ಬೆಂಗಳೂರು: ಮುಸ್ಲಿಂ ಸಮುದಾಯಕ್ಕೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಅನ್ವಯವಾಗುತ್ತದೆ. ಯಾವುದೇ ಧರ್ಮದ ನಿಯಮಗಳು ಸಾಂವಿಧಾನಿಕ ನಿಯಮಗಳಿಗಿಂತ ದೊಡ್ಡದಲ್ಲ ಎಂದು ಧಾರವಾಡ ಹೈಕೋರ್ಟ್ ಸಂಚಾರಿ ಪೀಠ ಮಹತ್ವದ ಆದೇಶ ನೀಡಿದೆ.
ಇಸ್ಲಾಂ ನಿಯಮದ ಪ್ರಕಾರ ಪ್ರೌಢಾವಸ್ಥೆಗೆ ತಲುಪಿರುವ ತನ್ನ ವಿವಾಹಕ್ಕೆ ಅವಕಾಶ ಕಲ್ಪಿಸಬೇಕು ಎಂದು ಕೋರಿ 16ವರ್ಷದ ಸೀಮಾ ಬೇಗಂ ಎಂಬುವರು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ವಜಾಗೊಳಿಸಿರುವ ನ್ಯಾ. ಅಶೋಕ್ ಬಿ. ಹಿಂಚಿಗೇರಿ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಬಾಲ್ಯ ವಿವಾಹ ನಿಷೇಧ ಕಾಯ್ದೆ ಇಡೀ ರಾಜ್ಯಕ್ಕೆ ಅನ್ವಯವಾಗುತ್ತದೆ. ಇದನ್ನು ಯಾವುದೇ ಧರ್ಮದ ಜನರು ಉಲ್ಲಂಘಿಸಲಾಗದು. ವೈಯಕ್ತಿಕ ಧರ್ಮ, ನೀತಿ ನಿಯಮಗಳು ಸಾಂವಿಧಾನಿಕ ಧರ್ಮವನ್ನು ಮೀರಿದ್ದಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಇಸ್ಲಾಂ ಕಾನೂನಿನ ಪ್ರಕಾರ, ಯಾವುದೇ ವ್ಯಕ್ತಿ ಮಾನಸಿಕವಾಗಿ ಸ್ವಸ್ಥನಾಗಿದ್ದು, ಪ್ರೌಢಾವಸ್ಥೆ ತಲುಪಿದ ಕೂಡಲೇ ವಿವಾಹವಾಗುವ ಹಕ್ಕು ದೊರಕುತ್ತದೆ ಎಂಬ ಅರ್ಜಿದಾರರ ವಾದವನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ಪೀಠ, ಇಸ್ಲಾಂ ಧರ್ಮದ ಪ್ರತಿಯೊಬ್ಬ ವ್ಯಕ್ತಿ ಕೂಡ ಸಾಂವಿಧಾನಿಕ ನೀತಿ ನಿಬಂಧನೆಗಳಿಗೆ ಒಳಪಡುತ್ತಾನೆ ಎಂದು ಸ್ಪಷ್ಟಪಡಿಸಿದೆ.
ಅಪರಾಧಕ್ಕೆ ಬೆಂಬಲ: ಅರ್ಜಿದಾರರ ಕೋರಿಕೆಯನ್ನು ವಿರೋಧಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಕೆ.ಎಂ.ನಟರಾಜ್, ಸಂವಿಧಾನದ ನಿಯಮದ ಪ್ರಕಾರ, ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ. ಇದೀಗ ಅಪ್ರಾಪ್ತ ವಯಸ್ಸಿನಲ್ಲಿ ವಿವಾಹಕ್ಕೆ ಅವಕಾಶ ಕಲ್ಪಿಸಿದಲ್ಲಿ ಅಪರಾಧ ಎಸಗಲು ಧರ್ಮವೇ ಬೆಂಬಲ ನೀಡಿದಂತಾಗುತ್ತದೆ ಎಂದು ಆಕ್ಷೇಪಿಸಿದರು.
