ಗುಲ್ಬರ್ಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಫೆ.18, 19ರಂದು ಗ್ರಾಮೀಣ ನಾಟಕೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ. ಜೇವರ್ಗಿ ತಾಲೂಕಿನ ಸಾತಖೇಡ ರಾಜಾ ಭಾಗಶಃ ದೇವಸ್ಥಾನ ಆವರಣದಲ್ಲಿ ಫೆ. 18ರಂದು ಸಂಜೆ 6.30ಕ್ಕೆ ಗ್ರಾಮೀಣ ನಾಟಕೋತ್ಸವ ಕಾರ್ಯಕ್ರಮ ಜರುಗಲಿದೆ. ರಂಗಕರ್ಮಿ ಪ್ರಭಾಕರ್ ಸಾತಖೇಡ ಉದ್ಘಾಟಿಸುವರು. ಸಾತಖೇಡ ರಾಜ ಭಾಗಶಃ ದೇವಸ್ಥಾನ ಸಮಿತಿಯ ಈರಣ್ಣ ಮುತ್ಯಾ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜೇವರ್ಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಶಾಂತಪ್ಪ ನರಿಬೋಳ ಆಗಮಿಸುವರು. ಉದ್ಘಾಟನೆ ನಂತರ ಗುಲ್ಬರ್ಗದ ವಿಶ್ವರಂಗ ನಾಟಕ ಮತ್ತು ನೃತ್ಯ ಸೇವಾ ಸಂಘದವರಿಂದ ಪದ್ಮಪಾಣಿ ಐತಿಹಾಸಿಕ ನಾಟಕ ಏರ್ಪಡಿಸಲಾಗಿದೆ. ಫೆ.19ರಂದು ಸಂಜೆ 7ಕ್ಕೆ ಯಾದಗಿರಿ ರಂಗಭೂಮಿ ಕಲಾವಿದರ ಸಂಘದಿಂದ ಸುರಪುರದ ರಾಜಾ ವೆಂಕಟಪ್ಪ ನಾಯಕ ನಾಟಕ, ನಿರ್ಣಾವಾಡಿ ಗ್ರಾಮದ ಚನ್ನಬಸವ ಶಿವಯೋಗಿಗಳ ವೃತ್ತಿ ರಂಗಭೂಮಿ ನಾಟ್ಯ ಸಂಘದವರಿಂದ ಹೇಮರೆಡ್ಡಿ ಮಲ್ಲಮ್ಮ ಪೌರಾಣಿಕ ನಾಟಕ ಹಮ್ಮಿಕೊಳ್ಳಲಾಗಿದೆ.
ನಾಳೆ ವಾರ್ಷಿಕೋತ್ಸವ
ಗುಲ್ಬರ್ಗ: ನಗರದ ಅಂಬುಬಾಯಿ ಅಂಧ ಬಾಲಕಿಯರ ವಸತಿಯುತ ಶಾಲೆಯ ದಿವಂಗತ ಮಾತೋ ಅಂಬುಬಾಯಿಯವರ ಪುಣ್ಯಸ್ಮರಣೆ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭ ಫೆ.18ರಂದು ಸಂಜೆ 5ಕ್ಕೆ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ನಡೆಯಲಿದೆ. ದಕ್ಷಿಣ ಮತ ಕ್ಷೇತ್ರದ ವಿಧಾನಸಭಾ ಸದಸ್ಯೆ ಅರುಣಾ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸುವರು. ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕು. ಪಲ್ಲವಿ ಅಕುರಾತಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಸೇಂಟ್ ಮೇರಿ ಪ್ರೌಢಶಾಲೆಯ ಫಾದರ್ ವಿಕ್ಟರ್ ಮಚಾಡೋ ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆಂದು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ತಿಳಿಸಿದ್ದಾರೆ.
ಚಿಣ್ಣರ ಚಿಲಿಪಿಲಿ
ಗುಲ್ಬರ್ಗ: ಸರ್ವಜ್ಞ ಚಿಣ್ಣರ ಲೋಕದಿಂದ ಚಿಣ್ಣರ ಚಿಲಿಪಿಲಿ ವಾರ್ಷಿಕೋತ್ಸವ ಸಮಾರಂಭ ಫೆ.17ರ ಬೆ.9ಕ್ಕೆ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ, ಡಾ. ನಾ.ಸೋಮೇಶ್ವರ, ಸಾ.ಶಿ.ಇ. ನಿರ್ದೇಶಕ ಎ.ರುದ್ರಪ್ಪ, ಬಿಇಒ ಕೋಬಾಳಕರ್, ಸಂಸ್ಥಾಪಕ ಚೆನ್ನಾರೆಡ್ಡಿ ಪಾಟೀಲ್, ಗೀತಾ ಚೆನ್ನಾರೆಡ್ಡಿ ಪಾಟೀಲ್, ವಿಜಯಕುಮಾರ ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ.
