ಪುರುಷ ಪ್ರಧಾನ ಧೋರಣೆ ಬದಲಾಗಲಿ

Updated on: 

ಮಾ. 8 ಮಹಿಳಾ ದಿನಾಚರಣೆ. ಇದರಂಗವಾಗಿ ಧಾರವಾಡದ ವಿವಿಧ ಸಂಘ ಸಂಸ್ಥೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ಮಹಿಳಾ ದಿನಾಚರಣೆ ಆಚರಿಸಿದವು.
ಸಮಾಜ ಪುರುಷ ಪ್ರಧಾನ ಧೋರಣೆಯಿಂದ ಮುಕ್ತವಾದಾಗ ಮಾತ್ರ ಮಹಿಳೆ ಆರೋಗ್ಯಯುತವಾಗಿ ಬದುಕಲು ಸಾಧ್ಯ ಎಂದು ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಹೇಳಿದರು. ಇಲ್ಲಿನ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಸಹಯೋಗದಲ್ಲಿ ಶುಕ್ರವಾರ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದು ಸಮಾಜದಲ್ಲಿ ಮಹಿಳೆಯರನ್ನು ಕಾಣುವ ಮನೋಭಾವ ಬದಲಾಗಬೇಕಿದೆ. ಗುಂಪು ಅತ್ಯಾಚಾರ, ಚುಡಾಯಿಸುವಿಕೆ, ವರದಕ್ಷಿಣೆ, ಸಾವು ಈ ಘಟನೆಗಳು ದಿನೇ ದಿನೇ ಹೆಚ್ಚುತಿದ್ದು ಮಹಿಳೆಗೆ ಆತಂಕದ ವಾತಾವರಣವನ್ನು ಸೃಷ್ಟಿಸಿದೆ. ದೆಹಲಿ ಅತ್ಯಾಚಾರದ ಘಟನೆ ಮಹಿಳೆಯನ್ನು ನೋಡುವ ದೃಷ್ಟಿಕೋನಕ್ಕೆ ಕನ್ನಡಿ ಹಿಡಿದಂತಿದೆ. ಹಾಗೆಯೇ ಇಂದು ಪ್ರಸಾರವಾಗುತ್ತಿರುವ ಅಶ್ಲೀಲ ಕಾರ್ಯಕ್ರಮಗಳು ಇಂತಹ ಘಟನೆಗಳು ಮರುಕಳಿಸಲು ಪುಷ್ಟಿ ನೀಡುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು. ಪ್ರಾಚಾರ್ಯ ಪ್ರೊ. ಎಂ.ವಿ. ಕಿಣಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘಟನೆ ಜಿಲ್ಲಾ ಸಂಚಾಲಕಿ ಪ್ರಭಾವತಿ ಗೂಗಲ್, ಉಪನ್ಯಾಸಕಿ ಸಂಧ್ಯಾ ಕುಲಕರ್ಣಿ, ವಚನ ಪೂಜೇರ, ಅಂಜನಾ ಕುಲಕರ್ಣಿ ಇದ್ದರು.
ಜೆಎಸ್ಸೆಸ್ ಕಾಲೇಜಿನಲ್ಲಿ: ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯ ತಡೆಗೆ ಸ್ತ್ರೀ ಸಬಲೀಕರಣ ಕಾರ್ಯಕ್ರಮಗಳು ಪೂರಕ. ದೇಶದಲ್ಲಿ ಎರಡು ಲಕ್ಷ ಸ್ತ್ರೀ ಸಬಲೀಕರಣ ಸಂಘಟನೆಗಳಿದ್ದು, ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರ ಕಾರ್ಯಯೋಜನೆಗಳು ದೇಶಕ್ಕೆ ಮಾದರಿ ಎಂದು ಡಾ. ಅಜಿತಪ್ರಸಾದ ಅಭಿಪ್ರಾಯಪಟ್ಟರು. ಜೆಎಸ್ಸೆಸ್ ಕಾಲೇಜಿನಲ್ಲಿ ನಡೆದ ಸ್ತ್ರೀ ಸಬಲೀಕರಣ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸ್ತ್ರೀಯರ ಸ್ಥಾನಮಾನ ಇಂದಿನ ದಿನಗಳಲ್ಲಿ ಬದಲಾಗಿದೆ. 50 ವರ್ಷಗಳ ಕೆಳಗಿದ್ದ ಪರಿಸ್ಥಿತಿ ಇಂದಿಲ್ಲ. ಮಹಿಳೆಯರು ವೈಜ್ಞಾನಿಕ, ಔದ್ಯೋಗಿಕ, ಸಾಮಾಜಿಕ, ಸಾಹಿತ್ಯಕ ರಂಗಗಳಲ್ಲಿ ಮುನ್ನಡೆ ಸ್ಥಾಪಿಸಿದ್ದಾರೆ. ಆದರೂ ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣಗಳಿಂದ ಮಹಿಳೆಯರು ಜಾಗರೂಕರಾಗಬೇಕೆಂದು ಅಭಿಪ್ರಾಯಪಟ್ಟರು. ಶಹರ ಪೊಲೀಸ್ ಠಾಣೆಯ ಪಿಎಸೈ ಆರ್. ನಾಗರತ್ನಾ ಮಾತನಾಡಿದರು. ವೈದ್ಯ ಡಾ. ಆರ್.ಎನ್. ಜೋಶಿ, ನಿವೃತ್ತ ಶಿಕ್ಷಣಾಧಿಕಾರಿ ಉಷಾ ಜೋಸೆಫ್ ಮಾತನಾಡಿದರು. ಪ್ರಾಚಾರ್ಯ ಡಾ. ಎಸ್.ಎನ್. ಹೆಗಡೆ, ಜಯಶ್ರೀ ಭಾಗವತ, ಡಾ. ಚಿತ್ರಾ ದೈಜೋಡೆ, ಡಾ. ಆರ್. ಪರಿಮಳ, ಅವಂತಿಕಾ ರೊಟ್ಟಿ, ರುಬೀನಾ ಬಿಜಾಪುರ ಇದ್ದರು.
ಜೆಎಸ್ಸೆಸ್ ಸ್ನಾತಕೋತ್ತರ ಅಧ್ಯಯನ ಸಂಸ್ಥೆ: ಜೆಎಸ್ಸೆಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಪ್ರಾಚಾರ್ಯ ಡಾ. ಅಜಿತ ಪ್ರಸಾದ ಮಾತನಾಡಿದರು. ಪ್ರೊ. ಶರದ್ ದೇಸಾಯಿ, ಎನ್.ಎಲ್. ಗುಡ್ಡಿನ, ವಿಭಾ ಮುಗಳಿ, ಸೂರಜ ಜೈನ್ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com