ಕ.ಪ್ರ. ವಾರ್ತೆ ಗುಲ್ಬರ್ಗ ಆ.1
ನಗರ ಹಾಗೂ ಜಿಲ್ಲಾದ್ಯಂತ ಶುಕ್ರವಾರ ನಾಗರ ಪಂಚಮಿ ಸಡಗರ. ಗುರುವಾರವೇ ನಾಗಪ್ಪನನ್ನು ಮನೆಗೆ ಆಹ್ವಾನಿಸುವ ಪೂಜೆ ಸಲ್ಲಿಸಿದ್ದ ಸುಮಂಗಲೀಯರು, ಶುಕ್ರವಾರ ಆತನಿಗೆ ಆದರ ಆತಿಥ್ಯ ನೀಡಿ ಕುಟುಂಬ ವರ್ಗದವರನ್ನೆಲ್ಲ ಆಶಿರ್ವಾದಿಸಪ್ಪ... ಎಂದು ಬೇಡಿಕೊಂಡು ಬೀಳ್ಕೊಟ್ಟರು. ಇದೇ ಸಂದರ್ಭದಲ್ಲಿ ಮಹಿಳೆಯರು ತಂಡೋಪ ತಂಡವಾಗಿ ಮೈದಾನಗಳಲ್ಲಿರುವ ಹಾವಿನ ಹುತ್ತಗಳಿಗೆ ಹೋಗಿ ಹಾಲೆರೆದರು. ಮಕ್ಕಳು ಸಹ ಈ ಸಂದರ್ಭದಲ್ಲಿ ಹಾಲೆರೆಯುವ ಕಾರ್ಯದಲ್ಲಿ ತೊಡಗಿಸಿಕೊಂಡು ನಾಗರ ಪಂಚಮಿ ಕಳೆ ಹೆಚ್ಚಿಸಿದ್ದರು.
ಅನೇಕರು ಮನೆಯ ಮುಂದಿನ ಮರಗಳಿಗೆ ಜೋಕಾಲಿ ಕಟ್ಟಿ ಸಂಭ್ರಮಿಸಿದರೆ, ಇನ್ನೂ ಅನೇಕರು ಅರಳು, ತಂಬಿಟ್ಟು, ಅರಲು ಉಂಡಿ ತಿಂದು ನಕ್ಕು ನಲಿದರು. ಇಡೀ ದಿನ ನಾಗರ ಪಂಚಮಿ ಸಂಭ್ರಮದಲ್ಲಿ ಸೋಹದರಿಯರು ಸಂಭ್ರಮಿಸಿದ್ದು ಈ ದಿನದ ವಿಶೇಷವಾಗಿತ್ತು.
ಸಹೋದರಿಯರನ್ನು ನಾಗರ ಪಂಚಮಿ ಹಬ್ಬಕ್ಕೆ ಸಹೋದರರು ಆಹ್ವಾನ ನೀಡಿ ಮನೆಗೆ ಬಂದವರಿಗೆ ಆದರಾತಿಥ್ಯ ಮಾಡುತ್ತಿದ್ದ ನೋಟಗಳು ಕಂಡವು. ಅನೇಕರು ನಾಗ ಪಂಚಮಿಯ ದಿನವೇ ಮಂದಿರಗಳಿಗೆ ಹೋಗಿ ವಿಶೇಷ ಪೂಜೆ ಸಲ್ಲಿಸಿ ಕುಟುಂಬದ ಶ್ರೇಯೋಭಿವೃದ್ಧಿಗೆ ದೇವರಲ್ಲಿ ಕೋರಿಕೊಂಡರು.