ಚಾಲನಾ ಸಮಿತಿ ಸಭೆ
ಜಿಲ್ಲೆಯಲ್ಲಿ ಫೆ.24ರಿಂದ 27ರವರೆಗೆ ಜರುಗುವ ಎರಡನೇ ಸುತ್ತಿನ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಅನುಷ್ಠಾನ ಸಂಬಂಧ ಜಿಲ್ಲಾ ಚಾಲನಾ ಸಮಿತಿ ಸಭೆಯು ಶುಕ್ರವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜರುಗಿತು.
20ರಂದು ಕೆಡಿಪಿ ಸಭೆ
ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಫೆ.20ರಂದು ಬೆಳಗ್ಗೆ 11 ಗಂಟೆಗೆ ಜಿಪಂ ಹಳೇ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ(ಕೆಡಿಪಿ) ಹಾಗೂ ವಿಶೇಷ ಅಭಿವೃದ್ಧಿ ಯೋಜನೆ(ಎಸ್ಡಿಪಿ) ಮಾಸಿಕ ಪ್ರಗತಿ ಪರಿಶೀಲನಾ ಸಭೆ ಜರುಗಲಿದೆ.
ವಿದ್ಯಾರ್ಥಿಗಳ ಬೀಳ್ಕೊಡುಗೆ
ಗುಲ್ಬರ್ಗ: ನಗರದ ಸಂತ ಕಬೀರದಾಸ ಶಿಕ್ಷಣ ಸಂಸ್ಥೆ ಅಡಿಯಲ್ಲಿ ಜಿಡಿಎ ಕಾಲೋನಿಯ ಗಂಗಾಧರ ಬಕ್ಕಪ್ರಭು ಪ್ರೌಢಶಾಲೆಯಲ್ಲಿ 20ನೇ ವಾರ್ಷಿಕೋತ್ಸವ ಹಾಗೂ 10ನೇ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಅಧ್ಯಕ್ಷ ಟಿ.ಎಂ. ಬಾವಿದೊಡ್ಡಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮತಾ ಸೈನಿಕ ದಳ ಹಾಗೂ ಆರ್ಪಿಐ ರಾಜ್ಯಾಧ್ಯಕ್ಷ ಎಂ. ವೆಂಕಟಸ್ವಾಮಿ, ಸಮತಾ ದಳದ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಎಂ.ಮಹಾದೇವ ಸ್ವಾಮಿ, ಸಮತಾ ಸೈನಿಕ ದಳದ ಮುಖಂಡ ಶಿವಾನಂದ ಕರಿಗಾರ, ಸಂಸ್ಥೆಯ ಸಂಸ್ಥಾಪಕ ಶ್ರೀದೇವಿ ಬಾವಿದೊಡ್ಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಳೆದ ವರ್ಷ ಹೆಚ್ಚಿನ ಅಂಕ ಪಡೆದ 10ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಅಂಕಿತಾ ಇವರಿಗೆ ಶಿಕ್ಷಣ ಇಲಾಖೆಯಿಂದ 10 ಸಾವಿರ ಮೌಲ್ಯದ ಚೆಕ್, ಸಂಸ್ಥೆಯಿಂದ 2 ಸಾವಿರ, ಮುಖ್ಯೋಪಾಧ್ಯಾಯರಿಂದ 1 ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಸಖುಬಾಯಿ ಇವರಿಗೂ ಶಿಕ್ಷಣ ಇಲಾಖೆಯಿಂದ 5 ಸಾವಿರ ಚೆಕ್ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಲೆಯ ಮುಖ್ಯೋಪಾದ್ಯಾಯ ಗೀತಾ ದಾಸ್ಕರ್ ಸ್ವಾಗತ ಭಾಷಣ ಮಾಡಿದರು. ಸಹ ಶಿಕ್ಷಕಿ ವಂದನಾರ್ಪಣೆ ಮಾಡಿದರು.
