ಮೆಸ್ಕಾಂ ಕಚೇರಿಗಳಿಗೆ ಬಿಜೆಪಿ ಮುತ್ತಿಗೆ
ಸುಳ್ಯ: ಅನಿಯಮಿತವಾಗಿ ವಿದ್ಯುತ್ ಪೂರೈಕೆ ಮಾಡುತ್ತಿರುವ ಮೆಸ್ಕಾಂ ಕಾರ್ಯವೈಖರಿಯನ್ನು ವಿರೋಧಿಸಿ ಬಿಜೆಪಿ ಮಂಡಲ ಸಮಿತಿ ಹಾಗೂ ರೈತ ಮೋರ್ಚಾಗಳ ವತಿಯಿಂದ ಸೋಮವಾರ ಸುಳ್ಯದ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲಾಯಿತು.
ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಇಲಾಖೆಯನ್ನು ಕೊಳ್ಳೆ ಹೊಡೆಯುವ ಹುನ್ನಾರ ಮಾಡುತ್ತಿದ್ದಾರೆ ಎಂದು ಮಾಜಿ ಜಿ.ಪಂ. ಅಧ್ಯಕ್ಷ ವೆಂಕಟಟ್ದಂಬೆಕೋಡಿ ಆರೋಪಿಸಿದರು.
ಶಾಸಕ ಎಸ್. ಅಂಗಾರ ಮಾತನಾಡಿ, ಖಾತೆಗಾಗಿ ಹೋರಾಟ ನಡೆಸಿದ ಶಿವಕುಮಾರ್ ಅವರ ಜಗಳ ಇನ್ನೂ ನಿಂತಿಲ್ಲ. ಮುಖ್ಯಮಂತ್ರಿಯೊಂದಿಗೆ ಸೇರಿ ಬೆಂಗಳೂರಿನ ಅರ್ಕಾವತಿ ಲೇಔಟ್‌ನಲ್ಲಿ ಒಂದು ವರ್ಷದಲ್ಲಿ 450 ಎಕರೆ ಜಮೀನು ಮಾಡಿಕೊಂಡಿದ್ದಾರೆ ಎಂದರು.
ಕೆಎಫ್‌ಡಿಸಿ ಮಾಜಿ ಅಧ್ಯಕ್ಷ ಎಸ್.ಎನ್. ಮನ್ಮಥ, ಸುಳ್ಯ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿದರು.
ಜಿಪಂ ಸದಸ್ಯ ನವೀನ್ ಕುಮಾರ್ ಮೇನಾಲ, ತಾಪಂ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಉಪಾಧ್ಯಕ್ಷೆ ಮಮತಾ ಬೊಳುಗಲ್ಲು, ಪಕ್ಷದ ಮುಖಂಡರದ ಉಮೇಶ್ ವಾಗ್ಲೆ, ಪ್ರಕಾಶ್ ಹೆಗ್ಡೆ, ಸುರೇಶ್ ಕಣೆಮರಡ್ಕ, ರಾಧಾಕೃಷ್ಣ ಬೊಳ್ಳೂರು, ಹರೀಶ್ ರೈ ಉಬರಡ್ಕ, ಪಿ.ಕೆ. ಉಮೇಶ್, ಜಯರಾಮ ಹಾಡಿಕಲ್ಲು, ಗುಣವತಿ ಕೊಲ್ಲಂತಡ್ಕ, ವೆಂಕಟ್ ವಳಲಂಬೆ, ರೈತ ಮೋರ್ಚಾ ಅಧ್ಯಕ್ಷ ಕಿಶೋರ್ ಕೂಜುಗೋಡು, ಕೂಸಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಪುತ್ತೂರು: ರಾಜ್ಯದ ಜನತೆಗೆ ಮತ್ತು ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವಲ್ಲಿ ರಾಜ್ಯ ಸರ್ಕಾರ ವೈಫಲ್ಯವಾಗಿದೆ ಎಂದು ಆರೋಪಿಸಿ ಮತ್ತು ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಪುತ್ತೂರು ಬಿಜೆಪಿ ಕ್ಷೇತ್ರ ಸಮಿತಿ ವತಿಯಿಂದ ಸೋಮವಾರ ಬನ್ನೂರಿನಲ್ಲಿರುವ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
ದಿನದ 24 ಗಂಟೆ ಗೃಹ ಬಳಕೆಗೆ ವಿದ್ಯುತ್ ನೀಡಬೇಕು. ರೈತರಿಗೆ ದಿನದ 8 ಗಂಟೆಗಳ ಕಾಲ ತ್ರೀಫೇಸ್ ವಿದ್ಯುತ್ ಒದಗಿಸುವಂತೆ ಪ್ರತಿಭಟನಕಾರರು ಆಗ್ರಹಿಸಿದರು.
