ಹಲ್ಲೆಕೋರ ಆಟೋ ಚಾಲಕರ ಬಂಧಿಸಿ

Updated on: 

ಸೂಕ್ತ ಕಾನೂನು ಕ್ರಮಕ್ಕೆ ನೃಪತುಂಗ ಸಾರಿಗೆ ಸಂಸ್ಥೆ ಸಿಬ್ಬಂದಿ ಆಗ್ರಹ
ಗುಲ್ಬರ್ಗ: ನಗರದಲ್ಲಿ ಕಳೆದೆರಡು ದಿನಗಳಿಂದ ಕೆಲ ಆಟೋ ಚಾಲಕರು ನೃಪತುಂಗ ನಗರ ಸಾರಿಗೆ ಸೇವೆಯ ಚಾಲಕರು, ನಿರ್ವಾಹಕರ ಮೇಲೆ ನಡೆಸುತ್ತಿರುವ ಗೂಂಡಾಗಿರಿಯನ್ನು ಖಂಡಿಸಿ ಶನಿವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಲದವರು ಪ್ರತಿಭಟನಾ ಮೆರವಣಿಗೆ ನಡೆಸಿ ತಮಗೆ ಕೆಲ ಸ್ಥಳಗಳಲ್ಲಿ ರಕ್ಷಣೆ ಕೊಡುವಂತೆ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಹಲ್ಲೆಗೆ ಖಂಡನೆ: ಅಧ್ಯಕ್ಷ ಚಂದ್ರಕಾಂತ ಗದ್ದಗಿ, ಕಾರ್ಯದರ್ಶಿ ರಶೀದ್ ಜಾವೇದ್ ನೇತೃತ್ವದಲ್ಲಿ ನಡೆದ ಪ್ರತಿಭನಾ ಮೆರವಣಿಗೆಯಲ್ಲಿ ನೂರಾರು ಚಾಲಕರು, ಸಿಬ್ಬಂದಿ, ನಿರ್ವಾಹಕರು ಭಾಗವಹಿಸುವ ಮೂಲಕ ನಗರದಲ್ಲಿನ ನೃಪತುಂಗ ಸಾರಿಗೆ ಮೇಲಿನ ಹಲ್ಲೆಗಳನ್ನು, ದಾಳಿಗಳನ್ನು ಖಂಡಿಸಿದರು.
ಹಲ್ಲೆಗೊಳಗಾಗಿರುವ ಚಾಲಕರಾದ ಸಲ್ಲಾವುದ್ದೀನ್, ರವೀಂದ್ರ ಇಬ್ಬರೂ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ಆಟೋ ಚಾಲಕರ ಗೂಂಡಾವರ್ತನೆಯನ್ನು ಯಾವ ಕಾರಣಕ್ಕೂ ಸಹಿಸಲಾಗದು ಎಂದು ಮನವಿ ಪತ್ರದಲ್ಲಿ ಸಾರಿಗೆ ಸಿಬ್ಬಂದಿ ಪ್ರತಿಕ್ರಿಯೆ ನೀಡಿದ್ದಾರೆ.
ಆಗ್ರಹ: ನೃಪತುಂಗ ಸಾರಿಗೆ ಕರ್ತವ್ಯನಿರತರಿಗೆ ರಕ್ಷಣೆ ಕೊಡಬೇಕು, ಸುಗಮ ಸಂಚಾರಕ್ಕಾಗಿ ಪ್ರಮುಖ ವೃತ್ತಗಳು, ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಬೇಕು, ಆಟೋಗಳ ಸಂಚಾರದಲ್ಲಿ ಶಿಸ್ತು ತರಬೇಕು, ವಾಹನಗಳ ನಿಲುಗಡೆಗೆ ಇರುವ ನಿಲ್ದಾಣಗಳ ಅಕ್ಕಪಕ್ಕ ಆಟೋಗಳು ನಿಲ್ಲದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು, ತಮಗಿರುವ ಪ್ರತ್ಯೇಕ ಸ್ಟ್ಯಾಂಡ್‌ಗಳಲ್ಲೇ ಆಟೋಗಳು ನಿಲ್ಲುವಂತಾಗಬೇಕು. ಸಂಚಾರಿ ಪೊಲೀಸ್, ಆರ್‌ಟಿಒ, ಜಿಲ್ಲಾಡಳಿತಗಳು ಒಟ್ಟಾಗಿ ಇಂತಹ ಜನಸ್ನೇಹಿ ಹಾಗೂ ಕಲ್ಯಾಣ ಕ್ರಮಗಳನ್ನು ಕೈಗೊಂಡು ಆಟೋದವರ ಕಿರಿಕಿರಿಯಿಂದ ಸಾರಿಗೆ ಸಿಬ್ಬಂದಿಯನ್ನು ಮುಕ್ತರಾಗಿಸಬೇಕೆಂದು ಮಹಾಮಂಡಳದ ನೌಕರರು ಕೋರಿದ್ದಾರೆ.

ಹಲ್ಲೆ ಸಹಿಸಲ್ಲ: ಕಲ್ಲೂರ್
ಗುಲ್ಬರ್ಗ: ನೃಪತುಂಗ ಸಾರಿಗೆ ಬಸ್ಸುಗಳ ಚಾಲಕರು, ನಿರ್ವಾಹಕರ ಮೇಲೆ ಆಟೋ ಚಾಲಕರು ನಡೆಸುತ್ತಿರುವ ಹಲ್ಲೆಗಳನ್ನು ಕಟುವಾಗಿ ಖಂಡಿಸಿರುವ ಈ.ಕ.ರ.ಸಾ. ಸಂಸ್ಥೆ ಅಧ್ಯಕ್ಷ ಶಿವಾನಂದ ಕಲ್ಲೂರ್ ಕಾರ್ಮಿಕರ ಮೇಲಿನ ಹಲ್ಲೆಯನ್ನು ಯಾವ ಕಾರಣಕ್ಕೂ ಸಹಿಸಲಾಗದು. ಅಗತ್ಯ ಕಂಡಲ್ಲಿ ಬೀದಿಗಿಳಿದು ಹೋರಾಟ ನಡೆಸಲಾಗುತ್ತದೆ ಎಂದು ಗುಡುಗಿದ್ದಾರೆ. ಐಜಿಪಿ ಮೊಹ್ಮದ್ ವಜೀರ ಅಹ್ಮದ್ ಅವರನ್ನು ಭೇಟಿ ಮಾಡಿ, ಬಸ್ ನಿಲ್ದಾಣಗಳಲ್ಲಿ ರಾತ್ರಿ ಪೊಲೀಸ್ ಗಸ್ತು ಮಾಡಲು ಕೋರಿದ್ದಾಗಿ ಕಲ್ಲೂರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com