ಕಮಲಾಪುರ ತಾಲೂಕು ಘೋಷಣೆ: ಸಂತಸ
ಗುಲ್ಬರ್ಗ: ಕಮಲಾಪುರ ತಾಲೂಕು ಕೇಂದ್ರವೆಂದು ರಾಜ್ಯ ಸರ್ಕಾರವು ಘೋಷಿಸಿರುವುದನ್ನು ಕಮಲಾಪುರ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಹಾಗೂ ಕೆಜೆಪಿ ವಿಭಾಗೀಯ ಕಾರ್ಯದರ್ಶಿ ಸುಭಾಷ್ ಬಿರಾದಾರ್ ಕಮಲಾಪುರ ಸ್ವಾಗತಿಸಿದ್ದಾರೆ. ಕಮಲಾಪುರ ತಾಲೂಕು ಕೇಂದ್ರವನ್ನಾಗಿಸುವಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಾತ್ರ ಬಹುಮುಖ್ಯ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ತಾಲೂಕು ಪುನಃ ವಿಂಗಡನಾ ಸಮಿತಿಯನ್ನು ನೇಮಕ ಮಾಡಿದ್ದರಿಂದ ಪ್ರಕಾಶ್ ನೇತೃತ್ವದ ಸಮಿತಿಯು ಕಮಲಾಪುರ ತಾಲೂಕು ಕೇಂದ್ರವನ್ನಾಗಿ ಶಿಫಾರಸ್ಸು ಮಾಡಿತು. ಯಡಿಯೂರಪ್ಪ ಅವರು ಅನಿವಾರ್ಯ ಕಾರಣಗಳಿಂದ ಮುಖ್ಯಮಂತ್ರಿ ಹುದ್ದೆ ತ್ಯಜಿಸಬೇಕಾಯಿತು. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಈಗ ಕಮಲಾಪುರ ತಾಲೂಕು ಕೇಂದ್ರವೆಂದು ಘೋಷಿಸಿದ್ದು ಸ್ವಾಗತಾರ್ಹ ಎಂದು ಹೇಳಿದ್ದಾರೆ.
ಪದಾಧಿಕಾರಿಗಳ ಆಯ್ಕೆ
ಗುಲ್ಬರ್ಗ: ನಗರದ ಬ್ರಹ್ಮಪುರ ವಿಠಲ ನಗರದ ಸಾಯಿ ಸಮರ್ಥ ಸೇವಾ ಸಂಸ್ಥೆ ಸಂಘದ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ ಎಂದು ಅಧ್ಯಕ್ಷ ಅಂಬಾರಾಯ್ ಅಣಕಲ ಪ್ರಕಟನಣೆಯಲ್ಲಿ ತಿಳಿಸಿದ್ದಾರೆ. ಅಂಬಾರಾಯ ಅಣಕಲೆ (ಅಧ್ಯಕ್ಷರು), ಅಶೋಕ ಜಿ. ಬೋಸಗಾ (ಉಪಾಧ್ಯಕ್ಷ,) ಅಶೋಕ ಹೀರಾಪುರ (ಖಜಾಂಚಿ), ಅಮೃತರಾವ್ ಎಸ್. ಬೆಳಗುಂಪಿ (ಕಾರ್ಯದರ್ಶಿ), ಈರಣ್ಣ ಹೆಚ್. ಜಾಲಾದಿ, ಶರಣಗೌಡ ಎನ್. ಪಾಟೀಲ್, ಶಿವಪುತ್ರ ಸಿದ್ದಣ್ಣ, ಭೀಮಾಶಂಕರ ಎಸ್. ಅಣಕಲೆ, ರಘೋತ್ತಮ ಎಚ್. ಕುಲಕರ್ಣಿ, ಅಂಬಣ್ಣ ತಾಯಪ್ಪ, ಲಕ್ಷ್ಮಿಕಾಂತ ಎ. ಹೀರಾಪುರ, ಮಂಜುನಾಥ ಕೆ. ಮರತೂರ, ಬಾಬುರಾವ್ ಶಿವಾಜಿರಾವ್, ಮಹಾದೇವ್ ಎಸ್. ಹಾಗರಗುಂಡಗಿ, ಹುಣಚಪ್ಪ ಬೆಳ್ಳಪ್ಪ ಇವರನ್ನು ಸದಸ್ಯರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಕುಡಿಯಲು ಹಣ ಕೊಡದಿದ್ದಕ್ಕೆ ತಂದೆಯನ್ನೇ ಕೊಲೆಗೈದ ನೀಚ!