ಬಿಜೆಪಿ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು ಮಾತನಾಡಿ, ಅಡಕೆ ಕೊಳೆರೋಗ ಪರಿಹಾರವಾಗಿ ಕೇಂದ್ರ ಸರ್ಕಾರದಿಂದ ರು. 175 ಕೋಟಿ ಬಂದಿದೆ ಎಂದು ಕಾಂಗ್ರೆಸಿಗರು ಹೇಳಿಕೊಂಡಿದ್ದಾರೆ. ಆ ಹಣವನ್ನು ಯಾರಿಗೆ ಕೊಡಲಾಗಿದೆ ಎಂಬುವುದನ್ನು ಕಾಂಗ್ರೆಸಿಗರು ತಿಳಿಸಬೇಕಾಗಿದೆ ಎಂದರು.
ಬಿಜೆಪಿ ಕ್ಷೇತ್ರ ಸಮಿತಿಯ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ, ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಹೇರಳೆ, ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ರಾಧಾಕೃಷ್ಣ ಆಳ್ವ ಸಾಜ, ಶಂಭು ಭಟ್, ಬಿಜೆಪಿ ರೈತ ಮೋರ್ಚಾದ ರಾಜ್ಯ ಸಮಿತಿಯ ಸದಸ್ಯ ಸುರೇಶ್ ಆಳ್ವ ಸಾಂತ್ಯ, ಜಿಲ್ಲಾ ಕಾರ್ಯದರ್ಶಿ ರಾಜೀವ ಭಂಡಾರಿ, ತಾಲೂಕು ಅಧ್ಯಕ್ಷ ಮನೋಹರ್ ಡಿ.ವಿ., ಬಿಜೆಪಿ ಮುಖಂಡರಾದ ಬೂಡಿಯಾರ್ ರಾಧಾಕೃಷ್ಣ ರೈ, ಜಯರಾಮ ಪೂಜಾರಿ, ಕೇಶವ ಬಜತ್ತೂರು, ಉಮೇಶ್ ಶೆಣೈ, ಕೃಷ್ಣ ನಾಯ್ಕ್, ಅರುಣ್ ಕುಮಾರ್ ಪುತ್ತಿಲ, ಪುರುಷೋತ್ತಮ ಗೌಡ ಮುಂಗ್ಲಿಮನೆ, ಗೋಪಾಲ ಭಟ್ ಕುಂಜೂರು ಪಂಜ ಇದ್ದರು.
ಬೆಳ್ತಂಗಡಿ: ಅಸಮರ್ಪಕ ವಿದ್ಯುತ್ ಸರಬರಾಜು ಖಂಡಿಸಿ, ಅನಿಯಮಿತ ಲೋಡ್ ಶೆಡ್ಡಿಂಗ್ ವಿರೋಧಿಸಿ ರಾಜ್ಯ ಸರಕಾರದ ರೈತ ವಿರೋಧಿ ನೀತಿಯನ್ನು ಧಿಕ್ಕರಿಸಿ ಭಾರತೀಯ ಜನತಾ ಪಾರ್ಟಿ ರೈತ ಮೋರ್ಚಾದ ವತಿಯಿಂದ ಸೋಮವಾರ ಬೆಳ್ತಂಗಡಿ ವಿದ್ಯುತ್ ಕಚೇರಿಗೆ ಮುತ್ತಿಗೆ ಹಾಕಿದರು. ಬೆಳ್ತಂಗಡಿ ಮೆಸ್ಕಾಂ ಅಧಿಕಾರಿ ಮೂಲಕ ಹಲವಾರು ಬೇಡಿಕೆಗಳುಳ್ಳ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್, ತಾಲೂಕು ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ರೈತ ಮೋರ್ಚಾ ತಾಲೂಕು ಅಧ್ಯಕ್ಷ ಭಾಸ್ಕರ ಸಾಲ್ಯಾನ್, ಯುವಮೋರ್ಚಾ ಜಿಲ್ಲಾಧ್ಯಕ್ಷ ರಂಜನ್ ಜಿ. ಗೌಡ, ಜಿಲ್ಲಾ ಕಾರ್ಯದರ್ಶಿ ಶಾರದಾ, ಜಿ.ಪಂ. ಮಾಜಿ ಅಧ್ಯಕ್ಷ ಕೊರಗಪ್ಪ ನಾಯ್ಕ್, ತಾಪಂ ಅಧ್ಯಕ್ಷೆ ಜಯಂತಿ ಪಾಲೇದು, ತಾಪಂ ಸದಸ್ಯರಾದ ಕೇಶವ ಎಂ, ವಿಜಯ ಗೌಡ, ಜಯಂತ್ ಕೋಟ್ಯಾನ್, ಸಂತೋಷ್ ಲಾಲ, ಮುಖಂಡರಾದ ಪದ್ಮನಾಭ ಅರ್ಕಜೆ, ಶಶಿಧರ ಕಲ್ಮಂಜ, ಹರೀಶ್ ಸಾಲಿಯಾನ್, ರಕ್ಷಿತ್ ಶೆಟ್ಟಿ ಇದ್ದರು.
