ಹಾಸನ: ನಗರದ ಡಾನ್ಬೋಸ್ಕೋ ತಾಂತ್ರಿಕ ತರಬೇತಿ ಸಂಸ್ಥೆಯಲ್ಲಿ ಸಂಸ್ಥೆಯ ಪ್ರಾಂಶುಪಾಲ ಫಾ. ಆರೋಗ್ಯರಾಜ್ ನೇತೃತ್ವದಲ್ಲಿ ವಾಲಿಬಾಲ್ ಪಂದ್ಯವು ಯಶಸ್ವಿಯಾಗಿ ನಡೆಯಿತು.
ಸ್ಪರ್ಧೆಯಲ್ಲಿ 10 ಐಟಿಐ ತರಬೇತಿ ಸಂಸ್ಥೆಗಳು ಭಾಗವಹಿಸಿದ್ದವು. ಸಂಸ್ಥೆ ನಿರ್ದೇಶಕ ಸ್ವಾಮಿ ಜಾನ್ ಉದ್ಘಾಟಿಸಿದರು. ಸಿದ್ದೇಶ್ವರ ಐ.ಟಿ.ಐ. ವಿದ್ಯಾರ್ಥಿಗಳು ವಿಜೇತರಾದರು ಹಾಗೂ ಪುಷ್ಕರಣಿ ಐ.ಟಿ.ಐ. ದ್ವಿತೀಯ ಸ್ಥಾನ ತನ್ನದಾಗಿಸಿ ಕೊಂಡಿತು.
ವಾರಸುದಾರರ ಪತ್ತೆಗೆ ಮನವಿ
ಹಾಸನ: ನಾಲ್ಕು ವರ್ಷದ ಹೆಣ್ಣು ಮಗು ಪತ್ತೆಯಾಗಿದ್ದು, ದುಂಡು ಮುಖ, ಕೆಂಪು ಮೈಬಣ್ಣ ಹೊಂದಿದೆ. ವಾರಸುದಾರರಿದ್ದಲ್ಲಿ ಅಧ್ಯಕ್ಷರು, ಶಿಶು ಕೇಂದ್ರ ಕಾಮಧೇನು ಸಹಕಾರಿ ವಿದ್ಯಾಶ್ರಮ, ಗವೇನಹಳ್ಳಿ ಬೈಪಾಸ್ ರಸ್ತೆ, ಹಾಸನ ಅಥವಾ ಮಕ್ಕಳ ಕಲ್ಯಾಣ ಸಮಿತಿ, ಬಾಲಕರ ಬಾಲ ಮಂದಿರ ಸಂಪರ್ಕಿಸಲು ತಿಳಿಸಲಾಗಿದೆ.
ಗ್ರಾಮ ಸಭೆಗೆ ಅಧಿಕಾರಿಗಳ ಗೈರು: ಅಧ್ಯಕ್ಷೆ ಅಸಮಾಧಾನ
ಅರಕಲಗೂಡು: ಗ್ರಾಮಸಭೆಗೆ ಅಧಿಕಾರಿಗಳು ಗೈರು ಹಾಜರಾಗುವ ಮೂಲಕ ಅಭಿವೃದ್ಧಿ ವಿರೋಧಿ ನಿಲುವನ್ನು ಪ್ರಕಟಪಡಿಸಿದ್ದಾರೆ ಎಂದು ಗ್ರಾಪಂ ಅಧ್ಯಕ್ಷೆ ಸುಧಾರಾಣಿ ಆರೋಪಿಸಿದ್ದಾರೆ. ತಾಲೂಕಿನ ಕತ್ತೀಮಲ್ಲೇನಹಳ್ಳಿ ನಡೆದ ಗ್ರಾಮಸಭೆಯಲ್ಲಿ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಬಹುತೇಕ ಗೈರು ಹಾಜರಾಗಿದ್ದರು. ಈ ಮೂಲಕ ಚುನಾಯಿತ ಸದಸ್ಯರಿಗೆ ಅಗೌರವ ತೋರಿರುವುದಲ್ಲದೆ, ಅಧಿಕಾರಿಗಳು ಅಭಿವೃದ್ಧಿ ಪರ ಚರ್ಚೆ ಹಾಗೂ ಅನುಷ್ಠಾನದಲ್ಲಿ ಮಾಹಿತಿ ಲಭ್ಯವಾಗದೆ ತೊಂದರೆ ಉಂಟಾಗಿರುತ್ತದೆ ಎಂದು ಆರೋಪಿಸಿದ್ದಾರೆ. ಗೈರು ಹಾಜರಾದ ತಹಸೀಲ್ದಾರ್, ತಾಲೂಕು ಪಂಚಾಯಿತಿ ಇ.