ಗುಲ್ಬರ್ಗ: ಸಾರಾಯಿ ಕುಡಿಯಲು ಹಣ ಕೇಳಿದಾಗ ಕೊಡಲಿಲ್ಲ ಎಂದು ಕೋಪಗೊಂಡ ಮಗ ತಂದೆಯನ್ನೇ ಕೊಡಲಿಯಿಂದ ಚಚ್ಚಿ ಕೊಲೆ ಮಾಡಿದ ದಾರುಣ ಘಟನೆ ಕುಮ್ಮನಶಿರಸಗಿ, ಅರಳಗುಂಡಗಿ ಸೀಮೆಯ ಹೊಲದಲ್ಲಿ ಫೆ.15ರ ರಾತ್ರಿ ಸಂಭವಿಸಿದೆ.
ತಂದೆಯನ್ನೇ ಕೊಂದ ಮಗನನ್ನು ಕಲ್ಯಾಣಿ ಗಾಣಿಗೇರ(22) ಎಂದು ಗುರುತಿಸಲಾಗಿದೆ. ಈತ ತನ್ನ ತಂದೆ ಮಲ್ಲಣ್ಣನಿಗೆ ಹಣ ಕೇಳಿದ್ದಾನೆ. ಮಲ್ಲಣ್ಣ ಹಣ ಕೊಟ್ಟಿಲ್ಲ. ಇದರಿಂದ ಕ್ರೋಧಗೊಂಡ ಕಲ್ಯಾಣಿ ತಂದೆ ಅರಳಗುಂಡಗಿ ಹೊಲದಲ್ಲಿ ಮಲಗಿದ್ದ ಸಮಯ ಸಾಧಿಸಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಯಾದ ನತದೃಷ್ಟ ಮಲ್ಲಣ್ಣನ ಪತ್ನಿ ಪೊಲೀಸರಿಗೆ ದೂರು ಸಲ್ಲಿಸಿ ಮಗನ ವಿರುದ್ಧ ಕಾನೂನು ಕ್ರಮಕ್ಕೆ ಕೋರಿದ್ದಾಳೆ.
'ಶಾಸಕರ ವಿರುದ್ಧದ ದೂರು ಸುಳ್ಳು'
ಗುಲ್ಬರ್ಗ: ಜಿಲ್ಲಾ ಪಂಚಾಯತ್ ಸದಸ್ಯ ಸಾಯಿಬಣ್ಣ ಅಡ್ಡೇಶಿಯವರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಾಸಕ ಡಾ. ಶರಣಗೌಡಪಾಟೀಲ್ ವಿರುದ್ಧ ಸಹಿ ಪೋರ್ಜರಿ ಮಾಡಿದ್ದು, ನೀಡಿರುವ ದೂರು ಸುಳ್ಳು ಎಂದು ಕಾಂಗ್ರೆಸ್ ಪಕ್ಷದ ಜಿಪಂ ಸದಸ್ಯರು ಪ್ರತಿಕ್ರಿಯಿಸಿದ್ದಾರೆ.
ಸಾಯಿಬಣ್ಣ ಅಡ್ಡೇಶಿ ಕಾಂಗ್ರೆಸ್ ಪಕ್ಷದ ಚಿಹ್ನೆಯ ಮೇಲೆ ಚುನಾಯಿತಗೊಂಡು ನಂತರ ಪಕ್ಷಕ್ಕೆ ದ್ರೋಹವೆಸಗಿ ಈ ರೀತಿ ಸುಳ್ಳು ದೂರು ನೀಡಿರುವುದು ಖಂಡನೀಯ ಎಂದು ಜಿಪಂ ಸದಸ್ಯ ಗುರುಲಿಂಗಪ್ಪ ಗೌಡ ಪಾಟೀಲ್, ರಮೇಶ ಶಂಕ್ರಪ್ಪ ಮರಗೋಳ, ಸಿದ್ದರಾಮ ಭೀಮಶ್ಯಾ ಪ್ಯಾಟಿ, ಅಕ್ಕಮಹಾದೇವಿ ರುದ್ರಗೌಡ, ಅನಿತಾ ಪವನಕುಮಾರ ವಳಕೇರಿ, ಕಸ್ತೂರಿಬಾಯಿ ತಿಪ್ಪಣ್ಣ ಇಜೇರಿ ಮತ್ತು ಸಿದ್ದರಾಮ ಪ್ಯಾಟಿ ತಿಳಿಸಿದ್ದಾರೆ.
