ಕನ್ನಡಪ್ರಭ ವಾರ್ತೆ, ಮುಂಡರಗಿ, ಜು. 15
ಮನೆಯಲ್ಲಿರುವ ಅಜ್ಜ-ಅಜ್ಜಿ, ಅಪ್ಪ-ಅವ್ವ ಹಾಗೂ ಮತ್ತಿತರ ಹಿರಿಯರು ಮನೆತನದ ಆಚಾರ, ವಿಚಾರ ಹಾಗೂ ಸಂಸ್ಕಾರಗಳನ್ನು ಮತ್ತೊಂದು ತಲೆಮಾರಿಗೆ ವರ್ಗಾಯಿಸಬಲ್ಲವರಾಗಿದ್ದಾರೆ. ಆದ್ದರಿಂದ ಹಿರಿಯರ ಮಾರ್ಗದರ್ಶನ ಇಂದಿನ ಜನತೆಗೆ ಅತಿ ಅವಶ್ಯ ಎಂದು ಖ್ಯಾತ ಭಾಷಣಕಾರ್ತಿ ಸುಧಾ ಬರಗೂರ ಹೇಳಿದರು.
ಅವರು ಇಲ್ಲಿನ ತೋಂಟದಾರ್ಯ ಮಠದಲ್ಲಿ ಆಷಾಢ ಮಾಸದ ಅಂಗವಾಗಿ ಜರುಗುತ್ತಿರುವ ಶರಣರ ತತ್ವದರ್ಶನ ಪ್ರವಚನದ ಅಂಗವಾಗಿ ತೋಂಟದಾರ್ಯ ಸೇವಾ ಸಮಿತಿ ಹಾಗೂ ಪ್ರವಚನ ಸಮಿತಿ ಸಂಯುಕ್ತವಾಗಿ ಆಯೋಜಿಸಲಾಗಿದ್ದ ಹಾಸ್ಯಸಂಜೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಹಿಂದೆ ನಮ್ಮ ಹಿರಿಯರು ಅನೇಕ ಸಂದರ್ಭದಲ್ಲಿ ಆಯಾ ಸಂದರ್ಭಕ್ಕೆ ತಕ್ಕಂತೆ ನಗಿಸುವ ಮೂಲಕ ಬುದ್ಧಿಮಾತು ಹೇಳುತ್ತಿದ್ದರು. ಒತ್ತಡದ ಕೆಲಸಗಳ ಮಧ್ಯೆ ಇಂದು ನಮಗೆಲ್ಲರಿಗೂ ನಗು ಎನ್ನುವ ಶಬ್ದ ಬಹಳ ದೂರಕ್ಕೆ ಸರಿದುಹೋಗಿದೆ. ನಗುವಿನಿಂದ ಮನುಷ್ಯನ ಆರೋಗ್ಯದ ಜೊತೆಗೆ ಆಯುಷ್ಯವೂ ವೃದ್ಧಿಯಾಗುತ್ತದೆ. ಆದ್ದರಿಂದ ನಾವು ಎಷ್ಟೇ ಒತ್ತಡದಲ್ಲಿದ್ದರೂ ಅದನ್ನು ಮರೆಯುವುದಕ್ಕಾಗಿ ಕೆಲ ಸಮಯವಾದರೂ ನಗುವ ಮೂಲಕ ಮನಸ್ಸನ್ನು ಹಗುರ ಮಾಡಿಕೊಳ್ಳಬೇಕು.
ನಮ್ಮ ಮಕ್ಕಳಿಗೆ ಬುದ್ಧ, ಬಸವ, ಅಂಬೇಡ್ಕರ್ ಹೆಸರು ಗೊತ್ತು. ಆದರೆ, ತಮ್ಮ ಅಜ್ಜ, ಮುತ್ತಜ್ಜನ ಹೆಸರು ಗೊತ್ತಿಲ್ಲ. ಇದಕ್ಕೆ ಅವಿಭಕ್ತ ಕುಟುಂಬದ ಕೊರತೆಯೇ ಕಾರಣ ಪ್ರಮುಖ ಕಾರಣವಾಗಿದೆ. ಇಂದು ಹಿರಿಯರನ್ನು ವೃದ್ಧಾಶ್ರಮಗಳಲ್ಲಿಡುವ ಮೂಲಕ ಮಕ್ಕಳಿಗೆ ಅವರ ಗುರುತು ಪರಿಚಯವಿಲ್ಲದಂತೆ ಬೆಳೆಸುತ್ತಿರುವುದು ವಿಷಾದನೀಯವಾಗಿದೆ. ದೂರದರ್ಶನಗಳು ಜನಸಾಮಾನ್ಯರ ಹಾಗೂ ಜನಪ್ರಿಯ ವ್ಯಕ್ತಿಗಳ ಖಾಸಗಿ ಬದುಕನ್ನು ರಂಜನೀಯಗೊಳಿಸಿ ಅವುಗಳನ್ನು ಮಾರಾಟದ ಸರಕುಗಳನ್ನಾಗಿ ಮಾಡುತ್ತಿವೆ. ಆದ್ದರಿಂದ ಮಹಿಳೆಯರು ದೂರದರ್ಶನದಿಂದ ಆಚೆ ಬರಬೇಕು. ನಮ್ಮ ಬದುಕಿಗೆ ಮಾರ್ಗದರ್ಶನ ಮಾಡುವಂತಹ ಮತ್ತು ನಮ್ಮನ್ನು ಸರಿ ದಾರಿಗೆ ಕರೆತರುವಂತಹ ಮಠ ಮಾನ್ಯಗಳಿಗೆ ಮತ್ತು ಅವುಗಳಲ್ಲಿ ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಸುಂದರ ಬದುಕನ್ನು ನಮ್ಮದಾಗಿಸಿಕೊಳ್ಳಬೇಕು ಎಂದರು.
ಪ್ರವಚನ ಸಮಿತಿಯ ಅಧ್ಯಕ್ಷ ಡಿ.ಡಿ. ಮೋರನಾಳ, ಉಪಾಧ್ಯಕ್ಷರಾದ ಎ.ಪಿ. ದಂಡಿನ, ಲಿಂಗರಾಜಗೌಡ ಪಾಟೀಲ, ಕಾರ್ಯದರ್ಶಿ ಅಶೋಕ ಹುಬ್ಬಳ್ಳಿ, ಖಜಾಂಚಿ ಕೊಟ್ರಯ್ಯ ಅಮರಗೋಳ ಹಿರೇಮಠ, ಸೇವಾ ಸಮಿತಿ ಅಧ್ಯಕ್ಷ ಈಶಣ್ಣ ಬೆಟಗೇರಿ, ಕೊಟ್ರೇಶ ಅಂಗಡಿ, ಧ್ರುವಕುಮಾರ ಹೊಸಮನಿ, ಸೊಲಬಣ್ಣ ಜೋಬಾಳಿ, ವಿಶ್ವನಾಥ ಉಳ್ಳಾಗಡ್ಡಿ ಉಪಸ್ಥಿತರಿದ್ದರು. ಇದೇ ವೇಳೆ ಪ್ರತಿಭಾ ಹೊಸಮನಿ ಮತ್ತು ವೀಣಾ ಪಾಟೀಲ ಇವರು ಸುಧಾ ಬರಗೂರ ಅವರನ್ನು ಸನ್ಮಾನಿಸಿದರು. ಕೆ.ಎಫ್. ಅಂಗಡಿ ವಂದಿಸಿದರು.