ಯಾವುದೇ ಮಗುವಿನ ಬಾಲ್ಯ ಉಳಿಸಲು, ಶಿಕ್ಷಿತರನ್ನಾಗಿಸಲು ಹಾಗೂ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳುವ ಉದ್ದೇಶದಿಂದ ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ಇದನ್ನು ವೈಯಕ್ತಿಕ ಧರ್ಮ, ನಿಯಮದ ಹೆಸರಿನಲ್ಲಿ ಉಲ್ಲಂಘಿಸಲು ಯಾರಿಗೂ ಹಕ್ಕಿಲ್ಲ ಎಂದು ಅವರು ವಾದಿಸಿದರು.
ಬಾಲ್ಯ ವಿವಾಹ ನಿಷೇಧ ಕಾಯ್ದೆ ಸಮಾಜದ ಪ್ರತಿ ವರ್ಗಕ್ಕೂ ಅನ್ವಯವಾಗುತ್ತದೆ. ಇದರಿಂದ ಯಾವುದೇ ಧರ್ಮ ಹೊರಗುಳಿಯಲು ಸಾಧ್ಯವಿಲ್ಲ ಎಂಬ ವಾದ ಪರಿಗಣಿಸಿದ ಪೀಠ, ಅರ್ಜಿಯನ್ನು ವಜಾಗೊಳಿಸಿದೆ.
ವಿವಾದವೇನು?
ತನಗೆ 16 ವರ್ಷಕ್ಕೆ ವಿವಾಹವಾಗಲು ಅವಕಾಶ ಕಲ್ಪಿಸಬೇಕು ಎಂದು ಕೋರಿ ಕೊಪ್ಪಳ ತಾಲೂಕಿನ ಸೀಮಾ ಬೇಗಂ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಅವರ ತಂದೆ, ತಮ್ಮ ಮಗಳಿಗೆ 2012ರ ನವೆಂಬರ್ 4ರಂದು ವಿವಾಹ ನಿಶ್ಚಯವಾಗಿತ್ತು. ಆದರೆ, ಅಂದು ಮಧ್ಯೆ ಪ್ರವೇಶಿಸಿದ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆಯ ಸಂಯೋಜಕರು ವಿವಾಹಕ್ಕೆ ಅಡ್ಡಿಪಡಿಸಿದ್ದಾರೆ.
2000ದ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ 18 ವರ್ಷಕ್ಕಿಂತ ಮುಂಚೆ ವಿವಾಹ ಮಾಡುವಂತಿಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ. ಇದರಿಂದ ವಿವಾಹದ ಸಂಪೂರ್ಣ ತಯಾರಿ, ಅತಿಥಿಗಳಿಗೆ ತಯಾರಿಸಿದ್ದ ಆಹಾರ ಪ್ರತಿಯೊಂದು ವ್ಯರ್ಥವಾಗಿದ್ದು, ತಮಗೆ ಬಹಳ ನಷ್ಟವಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು. ತಾವು ಇಸ್ಲಾಂ ಧರ್ಮಕ್ಕೆ ಸೇರಿದವರಾದ್ದರಿಂದ ಬಾಲ್ಯ ವಿವಾಹ ನಿಷೇಧ ಕಾಯ್ದೆ ತಮಗೆ ಅನ್ವಯಿಸುವುದಿಲ್ಲ. ಇಸ್ಲಾಂ ಧರ್ಮದ ಪ್ರಕಾರ, ಪ್ರೌಢಾವಸ್ಥೆಗೆ ತಲುಪಿದ ಹಾಗೂ ಮಾನಸಿಕವಾಗಿ ಸ್ವಸ್ಥ್ಯರಾಗಿರುವರು ವಿವಾಹಕ್ಕೆ ಯೋಗ್ಯರು. ತಮಗೆ ವಿನಾಕಾರಣ ಕಿರುಕುಳ ನೀಡಲಾಗಿದ್ದು, ತಮಗೆ ವಿವಾಹ ನೆರವೇರಿಸಲು ಅವಕಾಶ ಕಲ್ಪಿಸಬೇಕು ಎಂದು ಅರ್ಜಿದಾರರು ಕೋರಿದ್ದರು.