ಅಪರೂಪ ತಳಿ ಸಮುದಾಯ ಬೀಜ ಬ್ಯಾಂಕ್

Published on

-ಬಸವರಾಜ ಹಿರೇಮಠ
ಧಾರವಾಡ: ಸಕ್ಕರೆ ರೋಗಿಗಳಿಗೆ ಡಯಾಬಿಟೀಸ್ ಅಕ್ಕಿ, ಬಾಣಂತಿ ಬತ್ತ. ಅಕ್ಕಿಗೊಂದು, ಅವಲಕ್ಕಿಗೊಂದು, ನುಚ್ಚಿಗೊಂದು, ತಂಬಿಟ್ಟಿಗೆ ಇನ್ನೊಂದು. ರೊಟ್ಟಿಗೊಂದು, ಚಕ್ಕುಲಿಗೆ ಇನ್ನೊಂದು. ಇನ್ನು, ಬರೀ ಪಾಲಿಷ್ ಅಕ್ಕಿ ತಿಂದು ಬೇಸರವಾಗಿದ್ದರೆ ರುಚಿಗೆ ಮತ್ತೊಂದು....!
ಹೀಗೆ ತರಹೇವಾರಿ ತಳಿಗಳ ಬತ್ತ ಮಾತ್ರವಲ್ಲ, ಅಪರೂಪದ ದೇಸಿ ತಳಿಗಳ ಸಂಗ್ರಹವೇ ಇಲ್ಲಿದೆ. ಅಪರೂಪದ ದೇಸಿ ತಳಿಗಳನ್ನು ಸಂಗ್ರಹಿಸಿ, ಅಭಿವೃದ್ಧಿ ಪಡಿಸಿ ಪೀಳಿಗೆಯಿಂದ ಪೀಳಿಗೆ ಹಂಚುವ ಕಾರ್ಯ ಎಗ್ಗಿಲ್ಲದೇ ನಡೆಯುತ್ತಿದೆ.
ಇಂಥದ್ದೊಂದು ಅಪರೂಪದ ಕಾರ್ಯವನ್ನು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗುಂಡೇನಟ್ಟಿಯ ಸಿದ್ಧಾರೂಢ ಸಾವಯವ ಕೃಷಿಕರ ಬಳಗ ಕಟ್ಟಿಕೊಂಡ ಸಮುದಾಯ ಬೀಜ ಬ್ಯಾಂಕ್ ಮಾಡುತ್ತಿದೆ. ಈ ಬ್ಯಾಂಕ್ ಅಭಿವೃದ್ಧಿಪಡಿಸಿದ ತಳಿಗಳನ್ನು ಧಾರವಾಡದ ಕೃಷಿ ವಿವಿಯಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಪ್ರದರ್ಶಿಸುತ್ತಿದ್ದು, ಎಲ್ಲರ ಗಮನವನ್ನೂ ಸೆಳೆಯುತ್ತಿದೆ.
ಗ್ರೀನ್ ಫೌಂಡೇಷನ್ ಸಹಕಾರದೊಂದಿಗೆ ಕಳೆದ ಏಳು ವರ್ಷಗಳಿಂದ ಗುಂಡೇನಹಟ್ಟಿಯ ಸುಮಾರು 40 ರೈತರೇ ಸೇರಿಕೊಂಡು ಸಮುದಾಯ ಬೀಜ ಬ್ಯಾಂಕ್ ಸ್ಥಾಪಿಸಿಕೊಂಡಿದ್ದಾರೆ. ಇದರ ಮೂಲಕ ದೇಸಿ ಹಾಗೂ ಜವಾರಿ ಬೀಜಗಳ ಸಂಸ್ಕೃತಿಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.
ಯಾವ್ಯಾವ ತಳಿಗಳು?: ಬತ್ತದಲ್ಲಿಯೇ ವೈವಿಧ್ಯಮಯ ಎನ್ನಬಹುದಾದ ಮತ್ತು ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿರುವ ಕೆಂಪಕ್ಕಿ, ಪಲಾವ್‌ಗೆ ಸೂಕ್ತವಾದ ಕುಂಕುಮಸಾಳಿ, ಬಿರಿಯಾನಿಗೆ ಹೆಸರಾದ ಜೀರಿಗೆ ಸಣ್ಣ, ಮೈಸೂರು ಮಹಾರಾಜರ ಮನಗೆದ್ದ ರಾಜಮುಡಿ, ಘಮ ಘಮ ಎನ್ನುವ ಗಂಧಸಾಳಿ, ಸರ್ಪಸುತ್ತಿಗೆ ಔಷಧೀಯ ಕರಿಬತ್ತ, ಬಾಣಂತಿಗೆ ಬೇಕಾದ ಕರಿ ಗಿರಜವಿಲಿ, ಅವಲಕ್ಕಿ ಮಾಡಲು ಸೊರಟಾ ಅಕ್ಕಿ, ಪಾಯಸಕ್ಕೆ ಹೆಸರಾದ ಬರ್ಮಾ ಕಪ್ಪ ಅಕ್ಕಿ, ಮೂಲವ್ಯಾಧಿ ಮತ್ತು ನಿಶ್ಯಕ್ತಿಗೆ ಕೇರಳದ ನವರಾ ಹೀಗೆ ಸುಮಾರು 70 ವಿವಿಧ ಬಗೆಯ ಅಪರೂಪದ ಅಕ್ಕಿ ತಳಿಗಳನ್ನು ಈ ಕೃಷಿಕರ ಬಳಗ ತಮ್ಮೂರಲ್ಲಿಯೇ ಬೆಳೆದು ಇನ್ನುಳಿದ ರೈತರಿಗೂ ಬೆಳೆಯಲು ಪ್ರೇರಣೆ ನೀಡುತ್ತಿದೆ.