ಮೌಢ್ಯದಿಂದ ಹಾಲು ಮಣ್ಣುಪಾಲು
ಗುಲ್ಬರ್ಗ: ನಾಗದೇವತೆಗೆ ಹಾಲೆರೆಯುವ ಸಂಪ್ರದಾಯದಿಂದ ಹಾಲು ಮಣ್ಣು ಸೇರುತ್ತದೆ. ಅದರ ಬದಲು ಮಕ್ಕಳಿಗೆ ಕುಡಿಸುವುದು ಲೇಸು. ಜನರು ಜಾಗೃತಗೊಂಡು ಸಮಾಜಕ್ಕೆ ಮಾರಕವಾಗಿರುವ ಮೌಢ್ಯಗಳನ್ನು ತೊರೆದು ವೈಚಾರಿಕತೆ ಪಾಲಿಸಬೇಕೆಂದು ಜಿಪಂ ಮಾಜಿ ಅಧ್ಯಕ್ಷ ರಮೇಶ ಮರಗೋಳ ತಿಳಿಸಿದರು.
ನಗರದ ಆಳಂದ ಕಾಲೋನಿಯಲ್ಲಿರುವ ಕಿವುಡು ಮಕ್ಕಳ ಸರ್ಕಾರಿ ಶಾಲೆಯ ಆವರಣದಲ್ಲಿ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯು ಬಸವ ಪಂಚಮಿ ನಿಮಿತ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹಾಲು ಕುಡಿಸಿ ಮಾತನಾಡಿದರು.
ಕಲ್ಯಾಣ ನಾಡಿನ ಶರಣ ಪರಿಷತ್ತಿನ ಕಾರ್ಯದರ್ಶಿ ಸಿದ್ರಾಮಪ್ಪ ಬಾಲಪ್ಪಗೋಳ ಮಾತನಾಡಿ, ಉತ್ಕೃಷ್ಟ ಪೌಷ್ಟಿಕ ಅಂಶಗಳನ್ನು ಒಳಗೊಂಡ ಹಾಲು ಅತೀ ಶ್ರೇಷ್ಟ ಆಹಾರವಾಗಿದೆ. ಆದರೆ ನಮ್ಮ ಅವೈಜ್ಞಾನಿಕತೆ ಮತ್ತು ಮೂಢನಂಬಿಕೆಗಳಲ್ಲಿ ಜನರು ಮುಳುಗಿದ್ದರ ಪ್ರತಿಫಲವಾಗಿ ಪವಿತ್ರ ಹಾಲು ಮಣ್ಣು ಸೇರುತ್ತಿದೆ ಎಂದು ವಿಷಾದಿಸಿದರು.
ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿದರು. ಜಿಲ್ಲಾ ಲಿಂಗಾಯತ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ರವೀಂದ್ರ ಶಾಬಾದಿ, ಬಸವ ಕೇಂದ್ರದ ಕಾರ್ಯದರ್ಶಿ ಮಲ್ಲಣ್ಣ ನಾಗರಾಳ, ಹಿರಿಯ ಕವಿ ಎಂ.ಬಿ. ನಿಂಗಪ್ಪ, ಪ್ರಾಧ್ಯಾಪಕ ಡಾ. ಶರಣಪ್ಪ ಮಾಳಗಿ, ಕಾಶಿನಾಥ ಬಿರಾದಾರ ಆಳಂದ, ಅಕಾಡೆಮಿಯ ಶಿವರಾಜ ಅಂಡಗಿ, ಹಣಮಂತರಾಯ ಅಟ್ಟೂರ ಇತರರು ಪಾಲ್ಗೊಂಡಿದ್ದರು.
