ಚಾಮರಾಜನಗರ: ಸುಮಾರು 500 ವರ್ಷಗಳ ಇತಿಹಾಸವಿರುವ ತಾಲೂಕಿನ ಹರವೆ ಗ್ರಾಮದಲ್ಲಿ ಬಸವೇಶ್ವರ ವಸಂತೋತ್ಸವ ಜನಸ್ತೋಮದ ನಡುವೆ ಬಹಳ ವಿಜೃಂಭಣೆಯಿಂದ ನಡೆಯಿತು.
ಪ್ರಕೃತಿಯನ್ನು ದೇವರಿಗೆ ಹೋಲಿಸಿ, ಮೂರು ದಿನಗಳ ಕಾಲ ನಡೆಯುವ ವೈಭವದ ವಸಂತೋತ್ಸವಕ್ಕೆ ತನ್ನದೇ ಆದ ಪರಂಪರೆ ಇದೆ. ಇದನ್ನು 6 ಹಾಗೂ 9 ವರ್ಷಕ್ಕೊಮ್ಮೆ ಮಾತ್ರ ಅಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯಂತು ಹರವೆ ತುಂಬೆಲ್ಲಾ ಜನವೋ ಜನ. ಗ್ರಾಮದ ಪುರಾತನ ಬಸವೇಶ್ವರ ದೇವಸ್ಥಾನವನ್ನು ವಿದ್ಯುತ್ದೀಪಗಳಿಂದ ಆಲಂಕರಿಸಿ, ದೇವಸ್ಥಾನ ಮುಂಭಾಗ ಓಕುಳಿ ಗುಳಿಯನ್ನು ವಿಶಿಷ್ಟವಾಗಿ ಆಲಂಕರಿಸಲಾಗಿತ್ತು.
ಸುಮಾರು 8 ಅಡಿಯ ಈ ಗುಳಿಗೆ, ಜು.13 ರಾತ್ರಿ ನೂರೊಂದು ಕಳಸದೊಂದಿಗೆ, ಗ್ರಾಮದ ಪ್ರಮುಖ ಬೀದಿಗಳಲ್ಲಿ ನಂದಿಧ್ವಜ ಹಾಗೂ ಬಿರುದುಬಾವಲಿಗಳೊಂದಿಗೆ ಮೆರವಣಿಗೆ ನಡೆಸಿ, ಓಕುಳಿ ಗುಳಿಗೆ ನೀರು ತುಂಬಿಸಲಾಯಿತು.
ಜು.14ರ ಬೆಳಗ್ಗೆ ಬಸವೇಶ್ವರ ಮೂರ್ತಿಯನ್ನು ಗ್ರಾಮದ ಎಲ್ಲಾ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಯುವಕರು ಒಬ್ಬರಿಗೊಬ್ಬರು ಬಣ್ಣ ಎರಚಿಕೊಂಡು, ಓಕುಳಿ ಆಡಿ, ಸಂಭ್ರಮಿಸಿ, ಕುಣಿದು ಕುಪ್ಪಳಿಸಿದರು. ನಂದೀಧ್ವಜ ಹಾಗೂ ವಿವಿಧ ಜಾನಪದ ಕಲಾಪ್ರಕಾರಗಳು ಹಾಗೂ ಬಸವನೊಂದಿಗೆ ಮೆರವಣಿಗೆ ನಡೆಸಿ, ಜನರಿಂದ ಪೂಜೆ ಸ್ವೀಕರಿಸಿದ ನಂತರ, ದೇವಸ್ಥಾನದ ಓಕುಳಿ ಗುಳಿ ಬಳಿ ತರಲಾಯಿತು.
ಸಂಪ್ರದಾಯದಂತೆ ಉತ್ಸವಮೂರ್ತಿಯನ್ನು ಓಕುಳಿ ಗುಳಿ ಬಳಿ ವಿಶೇಷವಾಗಿ ಪೂಜಿಸಿ, ಮಂಗಳಾರತಿ ಮುಗಿಯುತ್ತಿದ್ದಂತೆ, ಒಬ್ಬರಿಗೊಬ್ಬರು ಓಕುಳಿ ಗುಳಿಯಲ್ಲಿ ಮಿಂದೆದ್ದರು, ಗುಳಿಯ ಸುತ್ತಲೂ ನಿಂತವರು ಬಿದ್ದವರನ್ನು ಮೇಲಕ್ಕೆ ಎತ್ತಿ ಬಿಡುತ್ತಿದ್ದ ದೃಶ್ಯ ಕಂಡು ಬಂದಿತು.
ಈ ವಸಂತೋತ್ಸವ ಆಚರಿಸುವುದರಿಂದ ಕಾಲಕಾಲಕ್ಕೆ ಮಳೆಯಾಗಿ, ಬೆಳೆಗಳು ಸಮೃದ್ಧಿಯಾಗಿ, ಜನರು ನೆಮ್ಮದಿಯಿಂದಿರುತ್ತಾರೆ ಎಂಬುದು ಗ್ರಾಮಸ್ಥರ ನಂಬಿಕೆ.
ಇಂದು ಮೆರವಣಿಗೆ: ಬಸವೇಶ್ವರ ವಸಂತೋತ್ಸವದ ಅಂಗವಾಗಿ ಮಂಗಳವಾರ ಗ್ರಾಮದ ಪ್ರಮುಖ ಬೀದಿಗಳಲ್ಲಿ ವೈಭವದಿಂದ ಮೆರವಣಿಗೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಬಸವೇಶ್ವರ ಮೂರ್ತಿಯ ಉತ್ಸವ ನಡೆಯಲಿದೆ.
ಐದು ತಲೆಮಾರಿನ ನಂಬಿಕೆ
ಇದೊಂದು ಅಚಲವಾದ ನಂಬಿಕೆ. ಇದು ಸುಮಾರು ಐದು ತಲೆಮಾರಿನಿಂದಲೂ ನಡೆದುಕೊಂಡು ಬರುತ್ತಿದೆ. ಮಧ್ಯೆ ಹಲವಾರು ಕಾರಣಗಳಿಂದ ನಿಂತು ಹೋಗಿತ್ತು. ಈ ಹಬ್ಬವನ್ನು ಪ್ರತಿವರ್ಷ ಆಚರಿಸಲು ಸಾಧ್ಯವಿಲ್ಲ. 6 ಹಾಗೂ 9 ವರ್ಷಕ್ಕೊಮ್ಮೆ ಮಾತ್ರ ಅಚರಿಸಿಕೊಂಡು ಬರಲಾಗುತ್ತಿದೆ. ಆಷಾಢ ಮಾಸದಲ್ಲಿ ಈ ವಸಂತೋತ್ಸವ ಆಚರಿಸುತ್ತಿದ್ದು, ಇದರಿಂದ ಉತ್ತಮ ಮಳೆ ಬೆಳೆಯಾಗುತ್ತದೆ ಎಂಬ ಅಚಲ ನಂಬಿಕೆ ಇದೆ.