ಓ, ಸಮಾಜ ಕಲ್ಯಾಣಾಧಿಕಾರಿ ಸೇರಿದಂತೆ ಒಟ್ಟು 11 ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಪಂಚಾಯಿತ್ ರಾಜ್ ಇಲಾಖೆಯ ಗ್ರಾಮೀಣಾಭಿವೃದ್ಧಿ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ತಾಪಂ ಸ್ಥಾಯಿ ಸಮಿತಿ ಸಭೆ ಧಿಕ್ಕರಿಸಿದ ಸದಸ್ಯರು
ಅರಕಲಗೂಡು: ಇಲ್ಲಿನ ತಾಲೂಕು ಪಂಚಾಯಿತಿಯ ಸಾಮಾನ್ಯ ಸ್ಥಾಯಿ ಸಮಿತಿ ಸಭೆಗೆ ಗೈರು ಹಾಜರಾಗುವ ಮೂಲಕ ಸದಸ್ಯರು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.ಕಳೆದ ಡಿಸೆಂಬರ್ 14ರಂದು ನಡೆದ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಿದ ವಿಷಯಗಳ ನಡಾವಳಿಯನ್ನು ತಿರುಚಲಾಗಿದೆ. ಸಾಮಾನ್ಯ ಸ್ಥಾಯಿ ಸಮಿತಿ ಸಾಮಾಜಿಕ ಸ್ಥಾಯಿ ಸಮಿತಿ ಮತ್ತು ಹಣಕಾಸು ಸಮಿತಿಗಳಿಗೆ ಅಂದು ಹೆಸರಿಸಿದ ಹೆಸರುಗಳನ್ನು ನೇಮಿಸದೇ ಸಭಾ ನಡಾವಳಿಯನ್ನೇ ತಿರುಚಿ ಮನಬಂದಂತೆ ನೇಮಕ ಮಾಡಿಕೊಳ್ಳಲಾಗಿದೆ ಎಂಬುದು ಸದಸ್ಯರ ಆರೋಪ.
ಅದೇ ರೀತಿ ಸಾಮಾನ್ಯ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳನ್ನು ತಾಲೂಕು ಪಂಚಾಯಿತಿಯ ಸಹ ಸದಸ್ಯರುಗಳನ್ನಾಗಿ ನಾಮಕರಣ ಮಾಡಿಕೊಳ್ಳುವ ವಿಚಾರದಲ್ಲೂ ತಾರತಮ್ಯ ಮಾಡಲಾಗಿದೆ ಸಭಾ ನಡವಳಿಕೆಯನ್ನು ಧಿಕ್ಕರಿಸಲಾಗಿದೆ.ಸಭಾ ನಿರ್ಣಯ ಹೊರತುಪಡಿಸಿ ಅದಲು-ಬದಲು ಮಾಡಲಾಗಿದೆ. ಆದ್ದರಿಂದ ತಾವುಗಳು ಸದರಿ ತಾಪಂ ಸಾಮಾನ್ಯ ಸ್ಥಾಯಿ ಸದಸ್ಯರಾಗಿದ್ದು ಅದಕ್ಕೆ ತಾಪಂ ಉಪಾಧ್ಯಕ್ಷರೇ ಅಧ್ಯಕ್ಷರಾಗಿರುತ್ತಾರೆ. ಅಧ್ಯಕ್ಷರೂ ಸೇರಿದಂತೆ ಸದಸ್ಯ ಬಿ.ಸಿವೀರೇಶ ಪಾಂಡುರಂಗ ಆಶಾ ಮತ್ತು ಉಷಾ ಇವರು ಸಭೆಗೆ ಹಾಜರಾಗದಿರಲು ನಿರ್ಧರಿಸುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಉಪಾಧ್ಯಕ್ಷೆ ಸಾಕಮ್ಮ ಪತ್ರ ಮುಖೇನ ತಿಳಿಸಿದ್ದಾರೆ.