ಪಕ್ಷದ ಆದೇಶದಂತೆ ಜಿಲ್ಲಾಧ್ಯಕ್ಷರು ಚುನಾವಣಾ ಆಯೋಗಕ್ಕೆ ಸಾಯಿಬಣ್ಣ ಅಡ್ಡೇಶಿ ಪಕ್ಷದ ವಿಪ್ ಉಲ್ಲಂಘಿಸಿ ಸಭೆಗೆ ಗೈರು ಹಾಜರಾಗಿರುವುದರಿಂದ ಪಂಚಾಯತ್ ಕಾಯ್ದೆ ಅನುಸಾರ ಅವರ ಸದಸ್ಯತ್ವ ರದ್ದು ಗೊಳಿಸಲು ಜಿಪಂ ಸಿಇಒ ಅವರಿಗೆ ಮಂದಿನ ಕ್ರಮಕ್ಕಾಗಿ ಚುನಾವಣಾ ಆಯೋಗಕ್ಕೆ ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ಸದಸ್ಯತ್ವ ರದ್ದುಗೊಳಿಸಬಹುದೆಂದು ಭಾವಿಸಿ ದುರದ್ದೇಶದಿಂದ ಈ ಕೆಲಸ ನಡೆಸಿದ್ದಾರೆಂದು ತಿಳಿಸಿದ್ದಾರೆ. ಅಧ್ಯಕ್ಷರ ಮೇಲೆ ಅಡ್ಡೇಶಿಯವರು ಪೋಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿರುವುದು ಖಂಡನೀಯ ಎಂದು ಸದಸ್ಯರು ತಿಳಿಸಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮನವಿ
ಗುಲ್ಬರ್ಗ: ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ಆರ್ಥಿಕವಾಗಿ ನಲಗುತ್ತಿದೆ. ಹಡಪದ ಅಭಿವೃದ್ಧಿಗಾಗಿ ಸರ್ಕಾರ ಈ ಸಮಜಾಕ್ಕೆ ಸಹಾಯ ಮಾಡಬೇಕು ಎಂದು ಹಡಪದ ಜಿಲ್ಲಾಧ್ಯಕ್ಷ ವಿಜಯಕುಮಾರ್ ಆಗ್ರಹಿಸಿದ್ದಾರೆ.
ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ಸಲ್ಲಿಸಿದ ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಮಾತನಾಡಿ, ಸಮಾಜದ ವಿವಿಧ ಬೇಡಿಕೆ ಈಡೇರಿಸಲು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ಮನವಿ ಪತ್ರದಲ್ಲಿ ತಿಳಿಸಿದೆ. ಆರ್ಥಿಕ ಪ್ರಗತಿಗಾಗಿ ಹಡಪದ ಅಪ್ಪಣ್ಣ ದೇವರ ಹೆಸರಿನಲ್ಲಿ ಅಥವಾ ಕ್ಷೌರಿಕ ಅಭಿವೃದ್ಧಿ ಮಂಡಳಿ ರಚಿಸಬೇಕು. ಗಂಗಾ ಕಲ್ಯಾಣ ಯೋಜನೆಯಲ್ಲಿ ಪ್ರತಿ ತಾಲೂಕಿಗೆ ಹಡಪದ ಬಾಂಧವರಿಗೆ 5 ಕೊಳವೆ ಬಾವಿಗಳ ಮೀಸಲಾತಿ ನೀಡಬೇಕು. ಪ್ರತಿಭಾವಂತ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ನೀಡಬೇಕು. ಹಡಪದ ಬಾಂಧವರಿಗೆ ಉಚಿತವಾಗಿ ಕಂಪ್ಯೂಟರ್ ತರಬೇತಿ ನೀಡಬೇಕು. ಹಡಪದ ಸಮಾಜಕ್ಕೆ ಸಾಮಾಜಿಕ ಕಾರ್ಯ ಚಟುವಟಿಕೆಗಾಗಿ ಸಮುದಾಯ ಭವನಕ್ಕೆ ರು. 10 ಲಕ್ಷ ಅನುದಾನ ನೀಡಬೇಕು. ನಮ್ಮ ಜನಾಂಗದವರು ರಾಜಕೀಯವಾಗಿ, ಶೈಕ್ಷಣಿಕ ಹಿಂದುಳಿದುದ್ದಕ್ಕಾಗಿ ಅದಕ್ಕೆ ರಾಜಕೀಯ ಮೀಸಲಾತಿ ಒದಗಿಸಬೇಕು.