ಬಿ.ಸಿ. ರೋಡ್: ಪ್ರತಿಭಟನೆ
ಬಂಟ್ವಾಳ: ಅನಿಯಮಿತ ವಿದ್ಯುತ್ ಕಡಿತ, ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಮತ್ತು ರೈತ ಮೋರ್ಚಾ ವತಿಯಿಂದ ಜಂಟಿಯಾಗಿ ಸೋಮವಾರ ಬಿ.ಸಿ.ರೋಡಿನಲ್ಲಿರುವ ಮೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಬಿ.ಸಿ. ರೋಡಿನ ಮುಖ್ಯ ರಸ್ತೆಯಿಂದ ಕೈಕುಂಜೆಯಲ್ಲಿರುವ ಮೆಸ್ಕಾಂ ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ಬಳಿಕ ಸಭೆ ನಡೆಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಭಟ್, ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ಜಿ. ಆನಂದ ಮಾತನಾಡಿದರು. ಬಂಟ್ವಾಳ ಕ್ಷೇತ್ರದಲ್ಲಿ ಈಗಾಗಲೇ ನಡೆಯುತ್ತಿರುವ ವಿಪರೀತವಾದ ಅನಿಯಮಿತ ವಿದ್ಯುತ್ ಕಡಿತ, ನಗರ ಫೀಡರ್‌ನಿಂದ ಗ್ರಾಮಾಂತರ ಫೀಡರ್‌ಗೆ ಅನಧಿಕೃತವಾಗಿ ವಿದ್ಯುತ್ ಪೂರೈಕೆ ಸಹಿತ ಹಲವು ಸಮಸ್ಯೆಗಳ ಬಗೆಹರಿಕೆಗೆ ಒತ್ತಾಯಿಸಿ ಮೆಸ್ಕಾಂ ಅಧಿಕಾರಿ ಉಮೇಶ್ಚಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು. ಜಿ.ಪಂ. ಸದಸ್ಯೆ ಜಯಶ್ರೀ ಪುದು, ಚೆನ್ನಪ್ಪ ಕೋಟ್ಯಾನ್, ಬಂಟ್ವಾಳ ಎಪಿಎಂಸಿ ಅಧ್ಯಕ್ಷ ನೇಮಿರಾಜ ರೈ, ತಾಪಂ ಅಧ್ಯಕ್ಷ ಯಶವಂತ ದೇರಾಜೆ, ಸದಸ್ಯರಾದ ದಿನೇಶ್ ಅಮ್ಟೂರು, ಆನಂದ ಶಂಭೂರು, ರಮೇಶ್ ಕುಡ್ಮೇರು, ಬಿಜೆಪಿ ಪ್ರಮುಖರಾದ ರಾಮದಾಸ್ ಬಂಟ್ವಾಳ, ದಿನೇಶ್ ಭಂಡಾರಿ, ಮಾಣಿಕ್ಯ ರಾಜ್‌ಜೈನ್, ಆನಂದ ಎಡ್ತೂರು, ಪುರುಷ ಸಾಲ್ಯಾನ್, ದೇವಪ್ಪ ಪೂಜಾರಿ, ಚಂದ್ರಶೇಖರ ಟೈಲರ್, ಹರಿಶ್ಚಂದ್ರ ಪೂಜಾರಿ ಇದ್ದರು.
ಪುಷ್ಪಲತಾ ಕೊಲೆಗೆ 2 ತಿಂಗಳು: ಸೆರೆಯಾಗಿಲ್ಲ ಹಂತಕ
ಉಪ್ಪಿನಂಗಡಿ: ಹಾಡಹಗಲೇ ಪುಷ್ಪಲತಾ (34) ಎಂಬ ಗೃಹಿಣಿಯನ್ನು ಉಪ್ಪಿನಂಗಡಿಯಲ್ಲಿ ಕತ್ತು ಇರಿದು ಕೊಲೆಗೈದ ಪ್ರಕರಣಕ್ಕೆ ಇಂದಿಗೆ ಎರಡು ತಿಂಗಳು ಪೂರ್ಣಗೊಂಡರೂ ಹಂತಕನ ಬಂಧನವಾಗದೇ ಇರುವುದು ಪೊಲೀಸ್ ಇಲಾಖೆ ಸಾಮರ್ಥ್ಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರಶ್ನಿಸುವಂತಾಗಿದೆ.
