ಲಲಿತಕಲಾ ಅಕಾಡೆಮಿ ಸಮಾವೇಶ

Updated on: 

ದಾವಣಗೆರೆ: ಕರ್ನಾಟಕ ಲಲಿತ ಕಲಾ ಅಕಾಡೆಮಿ ಸುವರ್ಣ ಮಹೋತ್ಸವವನ್ನು 2014ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಮಾದರಿಯಲ್ಲಿ ಅದ್ಧೂರಿಯಾಗಿ ಕಲಾವಿದರು, ಕಲಾಕೃತಿ, ಕಲಾ ಪ್ರಾತ್ಯಕ್ಷಿಕೆ ಒಳಗೊಂಡ ಸಮಾವೇಶ ನಡೆಸುವ ಚಿಂತನೆ ಇದೆ ಎಂದು ಅಕಾಡೆಮಿ ಅಧ್ಯಕ್ಷ ಚಿ.ಸು. ಕೃಷ್ಣ ಸೆಟ್ಟಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕಾಡೆಮಿ ಸುವರ್ಣ ಮಹೋತ್ಸವ ಅಂಗವಾಗಿ ನಡೆಯುವ ಸಮಾವೇಶದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಕಲಾವಿದರು, ವಿದ್ಯಾರ್ಥಿಗಳನ್ನು ಸೇರಿಸುವ ಮೂಲಕ ಕನಿಷ್ಚ 3ರಿಂದ 5 ದಿನಗಳ ಕಾಲ ಕಾರ್ಯಕ್ರಮ ಆಯೋಜಿಸುವ ಚಿಂತನೆ ಇದೆ ಎಂದರು.
ಕಲಾವಿದರಿಗೆ ಆರೋಗ್ಯ ವಿಮೆ: ಬೆಂಗಳೂರಿನ ಅನನ್ಯ ಸಂಸ್ಥೆ ಸಂಗೀತ ಕಲಾವಿದರಿಗೆ ವೈದ್ಯಕೀಯ ವಿಮೆ ಒದಗಿಸಿದಂತೆ ಅಕಾಡೆಮಿಯಿಂದ ಚಿತ್ರ ಕಲಾವಿದರಿಗೆ ಆರೋಗ್ಯ ವಿಮೆ ಮಾಡಿಸುವ ಚಿಂತನೆ ಇದೆ. ಸರ್ಕಾರ ವಾರ್ಷಿಕ 45 ಲಕ್ಷ ಅನುದಾನ ನೀಡುತ್ತಿದೆ. ಅದನ್ನು ಕೇರಳ ರಾಜ್ಯದ ಮಾದರಿಯಲ್ಲಿ 2 ಕೋಟಿಗೆ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಅವರು ಹೇಳಿದರು.
ಸಂಸ್ಕೃತಿಗೆ ಬಜೆಟ್‌ನಲ್ಲಿ 289 ಕೋಟಿ ಅನುದಾನ ಮೀಸಲಿಟ್ಟಿದ್ದಾರೆ. ಅದರಲ್ಲಿ ಶೇ.1.5 ಅನುದಾನವನ್ನು ಅಕಾಡೆಮಿಗೆ ನೀಡಬೇಕು. ಲಲಿತಕಲಾ ಅಕಾಡೆಮಿಯಲ್ಲಿ ಅಮೂಲಾಗ್ರ ಬದಲಾವಣೆ ತರಲು ಕಳೆದ 8 ತಿಂಗಳಿನಿಂದಲೂ ನಿರಂತರ ಪ್ರಯತ್ನ ನಡೆಸಿದ್ದೇವೆ.
ಯುನೆಸ್ಕೋ ನಿರ್ಧಾರದಂತೆ ಲಿಯೋನಾರ್ಡೋ ಡ ವಿಂಚಿ ಜನ್ಮದಿನ ಏ.15ನ್ನು ದೃಶ್ಯಕಲಾ ದಿನವಾಗಿ ಆಚರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ವಿಷನ್ ಡಾಕ್ಯುಮೆಂಟ್ ಸಿದ್ಧ: ಚಿತ್ರ ಪರಿಶೆ ಕಾರ್ಯಕ್ರಮವನ್ನು ಮಾ.16ರಿಂದ 2 ದಿನಗಳ ಕಾಲ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಸಲಿದ್ದೇವೆ. ಮುಂದಿನ 3 ವರ್ಷದ ಯೋಜನೆ, ಗುರಿ, ಕಾಲಮಿತಿ ಗುರುತಿಸಿ, ಅದರಂತೆ ನಡೆಸಲು ಕ್ಷೇತ್ರದ ಪರಿಣತರ ನೇತೃತ್ವದ ಒಂದು ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸಿದ್ದೇವೆ ಎಂದು ಅವರು ವಿವರಿಸಿದರು.
ವೆಬ್‌ಸೈಟ್: ಕನ್ನಡ, ಇಂಗ್ಲೀಷ್ ಭಾಷೆ ಒಳಗೊಂಡ ವೆಬ್‌ಸೈಟ್ ರೂಪಿಸಿದ್ದೇವೆ. ಢಿಢಿಢಿ.ಟಛಟ್ಝಡಿಛ್ಞಛಟಛ್ಞಛ್ಠಟಿಛಡಿಛ್ಞಛ.್ಟ್ಠ್ಜ ನಲ್ಲಿ ಸಾಂಪ್ರಾದಾಯಿಕ, ಸಮಕಾಲೀನ ಕಲಾ ಇತಿಹಾಸ, 400 ಕಲಾವಿದರ ಪರಿಚಯ, ಅಕಾಡೆಮಿ ಚಟುವಟಿಕೆ ಸೇರಿದಂತೆ ಹಲವಾರು ಅಂಶಗಳನ್ನು ವೆಬ್‌ಸೈಟ್ ಒಳಗೊಂಡಿದೆ ಎಂದು ಅವರು ಮಾಹಿತಿ ನೀಡಿದರು.
ರಾಜ್ಯದೆಲ್ಲೆಡೆ ವ್ಯಾಪಕವಾಗಿ ಕಲಾ ರಸಗ್ರಹಣ ಕಮ್ಮಟ ನಡೆಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಮಂಗಳೂರು, ಬೆಳಗಾವಿ, ಗುಲ್ಬರ್ಗಾ, ಶಿವಮೊಗ್ಗದಲ್ಲಿ ನಡೆಸುವ ಚಿಂತನೆ ಇದೆ. ಸಮಕಾಲೀನ ಕಲೆ ಬಗ್ಗೆ ಅರಿವು ಮೂಡಿಸಲು, ವಿವಿಧೆಡೆ 3 ತಿಂಗಳಿಗೆ ಒಮ್ಮೆ ನಡೆದರೆ, ಪ್ರತಿ ತಿಂಗಳ 3ನೇ ಗುರುವಾರ ನಯನ ರಂಗ ಮಂದಿರದಲ್ಲಿ ಉಪನ್ಯಾಸ ಮಾಲೆ ಆಯೋಜಿಸಲಾಗುತ್ತಿದೆ ಎಂದು ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶಿವರುದ್ರಪ್ಪ, ಹಿರಿಯ ಕಲಾವಿದರಾದ ಕಮ್ಮಾರ, ಅರಳಗುಪ್ಪಿ, ತುಮಕೂರಿನ ಯುವ ಕಲಾವಿದರಾದ ಪಿ. ಸಿದ್ದರಾಜು, ಎಸ್. ಸುದರ್ಶನ್, ಆದೇಶ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com