ಹಡಪದ ಜನಾಂಗ ಆರ್ಥಿಕವಾಗಿ ಹಿಂದುಳಿದಿದೆ. ಆದ್ದರಿಂದ ಉನ್ನತ ಶಿಕ್ಷಣಕ್ಕಾಗಿ ನಿಗಮ ವತಿಯಿಂದ ಯಾವುದೇ ಜಾಮೀನು ರಹಿತ ಶಿಕ್ಷಣ ಸಾಲ ನೀಡಬೇಕು ಎಂದು ಜಿಲ್ಲಾಧ್ಯಕ್ಷ ವಿಜಯಕುಮಾರ ಎಚ್. ಹಡಪದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಮಲ್ಕಣ್ಣ, ಉಪಾಧ್ಯಕ್ಷ ಡಾ. ಅಶೋಕ ಹಡಪದ, ಹಿಂದುಳಿದ ವರ್ಗ ಆಯೋಗದ ಅಧ್ಯಕ್ಷ ಅಶೋಕ ಗಸ್ತಿಯವರನ್ನು ಇದ್ದರು.
ಮೊರಾರ್ಜಿ ದೇಸಾಯಿ ಶಾಲೆಗೆ ಅರ್ಜಿ ಆಹ್ವಾನ
ಗುಲ್ಬರ್ಗ: ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ಮಾದರಿ, ಅಟಲ್ಬಿಹಾರಿ ವಾಜಪೇಯಿ ವಸತಿ ಶಾಲೆಗಳಿಗೆ 2013-14 ನೇ ಸಾಲಿನ 6 ನೇ ತರಗತಿಗೆ ಪ್ರವೇಶ ಅರ್ಜಿ ಕರೆಯಲಾಗಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆ ಆಡಕಿ, ಮಳಖೇಡ ಹಾಗೂ ತಾ. ಸಮಾಜ ಕಲ್ಯಾಣ ಇಲಾಖೆ ಸೇಡಂ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಕೋಡ್ಲಾ ಅರ್ಜಿಗಳು ದೊರೆಯುತ್ತವೆ. ಮಾಹಿತಿಗಾಗಿ 8746823405 ಹಾಗೂ 9945565748ಗೆ ಸಂಪರ್ಕಿಸಿ.
ಅಂಬಿಗರ ಚೌಡಯ್ಯ ಕೃತಿ ಲೋಕಾರ್ಪಣೆ
ಗುಲ್ಬರ್ಗ: ಡಾ. ನಾಗಪ್ಪ ಟಿ ಗೋಗಿಯವರು ರಚಿಸಿದ ನಿಜಶರಣ ಅಂಬಿಗರ ಚೌಡಯ್ಯ ಕೃತಿ ಲೋಕಾರ್ಪಣೆ ಸಮಾರಂಭ ಫೆ.17 ರಂದು ಬೆಳಗ್ಗೆ 10.30ಕ್ಕೆ ಸೂಪರ್ ಮಾರ್ಕೆಟ್ನಲ್ಲಿ ಛೇಂಬರ್ ಬಿಲ್ಡಿಂಗ್ ಕಾಂಪ್ಲೆಕ್ಸ್ನ ಎಸ್.ಎಸ್. ಪಾಟೀಲ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಕರ್ನಾಟಕ ವಿಧಾನ ಪರಿಷತ್ ಮಾಜಿ ಸರ್ಕಾರಿ ಮುಖ್ಯ ಸಚೇತಕ ವಿಠ್ಠಲ್ ಹೇರೂರು ಕೃತಿ ಲೋಕಾರ್ಪಣೆ ಮಾಡುವರು. ಗುವಿವಿ ಮೌಲ್ಯಮಾಪನ ವಿಭಾಗದ ಕುಲಸಚಿವ ಡಾ. ಡಿ.ಬಿ. ನಾಯಕ ಅಧ್ಯಕ್ಷತೆ ವಹಿಸುವರು.
ಗುವಿವಿ ಕನ್ನಡ ಅಧ್ಯಯನ ಸಂಸ್ಥೆ ಮುಖ್ಯಸ್ಥ ಡಾ. ನಾಗಾಬಾಯಿ ಬುಳ್ಳಾ ಕೃತಿ ಕುರಿತು ಪರಿಚಯ ನೀಡವರು. ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕ ಡಾ. ಬಸವರಾಜ ಸಬರದ, ಡಾ. ಎಸ್.ಎಂ. ಹಿರೇಮಠ, ಕಸಾಪ ಮಾಜಿ ಅಧ್ಯಕ್ಷ ಲಕ್ಷ್ಮಣರಾವ್ ಗೋಗಿ, ಪ್ರಾಂಶುಪಾಲ ಎಂ. ಅಂಬ್ರೆಪ್ಪ, ಡಾ. ಜಯಕುಮಾರ ಸಿಂಧೆ, ಕಸಾಪ ಗೌರವ ಕಾರ್ಯದರ್ಶಿ ಬಿ.ಹೆಚ್. ನಿರಗುಡಿ, ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶರಣಬಸಪ್ಪ ವಡ್ಡಣಕೇರಿ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಪಕ ಡಾ. ನಾಗಪ್ಪ ಟಿ. ಗೋಗಿ ತಿಳಿಸಿದ್ದಾರೆ.