ಗುರುಸಿದ್ದರಾಮೇಶ್ವರ ಜಯಂತಿ ಸಂಪನ್ನ
ಬೇಲೂರು: ಪುಷ್ಪಗಿರಿ ಮಹಾಸಂಸ್ಥಾನದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಗುರು ಸಿದ್ದರಾಮೇಶ್ವರ ಜಯಂತಿ ಮಹೋತ್ಸವ ಕಾರ್ಯಕ್ರಮವು ವಿಜೃಂಭಣೆಯಿಂದ ಸುಗಮವಾಗಿ ನಡೆದಿದ್ದು ತಾಲೂಕಿಗೆ ಹೆಮ್ಮೆ ತಂದಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಬಿ.ಶಿವರುದ್ರಪ್ಪ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ.14 ಮತ್ತು 15 ರಂದು ಪುಷ್ಪಗಿರಿ ಬಳಿಯ ಬಸ್ತಿಹಳ್ಳಿಯಲ್ಲಿ ನಡೆದ 840 ನೇ ಗುರು ಸಿದ್ದರಾಮೇಶ್ವರ ಜಯಂತಿ ಮಹೋತ್ಸವ ಅದ್ಧೂರಿಯಾಗಿ ನಡೆದಿದೆ. ಕಾರ್ಯಕ್ರಮಕ್ಕೆ ನಾಡಿನ ಮೂಲೆ ಮೂಲೆಯಿಂದ ಹಾಗೂ ಜಿಲ್ಲೆ, ತಾಲೂಕಿನಿಂದ ಸಾಗರೋಪಾದಿಯಲ್ಲಿ ಹರಿದು ಬಂದ ಭಕ್ತ ಸಾಗರಕ್ಕೆ ನಾವು ಚಿರರುಣಿಯಾಗಿದ್ದೇವೆ. ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಭಕ್ತರು ಸೇರಿದ್ದು ಬೆಳಗಿನ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿಯ ದಾಸೋಹದ ಜೊತೆಗೆ ನಾಡಿನ ಮಠಾದೀಶರ, ಚಿಂತಕರ ಜೊತೆಗೆ ಹಂಚಿಕೊಂಡ ಧಾರ್ಮಿಕ ದಾಸೋಹ ಎಲ್ಲರಿಗೂ ತೃಪ್ತಿಯನ್ನು ತಂದಿದೆ. ರಾಜ್ಯದ ನಾನಾ ಮಠಗಳಿಂದ ಬಂದಿದ್ದ ನೂರಾರು ಸ್ವಾಮೀಜಿಗಳು ಭಕ್ತರಿಗೆ ನೀಡಿದ ಪ್ರವಚನಗಳಿಂದ ಎಲ್ಲರೂ ಪುನೀತರಾಗಿದ್ದಾರೆ ಎಂದರು.
1008 ಕುಂಭೋತ್ಸವದಲ್ಲಿ ಭಾಗಿಯಾದ ಮಹಿಳೆಯರಿಗೆ ಮತ್ತು ನಾಡಿನ ಹಾಗೂ ಸ್ಥಳೀಯ ಕಲಾವಿದರಿಗೆ ಅಭಿನಂದನೆ ಸಲ್ಲಿಸಿದರು. ಅಲ್ಲದೆ ಲಕ್ಷಾಂತರ ಭಕ್ತರಿಗೆ ದಾಸೋಹ ನೀಡಿದ ಯುವಕ ತಂಡದವರಿಗೆ ಮತ್ತು ದಾಸೋಹ ವ್ಯವಸ್ಥೆ ಮಾಡಿದವರಿಗೆ,ವೇದಿಕೆ ಸಮಿತಿ ಮತ್ತು ವಸತಿ ಸಮಿತಿ, ಪ್ರಚಾರ ಸಮಿತಿ, ಸ್ವಾಗತ ಸಮಿತಿ, ಆರಕ್ಷಕ ಇಲಾಖೆ, ಸ್ಥಳೀಯ ವಿವಿಧ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಆಡಳಿತ್ಕ, ತಾಲೂಕು ಆಡಳಿತ, ತಾಪಂ ಜಿಪಂ ಜನಪ್ರತಿನಿಧಿಗಳಿಗೆ ವಿಶೇಷವಾಗಿ ಜಯಂತಿ ಕಾರ್ಯಕ್ರಮ ನಡೆಸಲು ಸ್ಥಳಾವಕಾಶ ನೀಡಿದ ಬಸ್ತಿಹಳ್ಳಿ ಹಳೇಬೀಡು ಗ್ರಾಮ ಪಂಚಾಯತಿ ಸದಸ್ಯರಿಗೆ, ಮಾಧ್ಯಮದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕ್ರೈಂ ಸ್ಟೋರಿ ಮಾಸಿಕ ಪತ್ರಿಕೆ ಬಿಡುಗಡೆ
ಹಾಸನ: ಹಾಸನ ಜಿಲ್ಲಾ ಕ್ರೈಂ ಸ್ಟೋರಿ ಮಾಸಿಕ ಪತ್ರಿಕೆ ಉದ್ಘಾಟನಾ ಸಮಾರಂಭ ನಗರದ ಕಸಾಪ ಭವನದಲ್ಲಿ ಸೋಮವಾರ ನಡೆಯಿತು. ಸಹಾಯಕ ಆರಕ್ಷಕ ಅಧೀಕ್ಷಕ ಯಡಾ ಮಾರ್ಟಿನ್ ಅವರು ಎಂ.ಜಿ. ಮಂಜುನಾಥ್ ಸಂಪಾದಕತ್ವದಲ್ಲಿ ಹೊರ ಬರುತ್ತಿರುವ ಕ್ರೈಂಸ್ಟೋರಿ ಮಾಸಿಕ ಬಿಡುಗಡೆ ಮಾಡಿದರು. ನಗರಸಭೆ ಅಧ್ಯಕ್ಷ ಸಿ.ಆರ್. ಶಂಕರ್, ಆಯುಕ್ತ ನಾಗಭೂಷಣ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನವಿಲೆ ಅಣ್ಣಪ್ಪ, ಕೆಪಿಎಸ್ ಪ್ರಮೋದ್, ಪತ್ರಕರ್ತ ಕೆಂಚೇಗೌಡ, ರವಿನಾಕಲಗೂಡು, ಜಿಲ್ಲಾ ಕಾಂಗ್ರೆಸ್ ವಕ್ತಾರ ಡಾ. ಎಚ್. ನಾಗರಾಜ್, ವಾರ್ತಾಧಿಕಾರಿ ವಿನೋದ್ಚಂದ್ರ, ಅರುಣಾನಂದ, ಭ್ರಮರಾಂಭ ಇದ್ದರು. ಪತ್ರಿಕೆ ಉಪಸಂಪಾದಕ ಎಚ್.ಎಂ. ದಿನೇಶ್ ಸ್ವಾಗತಿಸಿದರು. ಆರ್ಕೆ. ಸ್ವರೂಪ್ ನಿರೂಪಿಸಿದರು.
ಇಂದು ಮೌನ ಮೆರವಣಿಗೆ
ಅರಸೀಕೆರೆ: ಬಾಲಗಂಗಾಧರನಾಥ ಶ್ರೀಗಳ ಆತ್ಮಕ್ಕೆ ಶಾಂತಿ ಕೋರುವ ಸಂಬಂಧ ಜ.23 ಬುಧವಾರ ಸಂಜೆ ಪಟ್ಟಣದ ಪ್ರವಾಸಿ ಮಂದಿರದ ಆವರಣದಿಂದ ಲಕ್ಷ್ಮೀಪುರ ಬಡಾವಣೆಯ ಆದಿಚುಂಚನಗಿರಿ ಶಾಲೆಯವರೆಗೂ ಮೌನ ಮೆರವಣಿಗೆ ನಡೆಯಲಿದೆ ಎಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಆರ್.ಅನಂತಕುಮಾರ್ ತಿಳಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳಿಗೆ ಫೆ. 5ರಂದು ಪಟ್ಟಣದಲ್ಲಿ ಶ್ರದ್ದಾಂಜಲಿ ಸಭೆ ಏರ್ಪಡಿಸಲಾಗಿದೆ ಎಂದೂ ಹೇಳಿದರು.