಿಸಿವೆ.
ಫೆ.23ರ ಬೆಳಗ್ಗೆ 10ಕ್ಕೆ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಅವರು ವಿಚಾರ ಸಂಕಿರಣವನ್ನು ಉದ್ಘಾಟಿಸುವರು. ರಾಜ್ಯ ಮಾಹಿತಿ ಆಯುಕ್ತ ಜೆ.ಎಸ್. ವಿರೂಪಾಕ್ಷಯ್ಯ ವಿಷಯ ಮಂಡಿಸುವರು ಎಂದು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ದೀಪಕ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಎ. ಪೊನ್ನಪ್ಪ, ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್, ಪತ್ರಿಕೋದ್ಯಮಿ ಕೆ.ಬಿ. ಗಣಪತಿ ಅತಿಥಿಗಳಾಗುವರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ. ಮಹೇಂದ್ರ ಅಧ್ಯಕ್ಷತೆ ವಹಿಸುವರು ಎಂದರು.
ಮಧ್ಯಾಹ್ನ 12ಕ್ಕೆ ನಡೆಯುವ ಗೋಷ್ಠಿ-1 ರಲ್ಲಿ ಮಾಹಿತಿ ಹಕ್ಕು ಮತ್ತು ಪರಿಣಾಮಕಾರಿ ಬಳಕೆ ಕುರಿತು ಆಡಳಿತ ತರಬೇತಿ ಸಂಸ್ಥೆಯ ಮಹಾ ನಿರ್ದೇಶಕಿ ಡಾ. ಅಮಿತಾ ಪ್ರಸಾದ್, ಅಂಕಣಕಾರ ವೈ.ಜಿ. ಮುರಳೀಧರ್ ವಿಷಯ ಮಂಡಿಸುವರು. ಮಧ್ಯಾಹ್ನ 2.30ಕ್ಕೆ ಆರಂಭವಾಗುವ ಗೋಷ್ಠಿ-2 ರಲ್ಲಿ ಮಾಹಿತಿ ಹಕ್ಕು ಸಾಧಕ ಬಾಧಕ ಕುರಿತು ಹಿರಿಯ ಪತ್ರಕರ್ತರಾದ ಎನ್.ಎ.ಎಂ. ಇಸ್ಮಾಯಿಲ್, ರಿಷಿಕೇಶ್ ಬಹದ್ದೂರ್ ದೇಸಾಯಿ ವಿಚಾರ ಮಂಡಿಸುವರು.
ಫೆ.24ರ ಬೆಳಗ್ಗೆ 10ಕ್ಕೆ ನಡೆಯುವ ಗೋಷ್ಠಿ-3 ರಲ್ಲಿ ಮಾಹಿತಿ ಹಕ್ಕು ಮತ್ತು ಸವಾಲುಗಳು ಕುರಿತು ವರ್ತಮಾನ.ಕಾಮ್ ಸಂಪಾದಕ ರವಿಕೃಷ್ಣ ರೆಡ್ಡಿ, ಎಸಿಐಸಿಎಂ ಸಂಚಾಲಕ ಎಂ. ಲಕ್ಷ್ಮಣ ವಿಚಾರ ಮಂಡಿಸುವರು.
ಕೋ. ಚನ್ನಬಸಪ್ಪ ಭಾಷಣ: ಅಂದು ಮಧ್ಯಾಹ್ನ 12ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ 79ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಹಾಗೂ ಸಾಹಿತಿ ಕೋ. ಚನ್ನಬಸಪ್ಪ ಮುಖ್ಯ ಭಾಷಣ ಮಾಡುವರು.
ಈ ವಿಚಾರ ಸಂಕಿರಣದಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು, ಬೆಂಗಳೂರು, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಪತ್ರಕರ್ತರು ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.