ಮಂಗಳೂರು: ವಾಮಂಜೂರು ಸಮೀಪ ವಿಶಾಲ ಜಾಗದಲ್ಲಿ ವ್ಯಾಪಿಸಿರುವ ಕ್ಷಯ ರೋಗಿಗಳ ಆಸ್ಪತ್ರೆಯನ್ನು ಜನರಲ್ ಆಸ್ಪತ್ರೆ ಮಾಡುವ ಯೋಜನೆ ಇದೆ. ತಾತ್ಕಾಲಿಕ ದುರಸ್ತಿಗೆ ಶಾಸಕ ನಿಧಿಯಿಂದ 5 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ಯುವಜನ ಸೇವೆ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು.
ಕ್ಷಯರೋಗಿಗಳ ಆಸ್ಪತ್ರೆಗೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಜತೆ ಭೇಟಿ ನೀಡಿದ ಸಚಿವ ಅಭಯಚಂದ್ರ ಜೈನ್. ಶೀಘ್ರ ದುರಸ್ತಿ ಕಾರ್ಯ ನಡೆಸುವಂತೆ ಸೂಚಿಸಿದರು. ಎಲ್ಲ ರೋಗಕ್ಕೆ ಮದ್ದು ನೀಡುವ ಜನರಲ್ ಆಸ್ಪತ್ರೆ ಮಾಡಿದರೆ ನಗರ ಮಧ್ಯ ಭಾಗದಲ್ಲಿರುವ ವೆನ್ಲಾಕ್ ಆಸ್ಪತ್ರೆಯ ಹೊರೆ ಕಡಿಮೆ ಯಾಗಬಹುದು. ಜಾಗವೂ ಬೇಕಾದಷ್ಟು ಇದೆ ಎಂದರು.
ಹಿಂದೆ ಮಂಗಳೂರು ಬೀಡಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿತ್ತು. ಸಾವಿರಾರು ಕಾರ್ಮಿಕರು ಬೀಡಿಯಿಂದಾಗಿ ಬೇಗನೆ ಕ್ಷಯರೋಗಕ್ಕೆ ತುತ್ತಾಗುತ್ತಿದ್ದರು. ಆದ್ದರಿಂದ ಆಂದು ತಮಿಳುನಾಡಿಗೆ ಸೇರಿದ್ದ ಮಂಗಳೂರಲ್ಲಿ ಮೊದಲ ಬಾರಿಗೆ ದೊಡ್ಡ ಕ್ಷಯ ಆಸ್ಪತ್ರೆಯನ್ನು ಮೆಡ್ರಾಸ್ ಮುಖ್ಯಮಂತ್ರಿ ಕಾಮರಾಜನ್ ಉದ್ಘಾಟಿಸಿದರು ಎಂದು ವಿವರ ನೀಡಿದರು.
ಟಿಬಿ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ರೋಗಿಗಳ ಜತೆ ಮಾತುಕತೆ ನಡೆಸಿದರು. ಊಟ, ತಿಂಡಿ, ಚಿಕಿತ್ಸೆಗೆ ಸಮಸ್ಯೆ ಆಗುತ್ತಿದೆಯೇ ಎಂದು ಪ್ರಶ್ನಿಸಿದರು. ಅನೇಕ ವರ್ಷದಿಂದ ಇದ್ದೇವೆ, ಇಲ್ಲಿ ಯಾವುದೇ ತೊಂದರೆ ಇಲ್ಲ ಎಂದು ರೋಗಿಗಳು ವಿವರಣೆ ನೀಡಿದರು.
ಜಾಗ ಸರ್ವೆ: ನೂರು ಹಾಸಿಗೆಗಳ ಆಸ್ಪತ್ರೆಯಲ್ಲಿ ಸೋಮವಾರ ಭೇಟಿ ನೀಡಿದ ವೇಳೆ 32 ರೋಗಿಗಳು ಮಾತ್ರ ಇದ್ದರು. ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬೆಡ್‌ಗಳೇ ಇಲ್ಲ. ಇಲ್ಲಿ ಯಾಕೆ ರೋಗಿಗಳು ಬರುವುದಿಲ್ಲ ಎಂದು ವೈದ್ಯಾಧಿಕಾರಿಯನ್ನು ಪ್ರಶ್ನಿಸಿದರು.
ಗುಣವಾಗದ ಕಾಯಿಲೆಯಂದ ಬಳಲುವ ಮಂದಿ ಇಲ್ಲಿಗೆ ಬರುತ್ತಾರೆ. ಇಲ್ಲಿ ಡಿದರ್ಜೆ ನೌಕರರ ಕೊರತೆ ಇದೆ, ಹಳೆ ಕಾಲದ ಉಪಕರಣಗಳು, ಕಟ್ಟಡಗಳು ದುರಸ್ತಿಗೊಳಿಸುವ ಅಗತ್ಯ ಇದೆ ಎಂದು ವೈದ್ಯಾಧಿಕಾರಿ ಮಾಹಿತಿ ನೀಡಿದರು. ಈ ಆಸ್ಪತ್ರೆಯ ಜಾಗ ಅತಿಕ್ರಮಣ ಮಾಡುವ ಸಾಧ್ಯತೆ ಇರುವುದರಿಂದ ತಕ್ಷಣ ಜಾಗದ ಸರ್ವೇ ನಡೆಸುವಂತೆ ವೈದ್ಯಾಧಿಕಾರಿಗೆ ಸೂಚಿಸಿದರು. ಇಲ್ಲಿ ವೈದ್ಯಕೀಯ ಕಾಲೇಜ್ ನಿರ್ಮಿಸಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ರೆಕ್ಕೆಗಳಿಕೆ ತುಕ್ಕು!
150 ಎಕರೆ ಜಾಗದಲ್ಲಿ 1955ರಲ್ಲಿ ಮೆಡ್ರಾಸ್ ಮುಖ್ಯಮಂತ್ರಿ ಕಾಮರಾಜನ್ ಈ ಆಸ್ಪತ್ರೆ ನಿರ್ಮಿಸಿದ್ದರು. ಆ ಬಳಿಕ ಈ ಆಸ್ಪತ್ರೆ ದುರಸ್ತಿ ಕಾಣಲೇ ಇಲ್ಲ. ಅದೇ ಕಾಲದ ಹೆಂಚು, ಅದೇ ಕಾಲದ ಮರಮಟ್ಟುಗಳು ಈಗಲೂ ಗಟ್ಟಿಯಾಗಿದೆ. ಆದರೆ ಆದೇ ಕಾಲದ ಕೆಲವು ಫ್ಯಾನ್‌ಗಳು ತುಕ್ಕು ಹಿಡಿದು ರೆಕ್ಕೆಗಳಿಂದ ಉದುರುತ್ತಿವೆ.
Advertisement