-ಅಶೋಕ ಸೊರಟೂರ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಜು. 15
ಮುಂಗಾರು ಮಳೆ ಕೊರತೆ ಒಂದೆಡೆಯಾದರೆ, ಅಲ್ಪ ಸ್ವಲ್ಪ ಮಳೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆದ ಹೆಸರು ಬೆಳೆಗೆ ಈಗ ಸೀರುಕೀಟ ಬಾಧೆ ತಗುಲಿ ರೈತರ ನೆಮ್ಮದಿ ಹಾಳು ಮಾಡುತ್ತಿರುವುದು ನುಂಗಲಾರದ ತುತ್ತಾಗಿದೆ.
ಮಳೆ ಇಲ್ಲದೆ ಒಣಗಿ ಹೋಗಿದ್ದ ಬೆಳೆಗಳು ತುಂತುರು ಹನಿಗೆ ಹೇಗೊ ಜೀವ ಹಿಡಿದುಕೊಂಡು ಬೆಳೆದಿವೆ. ಬರದ ನಡುವೆ ಕೀಟಗಳು ಕುಟುಕುತ್ತಿರುವುದು ರೈತ ಸಮೂಹದ ನಿದ್ರೆಗೆಡಿಸಿದೆ. ಹೆಸರು ಬೆಳೆಯು ಇನ್ನೇನು ಹೂ ಕಟ್ಟಿ ಕಾಯಿ ಬಿಡುವ ಹಂತಕ್ಕೆ ಬಂದಾಗ ಸೀರು ಕೀಟ ಬಾಧೆ ಮೆತ್ತಿಕೊಂಡು ಕಾಯಿಗಳು ಉದರಲು ಪ್ರಾರಂಭಿಸಿವೆ. ಸೀರು ಬಾಧೆಯಿಂದ ಬೆಳೆಯು ಕಮರಿ ಹೋಗುತ್ತಿವೆ. ಹೂವುಗಳು ಉದುರಿ ಹೋಗುತ್ತಿವೆ.
ಕಾಯಿಗಳು ಸೀರು ಬಾಧೆಯಿಂದ ಕಾಳು ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದು ರೈತ ಪ್ರಧಾನೆಪ್ಪ ಬಟ್ಟೂರ ಅಳಲು ತೋಡಿಕೊಳ್ಳುತ್ತಾರೆ. ಈಗ ಮತ್ತೆ ಕೀಟ ನಿಯಂತ್ರಣ ಮಾಡಲು ಔಷಧೋಪಚಾರಕ್ಕಾಗಿ ಸಾವಿರಾರು ರುಪಾಯಿ ಖರ್ಚು ಮಾಡಿ ಸಾಲದ ಸುಳಿಗೆ ರೈತರು ಸಿಲುಕುತ್ತಿರುವುದಾಗಿ ಪಟ್ಟಣದ ಹಲವಾರು ರೈತರು ಅಭಿಪ್ರಾಯಪಡುತ್ತಾರೆ. ಹೆಸರು ಬೆಳೆಗೆ ತಗಲಿರುವ ಸೀರು ಹುಳು ಬಾಧೆಯು ರೈತರ ನೆಮ್ಮದಿಯನ್ನು ಕಸಿದುಕೊಂಡು ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಿದೆ.
ರೈತರಿಗೆ ಮಾಹಿತಿ ನೀಡಬೇಕಾದ ರೈತ ಸಂಪರ್ಕ ಕೇಂದ್ರಗಳಲ್ಲಿ ಸಾಕಷ್ಟು ಸಿಬ್ಬಂದಿ ಇಲ್ಲದೆ ಇರುವುದು, ಇದ್ದ ಸಿಬ್ಬಂದಿ ಸಹಾಯಧನದಲ್ಲಿ ಬಂದ ಬೀಜ-ಗೊಬ್ಬರ ಔಷಧಿಗಳನ್ನು ವಿತರಣೆ ಮಾಡುವುದರಲ್ಲಿ ಸಾಕು ಸಾಕಾಗಿ ಹೋಗುತ್ತಾರೆ. ಅಲ್ಲದೆ ಸರ್ಕಾರಕ್ಕೆ ನೀಡಬೇಕಾಗಿರುವ ಹಲವಾರು ಮಾಹಿತಿಗಳನ್ನು ನೀಡುವುದರಲ್ಲಿ ನಿರತರಾಗಿರುತ್ತಾರೆ. ಹೀಗಾಗಿ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಬೇಕಾದ ಮಾಹಿತಿಯನ್ನು ನೀಡುವುದಾದರೂ ಯಾರು? ಎಂದು ರೈತರು ಪ್ರಶ್ನಿಸುತ್ತಾರೆ.