ಉಪ್ಪಿನಂಗಡಿ: ರಾ.ಹೆ. 75ರ ಹೆದ್ದಾರಿಯ ಉದನೆ ಎಂಬಲ್ಲಿ ಭಾನುವಾರ ಬೆಳಗಿನ ಜಾವ ಹೆದ್ದಾರಿ ಬದಿ ನಿಲ್ಲಿಸಲಾಗಿದ್ದ ಟ್ಯಾಂಕರ್ ಚಾಲಕಗೆ ಹಲ್ಲೆ ನಡೆಸಿದ ದರೋಡೆಕೋರರ ತಂಡ ಬೆಲೆಬಾಳುವ ಸೊತ್ತುಗಳನ್ನು ದೋಚಿದ ಘಟನೆ ನಡೆದಿದೆ.
ನೂಜಿಬಾಳ್ತಿಲ ಗ್ರಾಮದ ಬಳ್ಳಕ್ಕ ಮನೆ ನಿವಾಸಿಯಾಗಿರುವ ದಾಮೋದರ (45) ಎಂಬ ವರು ಅನಿಲ ಟ್ಯಾಂಕರ್ ಚಾಲಕರಾಗಿದ್ದು, ಮಂಗಳೂರಿನಿಂದ ಮೈಸೂರಿಗೆ ಅನಿಲ ಸಾಗಾಟದ ಕಾರ್ಯ ನಿರತರಾಗಿದ್ದಾಗ ರಾತ್ರಿ ವೇಳೆ ಊಟ ಮುಗಿಸಿ, ಉದನೆಯ ಸಂತ ಅಂತೋನಿ ಚರ್ಚ್ ಸಮೀಪ ಹೆದ್ದಾರಿ ಬದಿ ಟ್ಯಾಂಕರ್ ನಿಲ್ಲಿಸಿ ನಿದ್ರಿಸಿದ್ದರು.
ಬೆಳಗಿನ ಜಾವ 2 ಗಂಟೆ ಸುಮಾರಿಗೆ ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದ ಮೂವರು ವ್ಯಕ್ತಿಗಳು ದಾಮೋದರ ಮುಖಕ್ಕೆ ಬೆಡ್‌ಶೀಟ್ ಮುಚ್ಚಿ ಅವರ ಮುಖ, ಕೈ, ಕಾಲು ಹಾಗೂ ದೇಹದ ಹಲವೆಡೆ ಚಾಕುವಿನಿಂದ ತಿವಿದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಅವರ ಕಾಲನ್ನು ಹಗ್ಗದಿಂದ ಕಟ್ಟಿ ಹಾಕಿ, ಅವರ ಕೈಯಲ್ಲಿದ್ದ 5 ಗ್ರಾಮ್ ತೂಕದ ಚಿನ್ನದ ಉಂಗುರ, ರು. 500 ನಗದು, 1 ವಾಚ್ ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಗಂಭೀರ ಗಾಯಗೊಂಡಿರುವ ದಾಮೋದರ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಪ್ಪಿನಂಗಡಿ ಪೊಲಿಸರು ಪ್ರಕರಣ ದಾಖಲಿಸಿದ್ದಾರೆ.
ಹಿಂದೆಯೂ ದರೋಡೆ ನಡೆದಿತ್ತು: ಕೆಲವು ದಿನಗಳ ಹಿಂದೆ ಬೆಂಗಳೂರಿನಿಂದ ಸಾಲಿಗ್ರಾಮಕ್ಕೆ ಕಾರಿನಲ್ಲಿ ಬರುತ್ತಿದ್ದವರನ್ನು ದರೋಡೆಕೋರರ ತಂಡ ಬೆನ್ನಟ್ಟಿ ಹಲ್ಲೆ ನಡೆಸಿ ಹಣ ದೋಚಿದ್ದರು.
Advertisement