ಮಂಗಳೂರು: ಪಶ್ಚಿಮ ಘಟ್ಟದ ಅಳಿವಿನಂಚಿನ 50 ಪ್ರಭೇದಗಳ ಸುಮಾರು 2,500 ಗಿಡಗಳನ್ನು ಪಿಲಿಕುಳ ನಿಸರ್ಗಧಾಮದಲ್ಲಿ ನೆಡುವ ಕೆಐಒಸಿಎಲ್ ಪ್ರಾಯೋಜಕತ್ವದ ಕುದುರೆಮುಖ ಟ್ರೀ ಪಾರ್ಕ್ ಯೋಜನೆಗೆ ಅರಣ್ಯ ಸಚಿವ ಬಿ.ರಮಾನಾಥ ರೈ ಸೋಮವಾರ ಸಸಿ ನೆಡುವ ಮೂಲಕ ಚಾಲನೆ ನೀಡಿದರು.
ಪಿಲಿಕುಳದಲ್ಲಿ ಅರ್ಬನ್ ಇಕೋ ಪಾರ್ಕ್ ಮೂಲಕ ಅಳಿವನಂಚಿನ ಸಸ್ಯಗಳ ರಕ್ಷಣೆಗೆ ಸರ್ಕಾರ ಮುಂದಾಗಿದ್ದು ಈಗಾಗಲೇ ರು. 5 ಕೋಟಿ ಬಿಡುಗಡೆ ಮಾಡಿದ ಎಂದು ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಇಕೋ ಪಾರ್ಕ್ ನಿರ್ಮಾಣಕ್ಕೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಒಪ್ಪಿಗೆ ನೀಡಿದೆ. ಎಂಆರ್‌ಪಿಎಲ್, ಎಂಸಿಎಫ್, ಯುಪಿಸಿಎಲ್ ಮೊದಲಾದ ಕೈಗಾರಿಕೆ ಸಂಸ್ಥೆಗಳು ಪರಿಸರ ರಕ್ಷಣೆ ಗಮನದಲ್ಲಿ ಇರಿಸಿಕೊಂಡು ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬ ಕುರಿತು ಪ್ರಾತ್ಯಕ್ಷಿಕೆಗಳ ಮೂಲಕ ಅಲ್ಲಿ ಅಧ್ಯಯನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದರು.
ನಶಿಸಿ ಹೋಗುತ್ತಿರುವ ನಾನಾ ಸಸ್ಯ ಪ್ರಭೇದಗಳ ಸಂರಕ್ಷಣೆ, ಮಾಲಿನ್ಯ ಸೂಸುವ ಕೈಗಾರಿಕೆಗಳ ಪ್ರಾತ್ಯಕ್ಷಿಕೆ, ತ್ಯಾಜ್ಯ ಸಂಸ್ಕರಣೆ, ಮಳೆ ನೀರು ಕೊಯ್ಲು, ಮಳೆ ನೀರು ಕೊಯ್ಲು ಮೊದಲಾದ ಮಾಹಿತಿ, ವಿವರಗಳನ್ನು ಈ ಉದ್ಯಾನವನದಲ್ಲಿ ಒದಗಿಸಲಾಗುವುದು ಎಂದು ರೈ ನುಡಿದರು.
ವರ್ಷದೊಳಗೆ ತ್ರಿಡಿ ಪ್ಲಾನಿಟೋರಿಯಂ: ಶಾಸಕ ಜೆ.ಆರ್.ಲೋಬೊ ಮಾತನಾಡಿ, ಮುಂದಿನ ಒಂದುವರೆ ವರ್ಷದೊಳಗೆ ದೇಶದ ಪ್ರಪ್ರಥಮ ಬಹುನಿರೀಕ್ಷಿತ ತ್ರಿಡಿ ಪ್ಲಾನಿಟೋರಿಯಂ ಉದ್ಘಾಟನೆಯಾಗಲಿದೆ. ಸೆಪ್ಟಂಬರ್‌ನಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ ಉದ್ಘಾಟನೆಗೊಳ್ಳಲಿದೆ ಎಂದರು.
