ಸುಬ್ರಹ್ಮಣ್ಯ: ಕುಮಾರಧಾರಾ ಸೇತುವೆ ಮತ್ತೆ ಮುಳುಗಡೆ
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಪರಿಸರದಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಮಳೆ ತೀವ್ರತೆ ಪಡೆದಿದೆ. ಘಟ್ಟ ಪರಿಸರದಲ್ಲಿ ಮಳೆ ಅಧಿಕಗೊಂಡ ಪರಿಣಾಮ ಸಂಜೆ 3.30ರ ವೇಳೆಗೆ ಧಿಡೀರ್ ಆಗಿ ಮತ್ತೆ ಕುಮಾರಧಾರಾ ಸೇತುವೆ ಮುಳುಗಡೆಗೊಂಡಿದ್ದು ತಡರಾತ್ರಿ ವರೆಗೂ ಜಲಾವೃತ ಪರಿಸ್ಥಿತಿ ಮುಂದುವರಿಯಿತು.
ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಸಂಜೆ ಹೊತ್ತು ಶಾಲಾ ಬಿಡುವಿನ ವೇಳೆ ಆದುದರಿಂದ ವಿದ್ಯಾರ್ಥಿಗಳು ಕುಮಾರಧಾರಾ ದಡದಲ್ಲಿ ಕಾಯಬೇಕಾದ ಪರಿಸ್ಥಿತಿ ಎದುರಾಯಿತು. ಸುಬ್ರಹ್ಮಣ್ಯ ಸೇರಿದಂತೆ ಅಸುಪಾಸಿನಲ್ಲಿ ಹಗುರ ಮಳೆ ಮುಂದುವರಿದಿದೆ. ಘಟ್ಟ ಪ್ರದೇಶದಲ್ಲಿ ಸತತ ಮಳೆಯಾಗುತ್ತಿರುವುದರಿಂದ ಕುಮಾರಧಾರಾ ನದಿ ಉಕ್ಕಿ ಹರಿಯುತ್ತಿದ್ದು ಸುಬ್ರಹ್ಮಣ್ಯ ಸಮೀಪದ ಈ ಸಂಪರ್ಕ ಸೇತುವೆ ಪದೇ ಪದೆ ಜಲಾವೃತವಾಗುತ್ತಿದೆ.
ಕಟ್ಟಿಗೆಯಲ್ಲಿ ಹೊಡೆವೆನಂದ ಗಟ್ಟಿಗಿತ್ತಿ; ಅತ್ಯಾಚಾರ ಮಾಡಲು ಬಂದವ ಪರಾರಿ
ಉಪ್ಪಿನಂಗಡಿ: ಅತ್ಯಾಚಾರ ಮಾಡಲು ಬಂದವನನ್ನು ಕೈಯ್ಯಲ್ಲಿದ್ದ ಕಟ್ಟಿಗೆಯಿಂದ ಹೊಡೆದು ಕೊಲ್ಲುವೆ ಎಂದು ಮಹಿಳೆ ಬೆದರಿಸಿದ ಹಿನ್ನೆಲೆಯಲ್ಲಿ ಆತ ಪರಾರಿಯಾದ ಘಟನೆ ಇಲ್ಲಿಗೆ ಸಮೀಪದ ಶಿಬಾಜೆ ಗ್ರಾಮದಲ್ಲಿ ನಡೆದಿದೆ.
ಶಿಬಾಜೆ ಸಮೀಪದ ನಿವಾಸಿ 40ರ ಹರೆಯದ ವಿಧವೆ, ಎರಡು ಮಕ್ಕಳ ತಾಯಿಯಾಗಿರುವ ಮಹಿಳೆಯನ್ನು ಶಿಬಾಜೆ ಗ್ರಾಮದ ನಿರಾನ ಮನೆ ನಿವಾಸಿ ವಿಶ್ವನಾಥ ಶೆಟ್ಟಿ (45) ಎಂಬಾತ ಅತ್ಯಾಚಾರಕ್ಕೆ ಯತ್ನಿಸಿದ. ಈ ಸಂದರ್ಭ ಬಚ್ಚಲು ಮನೆಯಲ್ಲಿದ್ದ ಮಹಿಳೆ ಕಟ್ಟಿಗೆಯಿಂದ ಹೊಡೆದು ಕೊಲ್ಲುವುದಾಗಿ ಬೆದರಿಸಿದ ಹಿನ್ನೆಲೆಯಲ್ಲಿ, ಜೀವ ಬೆದರಿಕೆಯೊಡ್ಡಿದ ಆರೋಪಿ ಪಲಾಯನ ಮಾಡಿದ್ದಾನೆಂದು ದೂರಿನಲ್ಲಿ ತಿಳಿಸಲಾಗಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕಾರ್ಯ ಕೈಗೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