ಸುರಪುರ ಪುರಸಭೆಗೆ ಚುನಾವಣಾಧಿಕಾರಿ
ಸುರಪುರ: ಇಲ್ಲಿನ ಪುರಸಭೆಯ 27 ವಾರ್ಡುಗಳಿಗೆ ತಹಸೀಲ್ದಾರ್ ಅಹ್ಮದ್ ಗೌಸುದ್ದೀನ್ ಚುನಾವಣಾಧಿಕಾರಿಗಳನ್ನು ನೇಮಿಸಿದ್ದಾರೆ. 1ರಿಂದ 7 ವಾರ್ಡ್ಗಳಿಗೆ ಬಿಇಒ ಕೆಂಪರಂಗಯ್ಯ ಚುನಾವಣಾಧಿಕಾರಿಯಾಗಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದಲ್ಲಿ ನಾಮಪತ್ರ ಸಲ್ಲಿಸಬೇಕು. 8-14 ವಾರ್ಡ್ಗಳಿಗೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆರ್.ಎಸ್.ಕರೆಡ್ಡಿ ಚುನಾವಣಾಧಿಕಾರಿ, ಅಕ್ಷರ ದಾಸೋಹ ಕಾರ್ಯಾಲಯದಲ್ಲಿ, 15-21 ವಾರ್ಡ್ಗಳಿಗೆ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಅನಂತಮೂತರ್ ಚುನಾವಣಾಧಿಕಾರಿ, ಪಶುಸಂಗೋಪನಾ ಕಾರ್ಯಾಲಯದಲ್ಲಿ ಮತ್ತು 22-27 ವಾರ್ಡ್ಗಳಿಗೆ ಸಿಡಿಪಿಒ ಥಾಮಸ್ ದೊಡ್ಡಮನಿ ಚುನಾವಣಾಧಿಕಾರಿಯಾಗಿದ್ದು ಬಾಲ ವಿಕಾಸ ಯೋಜನಾಧಿಕಾರಿಗಳ ಕಚೇರಿಯಲ್ಲಿ ಬೆ.11ರಿಂದ ಮ.3ರವರೆಗೆ ನಾಮಪತ್ರ ಸಲ್ಲಿಸಲು ಸೂಚಿಸಲಾಗಿದೆ.
ಶಿಕ್ಷಣದಿಂದ ವಿದ್ಯಾರ್ಥಿಗಳಲ್ಲಿ
ಆತ್ಮಬಲ, ನೈತಿಕ ಮೌಲ್ಯ ಹೆಚ್ಚಲಿ
ಶಹಾಪುರ: ಶಿಕ್ಷಣದ ಮೂಲಕ ವಿದ್ಯಾಥರ್ಗಳಲ್ಲಿ ಆತ್ಮಬಲ ಹೆಚ್ಚುವದರೊಂದಿಗೆ ಶುದ್ಧ ಚಾರಿತ್ರ್ಯ ನೈತಿಕ ಮೌಲ್ಯಗಳು ಮೈಗೂಡುವಂತೆ ನಿರಂತರ ಪ್ರಯತ್ನ ಅಗತ್ಯ ಎಂದು ಎಂಎಸ್ಐ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ನರೇಂದ್ರ ಬಡಶೇಷಿ ತಿಳಿಸಿದರು. ಸ್ಥಳೀಯ ಸರ್ಕಾರಿ ಬಾಲಕರ ಪಪೂ ಕಾಲೇಜಿನಲ್ಲಿ ವಾರ್ಷಿಕೋತ್ಸವ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳು ಯಶಸ್ಸಿನ ದಾರಿ ತುಳಿಯುವಾಗ ಹಲವಾರು ಅಡ್ಡಿ ಆತಂಕಗಳು ಬರುತ್ತವೆ. ಅವುಗಳನ್ನು ಆತ್ಮವಿಶ್ವಾಸದ ಬಲದಿಂದ ಮತ್ತು ಬಹು ಎಚ್ಚರಿಕೆಯಿಂದ ದಾಟಬೇಕೆಂದರು.
