ಕೊಳ್ಳೇಗಾಲ: 2008ರ ನಗರಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲವು ಸಾಧಿಸಿ, ನಂತರ ಪಕ್ಷಾಂತರ ಮಾಡಿ ಪಕ್ಷಾಂತರ ಕಾಯ್ದೆಯಡಿ ಸದಸ್ಯತ್ವ ಅನರ್ಹಗೊಂಡಿದ್ದ 10 ಮಂದಿ ಸದಸ್ಯರ ಪೈಕಿ ಈ ಬಾರಿ 5 ಮಂದಿ ಸದಸ್ಯರು ಸ್ಪರ್ಧೆಗಿಳಿಯಲಿದ್ದಾರೆ.
2010ರಲ್ಲಿ ನಗರಸಭಾ ಅಧ್ಯಕ್ಷರಾಗಿದ್ದ ಪರಮೇಶ್ವರಯ್ಯ ಅವರು ಸದಸ್ಯರಾದ ಮುಡಿಗುಂಡ ಮಹದೇವಪ್ರಸಾದ್, ಕಂದಸ್ವಾಮಿ, ಚೌಡಮ್ಮ, ವೀಣಾ ಧರಣೀಶ, ಎಸ್. ಸುರೇಶ, ಜಿ.ಎಂ.ಸುರೇಶ, ಬಸ್ತಿಪುರ ನಾಗರಾಜು, ಸೆಲ್ವರಾಜು, ರಾಜೇಶ್ವರಿ ನಾರಾಯಣ, ಎಂ.ಎಸ್.ಆರ್.ಬಾಬು ಸೇರಿದಂತೆ ಪಕ್ಷಾಂತರ ಕಾಯ್ದೆ ಉಲ್ಲಂಘನೆ ಸಂಬಂಧ 10 ಮಂದಿ ಸದಸ್ಯರನ್ನು ಪದಚ್ಯುತಗೊಳಿಸಿದ್ದರು. ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಪಕ್ಷಾಂತರ ಮಾಡಿದ್ದ ಸೆಲ್ವರಾಜು ಹಾಗೂ ಜಿ.ಎಂ. ಸುರೇಶ್ ಕ್ರಮವಾಗಿ ಅಧ್ಯಕ್ಷ- ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. 2010ರಲ್ಲಿ ಪರಮೇಶ್ವರಯ್ಯ ಜಿಲ್ಲಾಧಿಕಾರಿಗಳ ಕೋರ್ಟ್ ಮೆಟ್ಟಲೇರಿದ್ದರಿಂದ ಈ 10 ಮಂದಿ ಸದಸ್ಯತ್ವದಿಂದ ಅನರ್ಹಗೊಂಡಿದ್ದರು. ಜಿಲ್ಲಾಧಿಕಾರಿಗಳ ಕೋರ್ಟ್ನಲ್ಲೂ ತೀರ್ಪು ಇವರ ವಿರುದ್ಧವೇ ಆಯ್ತು. ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದರು. ಆದರೆ ಹೈಕೋರ್ಟ್ನಲ್ಲೂ ಇವರ ಪರ ತೀರ್ಪು ಬರಲಿಲ್ಲ. ನಂತರ ಹೈ ಕೋರ್ಟ್ ದ್ವಿಸದಸ್ಯ ಪೀಠದ ಮೊರೆ ಹೋದರು. ಅಲ್ಲಿ ತೀರ್ಪು ಇವರ ಪರವಾಗಿತ್ತು. ತೀರ್ಪಿನ ನಂತರ 2011ರಲ್ಲಿ ನಡೆದ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಮತ ಚಲಾಯಿಸಿದ್ದರು. ಆ ಸಂದರ್ಭದಲ್ಲಿ ಜಿ.ಎಂ.ಸುರೇಶ್ ಮಾತ್ರ ಗೈರಾಗಿದ್ದರು.
ಈಗ 2013ರ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಅನರ್ಹಗೊಂಡಿದ್ದ 5 ಮಂದಿ ಸದಸ್ಯರಾದ ನಗರಸಭಾ ಮಾಜಿ ಅಧ್ಯಕ್ಷ ಸೆಲ್ವರಾಜು, ಮಾಜಿ ಉಪಾಧ್ಯಕ್ಷ ಜಿ.ಎಂ.ಸುರೇಶ, ವೀಣಾ ಧರಣೀಶ, ಎಂ.ಸುರೇಶ್ ಕಾಂಗ್ರೆಸ್ನಿಂದ ಹಾಗೂ ಚೌಡಮ್ಮ ಮತ್ತೆ ಜೆಡಿಎಸ್ನಿಂದಲೇ ಕೊಳ್ಳೇಗಾಲ ನಗರಸಭೆಗೆ ಸ್ಪರ್ಧೆಗಿಳಿಯಲಿದ್ದಾರೆ.
ಇನ್ನುಳಿದ ಐವರ ಪೈಕಿ ಮುಡಿಗುಂಡಂ ಮಹದೇವಪ್ರಸಾದ್ ಕೊನೆ ಗಳಿಗೆಯಲ್ಲಿ ಸ್ಪರ್ಧೆಗಿಳಿದರೂ ಇಳಿಯಬಹುದು.