ಶಹಾಬಾದ್ನಲ್ಲಿ ಪಂಚಮಿ
ಶಹಾಬಾದ್: ನಗರದ ವಿವಿಧ ಭಾಗಗಳಲ್ಲಿ ನಾಗರ ಪಂಚಮಿ ನಿಮಿತ್ತ ಮಹಿಳೆಯರು ನಾಗರ ಮೂರ್ತಿಗಳಿಗೆ, ಹುತ್ತಗಳಿಗೆ ವಿಶೇಷ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಸಲ್ಲಿಸಿದರು. ಜಗದಂಬಾ ದೇವಸ್ಥಾನ, ಶರಣಬಸವೇಶ್ವರ ದೇವಸ್ಥಾನದ ಮುಂದಿರುವ ನಾಗಲಿಂಗ, ರೈಲ್ವೆ ಮೈದಾನದಲ್ಲಿರುವ ಹುತ್ತಕ್ಕೆ, ಹಳೆ ಶಹಾಬಾದ್ ರಸ್ತೆಯ ಹನುಮಾನ್ ನಗರದಲ್ಲಿರುವ ನಾಗಮೂರ್ತಿಗೆ ಬೆಳಗ್ಗೆಯಿಂದ ಸಾಯಂಕಾಲದವರೆಗೆ ಮಹಿಳೆಯರು ಮಕ್ಕಳು ಹಾಲನ್ನು ಎರೆದು, ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಿದರು.
ಹಾಲೆರೆದ ನೀರೆಯರು
ಚಿಂಚೋಳಿ: ಪಟ್ಟಣ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ನಾಗರ ಪಂಚಮಿಯನ್ನು ಮಹಿಳೆಯರು ನಾಗದೇವತೆಗೆ ವಿಶೇಷ ಪೂಜೆ ಸಲ್ಲಿಸಿ ಹಾಲೆರೆಯುವ ಮೂಲಕ ಸಂಭ್ರಮದಿಂದ ಆಚರಿಸಿದರು. ಪಟ್ಟಣದ ಚಂದಾಪೂರ ಹನುಮಾನ್ ದೇವಾಲಯ ಹತ್ತಿರದಲ್ಲಿರುವ ಹುತ್ತಕ್ಕೆ ಮಹಿಳೆಯರು ಮಕ್ಕಳು ಹಾಲೆರೆದು, ನಾಗದೇವತೆಗೆ ಪೂಜೆ ಸಲ್ಲಿಸಿದರು. ತಾಲೂಕಿನ ಚಿಮ್ಮನಚೋಡ, ಸುಲೇಪೇಟ, ಕೋಡ್ಲಿ, ನಿಡಗುಂದಾ, ಕುಂಚಾವರಂ, ಚಂದನಕೇರಾ, ಐನೋಳಿ, ಇನ್ನಿತರ ಗ್ರಾಮಗಳಲ್ಲಿ ಮಹಿಳೆಯರು ಮತ್ತು ಚಿಕ್ಕಮಕ್ಕಳು ನಾಗರ ಪಂಚಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಆಳಂದದಲ್ಲಿ...
ಆಳಂದ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಾಂಪ್ರದಾಯಿಕ ನಾಗರ ಪಂಚಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಹೆಣ್ಮಕ್ಕಳು ಗ್ರಾಮದಲ್ಲಿನ ನಾಗ ಪ್ರತಿಮೆಗೆ, ಹುತ್ತಕ್ಕೆ ಹಾಲೆರೆದು ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿದರು. ಬಳಿಕ ಮಕ್ಕಳು ಕೊಬ್ಬರಿ ತಿರುಗಿಸಿ, ಜೋಕಾಲಿ ಆಡಿದರು. ಲಿಂಬೆ ಹಣ್ಣು, ತೆಂಗು ಎಸೆತ, ಕಣ್ಣಿಗೆ ಬಟ್ಟೆಕಟ್ಟಿ ಗುರುತಿಸುವುದು, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಮುಟ್ಟುವುದು, ದೇವಸ್ಥಾನದ ಗಂಟೆ ಬಾರಿಸುವುದು ಹೀಗೆ ಯುವಕರು, ದೊಡ್ಡವರು ಹಣದಿಂದ ಜಿದ್ದಾಜಿದ್ದಿನ ಆಟಗಳನ್ನು ಆಡಿ ಸಂಭ್ರಮ ಪಟ್ಟರು.