ಉಪನ್ಯಾಸಕ ತಿಮ್ಮಯ್ಯ ಪುರ್ಲೆ ಮಾತನಾಡಿ ಸಾಧನೆ ಮಾಡಲು ವಿದ್ಯಾರ್ಥಿ ಜೀವನ ಒಂದು ಉತ್ತಮ ಅವಕಾಶವಾಗಿದ್ದು, ವಿದ್ಯಾರ್ಥಿಗಳು ಶೈಕ್ಷಣಿಕ ವ್ಯವಸ್ಥೆಯ ಸದುಪಯೋಗ ಪಡೆದುಕೊಂಡು ಜ್ಞಾನವಿಕಾಸದಲ್ಲಿ ಯಶಸ್ಸು ಹೊಂದಿ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಂ.ಪಿ. ಸಾಸನೂರ ಮಾತನಾಡಿದರು. ವಾರ್ಷಿಕ ವರದಿಯನ್ನು ಉಪನ್ಯಾಸಕಿ ಶಕುಂತಲಾ ಹಡಗಲಿ ಮಂಡಿಸಿದರು. ಕಾರ್ಯಕ್ರಮದಲ್ಲಿ ಸರಸ್ವತಿ ಹಳ್ಳೆಕರ್, ಆರೀಫಾಬೇಗಂ, ನೀಲವೇಣಿ, ಶಿವಶರಣಪ್ಪ ಭಂಡಾರಿ, ನಾರಾಯಣರಾವ, ಶಿವಕುಮಾರ ಕವಿತಾಳ, ರವೀಂದ್ರ ಜೋಷಿ ಉಪಸ್ಥಿತರಿದ್ದರು. ನಿರೂಪಣೆಯನ್ನು ಉಪನ್ಯಾಸಕ ಎಂ.ಎಸ್. ಸಜ್ಜನ, ಸ್ವಾಗತವನ್ನು ಚಂದ್ರಶೇಖರ ದೊಡ್ಮನಿ, ವಂದನಾರ್ಪಣೆಯನ್ನು ಗುರುಲಿಂಗಪ್ಪ ಮದ್ರಿಕಿ ನೆರವೇರಿಸಿದರು. ವಿದ್ಯಾರ್ಥಿಗಳು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಅಶೋಕ ಗಸ್ತಿಗೆ ಸವಿತಾ ಸಮಾಜದಿಂದ ಸನ್ಮಾನ
ಶಹಾಪುರ: ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಅಶೋಕ ಗಸ್ತಿ ಅವರಿಗೆ ಯಾದಗಿರಿ ಜಿಲ್ಲಾ ಸವಿತಾ ಸಮಾಜದಿಂದ ಇತ್ತೀಚಿಗೆ ಸನ್ಮಾನಿಸಲಾಯಿತು. ಸಮಾಜದ ಉನ್ನತಿಗಾಗಿ ಸರ್ಕಾರದಿಂದ ಹೆಚ್ಚು ಹೆಚ್ಚು ಸೌಲಭ್ಯಗಳನ್ನು ದೊರಕಿಸಿ ಕೊಡುವಂತೆ ಮನವಿ ಮಾಡಲಾಯಿತು. ಅಧ್ಯಕ್ಷ ಗಸ್ತಿ ಮಾತನಾಡಿ, ಸಮಾಜದ ಜನತೆ ಶಿಕ್ಷಣವಂತರಾಗಿ ಸ್ಪರ್ಧಾತ್ಮಕ ದಿನಗಳಲ್ಲಿ ಮುಂಚೂಣಿಯಲ್ಲಿ ಬರಬೇಕೆಂದರು. ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಶಿವರಾಜ ಹಕೀಂ ಪ್ರಮುಖರಾದ ಆಂಜನೇಯ ವಾಡಿ ಚನ್ನಪ್ಪ ಕಲ್ಮನಿ, ಈರಪ್ಪ ಎಚ್.ಮದ್ರಿಕಿ, ವಿಶ್ವನಾಥ ಇತರರು ಪಾಲ್ಗೊಂಡಿದ್ದರು.
ನಾಳೆ ಸಭೆ
ಶಹಾಪುರ: ಪಟ್ಟಣದ ಜೆಡಿಎಸ್ ಕಾರ್ಯಾಯದಲ್ಲಿ ಪುರಸಭೆ ಚುನಾವಣೆಯ ಕುರಿತು ಚರ್ಚಿಸಲು ಪೂರ್ವಭಾವಿ ಸಭೆಯನ್ನು ಫೆ. 18ರ ಬೆಳಿಗ್ಗೆ 11 ಗಂಟೆಗೆ ಕರೆಯಲಾಗಿದೆ.