ಬಟ್ಟೆ ಬರೆಗಳನ್ನು ಒಗೆಯುವ ಕಾರ್ಯದಲ್ಲಿ ನಿರತಳಾಗಿದ್ದ ಈಕೆಯನ್ನು ಹಂತಕ ನೆಂಟನಂತೆಯೋ, ಪರಿಚಯಸ್ಥನಂತೆಯೋ ಬಂದು ಕೊಲೆಗೈದಿರುವ ಸಾಧ್ಯತೆ ಸ್ಥಳ ಪರಿಶೀಲನೆ ವೇಳೆ ಕಂಡು ಬಂದಿದ್ದು, ತನಿಖೆಯಲ್ಲಿ ಈ ಅಂಶವಾಗಲಿ, ಬೇರೆ ಬೇರೆ ದೃಷ್ಟಿಕೋನದ ಅಂಶಗಳಗಾಲಿ ಈ ತನಕ ಹಂತಕನ ಪತ್ತೆಗೆ ನೆರವಾದಂತಿಲ್ಲ.
ಒಂದೆಡೆ ಪತ್ನಿಯ ಕೊಲೆಯಿಂದಾಗಿ ಮೊದಲ ಶಂಕೆ ಪತಿ ಗುರುಮೂರ್ತಿ ಮೇಲೆ ನೆಟ್ಟಿದ್ದರೂ ಸಾಂದರ್ಭಿಕ ಅಂಶಗಳು ಪತಿ ಮೇಲಿನ ಶಂಕೆ ನಿವಾರಿಸುವಂತಿದೆ.
ಮೃತ ಮಹಿಳೆ ಜೊತೆ ಆತ್ಮೀಯತೆ ಹೊಂದಿದ್ದ ನೆಲೆಯಲ್ಲಿ, ಗುರುಮೂರ್ತಿ ಕುಟುಂಬಕ್ಕೆ ಸಾಮೀಪ್ಯ ಹೊಂದಿದ್ದ ನೆಲೆಯಲ್ಲಿ ಅವರಿವರನ್ನು ವಶಕ್ಕೆ ತೆಗೆದು ವಿಚಾರಣೆ ನಡೆಸಿದ್ದನ್ನು ಬಿಟ್ಟರೆ, ಈ ವಿಚಾರಣೆಯಿಂದ ಯಾವುದೇ ನಿಖರ ಫಲಿತಾಂಶ ಬಂದಿಲ್ಲ. ಹಂತಕನ ಜಾಡನ್ನು ಬೆನ್ನತ್ತಿ ಹೊರಜಿಲ್ಲೆಗೆ, ಹೊರ ರಾಜ್ಯಕ್ಕೆಲ್ಲಾ ತನಿಖಾ ತಂಡ ಹೋಗಿ ಬಂದಿರುವುದು ಕೂಡಾ ತನಿಖಾ ಪ್ರಕ್ರಿಯೆ ನಡೆಯುತ್ತಿದೆ ಎನ್ನುವುದಕ್ಕೆ ಮಾತ್ರ ಪುರಾವೆ ಒದಗಿಸುತ್ತದೆ.
ಮಹಿಳಾ ಶಾಸಕಿ ಶಕುಂತಳಾ ಶೆಟ್ಟಿಯವರ ಕ್ಷೇತ್ರದಲ್ಲೇ ಈ ರೀತಿಯ ದಾರುಣ ಹತ್ಯೆ ನಡೆದರೂ ಹಂತಕನ ಪತ್ತೆಯಾಗದೇ ಉಳಿದಿರುವುದು ಕೂಡಾ ವಿಪರ್ಯಾಸ.
ನಿಧಾನ ಚಲಿಸಿ!
ಬಂಟ್ವಾಳ: ಮಂಗಳೂರು- ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರ ಮೆಲ್ಕಾರ್ ಜಂಕ್ಷನ್ ರಸ್ತೆಯಲ್ಲಿ ಹೊಂಡಗಳು ಬಾಯಿ ತೆರೆದು ನಿಂತಿವೆ. ಹೆದ್ದಾರಿ ಉದ್ದಕ್ಕೂ ಅಲ್ಲಲ್ಲಿ ಹೊಂಡಗಳು ತುಂಬಿ ಪ್ರಯಾಣ ಅಪಾಯಕಾರಿಯಾಗಿದೆ. ರಸ್ತೆ ಬದಿಯ ಚರಂಡಿ ಹೂಳೆತ್ತದೆ ನೀರು ಹೆದ್ದಾರಿಯಲ್ಲಿ ಹರಿದು ಗುಂಡಿಗಳು ಬಿದ್ದಿವೆ ಎನ್ನುವುದು ಸ್ಥಳೀಯರ ಆರೋಪ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