ನಮ್ಮ ಹಿರಿಯರು ಜವಾರಿ ಧಾನ್ಯಗಳನ್ನು ಆಹಾರಕ್ಕೆ ಬಳಸಿ ನೂರು ವರ್ಷದ ವರೆಗೂ ಯಾವುದೇ ಕಾಯಿಲೆ ಇಲ್ಲದೇ ಬದುಕುತ್ತಿದ್ದರು. ಆದರೆ, ನಮ್ಮ ಪೀಳಿಗೆ 40 ವರ್ಷಕ್ಕೆ ಸಕ್ಕರೆ ರೋಗದಂತೆ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇದಕ್ಕೆಲ್ಲಾ ಸತ್ವ ಇಲ್ಲದ ಆಹಾರವೇ ಕಾರಣ. ಈ ಹಿನ್ನೆಲೆಯಲ್ಲಿ ಕಳೆದ ಏಳು ವರ್ಷಗಳಿಂದ ಆರಂಭವಾದ ನಮ್ಮ ಸಮುದಾಯ ಬೀಜ ಬ್ಯಾಂಕ್ ಬರೀ ಬತ್ತ ಮಾತ್ರವಲ್ಲ ತರಕಾರಿ (ಗೊಂಚಲ ಹೀರೆ, ಸಿಹಿ ಮೂಲಂಗಿ, ಎಳಲಿ ಬೆಂಡಿ, ಜವಾರಿ ಸೌತಿ ಇತ್ಯಾದಿ), ಏಕದಳ (ರಾಗಿ, ನವಣೆ, ಆರ್ಕ, ಉದಲು, ಸಾವೆ ಇತ್ಯಾದಿ) ಜೋಳ (ಮೂಲದಂಡೆ, ಗಿಡಗಂಡೆ, ನುಚ್ಚಿಗಾಗಿ ಸಕ್ಕರೆ ಮುಕ್ಕ, ಹೊಸ ಜೋಳ, ಕಡುಬಿನ ಜೋಳ) ಎಣ್ಣೆ ಕಾಳು (ಅಗಸಿ, ಸಾಸಿವೆ, ಬಿಳಿ ಹಾಗೂ ಕರೆ ಎಳ್ಳು ಇತ್ಯಾದಿ) ತಳಿಗಳನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಜವಾರಿ ಬೆಳೆಗಳು ಮಳೆ ನೆಚ್ಚಿಕೊಂಡಿಲ್ಲ. ಬರವಿದ್ದರೂ ಉತ್ತಮವಾಗಿ ಬರುತ್ತವೆ. ಹೀಗಾಗಿ ರೈತರು ಜವಾರಿ ಧಾನ್ಯಗಳನ್ನು ಬೆಳೆಯಬೇಕೆಂದು ಸಿದ್ಧಾರೂಢ ಸಾವಯವ ಕೃಷಿಕರ ಬಳಗದ ಮುಖ್ಯಸ್ಥರಾದ ಶಂಕರಪ್ಪ ಲಂಗಟಿ ಒತ್ತಾಯಿಸುತ್ತಾರೆ.
ಬಳಗದ ಭೀಮಣ್ಣ ಕಿಲಾರಿ, ಅಪರೂಪದ ಈ ತಳಿಗಳನ್ನು ಬರೀ ಸಂಗ್ರಹಿಸಿ ಇಡದೇ ಸುತ್ತಮುತ್ತಲಿನ ರೈತರಿಗೂ ಈ ತಳಿಗಳನ್ನು ಬೆಳೆಸಲು ಪ್ರೇರಣೆ ನೀಡುತ್ತಿದ್ದೇವೆ. ಅಲ್ಲದೇ, ಪ್ರತಿ ಭಾನುವಾರ ಧಾರವಾಡದ ಗಾಂಧಿ ಶಾಂತಿ ಪ್ರತಿಷ್ಠಾನದ ಎದುರು ಅಪರೂಪದ ಜವಾರಿ ಧಾನ್ಯಗಳ ಮಾರಾಟ ನಡೆಸುತ್ತೇವೆ. ದೇಸೀ ಧಾನ್ಯಗಳಿಗೆ ತುಂಬಾ ಬೇಡಿಕೆ ಇದ್ದು ಬೇಡಿಕೆ ಪೂರೈಸಲು ಆಗುತ್ತಿಲ್ಲ. ಸಾಮಾನ್ಯ ರೈತರೆಲ್ಲರೂ ದೇಸೀ ತಳಿಗಳನ್ನು ಬೆಳೆಯುವ ಮೂಲಕ ನಮ್ಮ ತಳಿ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಬೇಕು ಎನ್ನುವುದು ನಮ್ಮ ಆಶಯ (ಸಂಪರ್ಕಕ್ಕಾಗಿ -ಮೊ. 99721 50378) ಎನ್ನುತ್ತಾರೆ. ಸಾಮಾನ್ಯವಾಗಿ ಯುವ ಜನಾಂಗ ಹೆಸರೇ ಕೇಳದಂಥ ಧಾನ್ಯಗಳ ತಳಿಗಳನ್ನು ಸಣ್ಣ ಗ್ರಾಮದ ರೈತರ ತಂಡವೊಂದು ಇಷ್ಟೊಂದು ವ್ಯವಸ್ಥಿತವಾಗಿ ಸಂಗ್ರಹಿಸಿ ಮುಂದಿನ ಪೀಳಿಗೆಗೆ ಒಯ್ಯುತ್ತಿರುವುದು ಶ್ಲಾಘನೀಯ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com