ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶಕ್ಕೆ ಸಂಬಂಧಿಸಿದಂತೆ ಎರಡು ಪ್ರಮುಖ ರಾಜಕೀಯ ಪಕ್ಷಗಳ ಬೆಂಬಲಿಗರ ಮಧ್ಯೆ ಹೊಡೆದಾಟ ನಡೆದು ಇಬ್ಬರು ಗಾಯಗೊಂಡ ಘಟನೆ ಸೋಮವಾರ ರಾತ್ರಿ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಬೆಂಬಲಿಗರಾದ ಸಂಜಯ ರಾಮಣ್ಣ ಜಾಧವ ಹಾಗೂ ಪರುಶುರಾಮ ಶಿಂಧೆ ಎಂಬಿಬ್ಬರ ಮೇಲೆ ಸೋಡಾ ಬಾಟಲಿಯಿಂದ ಹಲ್ಲೆ ನಡೆಸಲಾಗಿದ್ದು ಗಾಯಾಳುಗಳು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದು ರಾಷ್ಟ್ರೀಯ ಪಕ್ಷದ ಬೆಂಬಲಿಗರಾದ ರಫೀಕ್ ಮೌಲಾನಾ ಕುಸನೂರ, ಲಾಲಸಾಬ್ ಕಲಕೇರಿ, ನದೀಮ್ ಪಠಾಣ, ಶಿವಪುತ್ರ ಪಾಟೀಲ ಹಾಗೂ ರಾಜು ಹುಬ್ಬಳ್ಳಿ ಹಲ್ಲೆ ನಡೆಸಿದ್ದವರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಘಟನೆಗೆ ಸಂಬಂಧಿಸಿದಂತೆ ವಿದ್ಯಾನಗರ ಪೊಲೀಸರು ನಾಲ್ವರನ್ನು ಬಂಧಿಸಿದ್ದು ರಾಜು ಎಂಬುವ ತಲೆಮರೆಸಿಕೊಂಡಿದ್ದಾನೆ. ಈ ಎರಡೂ ಪಕ್ಷಗಳ ಬೆಂಬಲಿಗರ ಮಧ್ಯೆ ಮೊದಲಿಂದಲೂ ದ್ವೇಷವಿತ್ತನ್ನೆಲಾಗಿದ್ದು, ಸೋಮವಾರ ಪ್ರಕಟಗೊಂಡ ಚುನಾವಣಾ ಫಲಿತಾಂಶ ಪರಸ್ಪರರ ಮಧ್ಯೆ ಘರ್ಷಣೆ ಸಂಭವಿಸಲು ಕಾರಣವಾಗಿದೆ ಎಂದು ಹೇಳಲಾಗಿದೆ. ರಾತ್ರಿ ಸುಮಾರು 10.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ವಿದ್ಯಾನಗರ ಠಾಣೆ ಇನ್ಸ್ಪೆಕ್ಟರ್ ಗಿರೀಶ ರೋಡಕರ್ ಸಿಬ್ಬಂದಿಯೊಂದಿಗೆ ತೆರಳಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.