ಯುವಜನ ಸೇವೆ ಸಚಿವ ಕೆ.ಅಭಯಚಂದ್ರ ಜೈನ್, ಶಾಸಕ ಮೊಯ್ದಿನ್ ಬಾವ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕೆಐಒಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಲಯ್ ಚಟರ್ಜಿ, ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಸಸ್ಯಕಾಶಿ ಯೋಜನ ಸಲಹೆಗಾರ ಡಾ.ಡಿಸಿ.ಚೌಟ, ಮಾಜಿ ಕುಲಪತಿ ಪ್ರೊ.ಕೆ.ಎಂ. ಕಾವೇರಿಯಪ್ಪ, ವಿಜ್ಞಾನಿ ಡಾ.ಎಚ್.ಎಸ್.ಶೆಣೈ, ವಿಜ್ಞಾನಿ ರಾಮಕೃಷ್ಣ ಮರಾಠಿ, ಪಿಲಿಕುಳ ನಿಸರ್ಗಧಾಮ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಎ.ಪ್ರಭಾಕರ ಶರ್ಮ, ವಿಜ್ಞಾನ ಕೇಂದ್ರ ನಿರ್ದೇಶಕ ಡಾ.ಕೆ.ವಿ.ರಾವ್ ಇದ್ದರು.
2,500 ಗಿಡಗಳ ಪಾರ್ಕ್
ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗ ಧಾಮದ 15 ಎಕರೆ ಜಾಗದಲ್ಲಿ ಟ್ರೀಪಾರ್ಕ್ ಯೋಜನೆ ಜಾರಿಗೆ ಬರಲಿದೆ. ಕೆ.ಐ.ಒ.ಸಿ.ಎಲ್. ಕಂಪನಿ ತನ್ನ ಸಾಮಾಜಿಕ ಬದ್ಧತೆ ಕೋಟಾದಲ್ಲಿ ಮೂರು ವರ್ಷದ ಅವಧಿಯಲ್ಲಿ ಯೋಜನೆ ಅನುಷ್ಠಾನ ಗೊಳಿಸಲಿದೆ. ಪ್ರಾರಂಭಿಕ ಶಿಲ್ಕು 52 ಲಕ್ಷವನ್ನು ಬಿಡುಗಡೆ ಮಾಡಿದೆ. ಈಗ 5 ಎಕರೆ ಪ್ರದೇಶದಲ್ಲಿ 50 ಪ್ರಭೇದಗಳ 2,500 ಗಿಡಗಳನ್ನು ನೆಡುವ ಯೋಜನೆ ಇದು. ಯೋಜನೆ ಪೂರ್ಣ ಗೊಳ್ಳುವ ಸಂದರ್ಭ ವಿಶ್ರಾಂತಿ ಸ್ಥಳ ಮತ್ತು ಫುಟ್ ಪಾತ್ ನಿರ್ಮಾಣ, ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಇಲ್ಲಿ ಅಧ್ಯಯನಕ್ಕೆ ಅವಕಾಶ ಮಾಡಿಕೊಡುವ ಉದ್ದೇಶವೂ ಇದರಲ್ಲಿದೆ.
ರೈಗೆ ಕಣಗಿಲೆ, ಐವನ್‌ಗೆ ಹಲಸು !
ಗಿಡ ನೆಡುವಾಗ ಪ್ರತಿ ಗಣ್ಯರ ಹೆಸರಲ್ಲಿ ಒಂದೊಂದು ಗಿಡವನ್ನು ನೆಡಲಾಯಿತು. ರಮಾನಾಥ ರೈ ಹೆಸರಲ್ಲಿ ಕಾಡು ಕಣಗಿಲೆ, ಅಭಯಚಂದ್ರ ಜೈನ್ ಹೆಸರಲ್ಲಿ ಅಬ್ಲುಕ, ಮೊಯ್ದಿನ್ ಬಾವ ಹೆಸರಲ್ಲಿ ಕಳುರ್ ಮಾವು, ಜೆ.ಆರ್.ಲೋಬೋ ಹೆಸರಲ್ಲಿ ಅರ್ಜುನ ಗಿಡ, ಐವನ್ ಡಿಸೋಜ ಹೆಸರಲ್ಲಿ ಹಲಸು, ಜಿಲ್ಲಾಧಿಕಾರಿ ಇಬ್ರಾಹಿಂ ಹೆಸರಲ್ಲಿ ಬೀಟಿ, ಮೊಯ್ದಿನ್ ಬಾವ ಕುಳರ್ ಮಾವು ನೆಡಲಾಯಿತು.
Advertisement