ಯಾದಗಿರಿ: ಶಹಾಪುರ ತಾಲೂಕಿನ ಭೀಮಾ ಬ್ರಿಡ್ಜ್‌ನಿಂದ ವಡಗೇರಾ ಮುಖ್ಯರಸ್ತೆವರೆಗಿನ ರಸ್ತೆ ಕಾಮಗಾರಿಗೆ ಶಾಸಕ ಡಾ. ಎ.ಬಿ. ಮಾಲಕರಡ್ಡಿ ಸೋಮವಾರ ಚಾಲನೆ ನೀಡಿದರು.
ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗುತ್ತಿಗೆದಾರರು ರಸ್ತೆ ಗುಣಮಟ್ಟವನ್ನು ಕಾಪಾಡಿಕೊಂಡು ಬರಬೇಕು. ಹತ್ತಿಗುಡೂರಲ್ಲಿ ಕಳೆದ ವರ್ಷವೇ 8 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ ರಸ್ತೆಯು ಈಗಾಗಲೇ ಕಿತ್ತು ಹೋಗುವ ಪರಿಸ್ಥಿತಿಗೆ ಬಂದಿದ್ದು, ಇದು ಲೋಕೋಪಯೋಗಿ ಅಧಿಕಾರಿಗಳ ಬೇಜಬ್ದಾರಿತನವನ್ನು ತೋರಿಸಿ ಕೊಡುತ್ತದೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರವಿದ್ದಾಗ ಈ ರಸ್ತೆ ನಿರ್ಮಾಣಕ್ಕೆ 23 ಕೋಟಿ ಘೋಷಣೆ ಮಾಡಿತ್ತು. ಆದರೀಗ ರಸ್ತೆ ನಿರ್ಮಾಣಕ್ಕೆ ಸುಮಾರು 43 ಕೋಟಿ ಬೇಕಾಗಿದೆ. ಅದರಲ್ಲಿ 11 ಕೋಟಿ ಬಿಡುಗಡೆ ಮಾಡಿದ್ದು, ಇದರಲ್ಲಿ 10 ಕಿ ಮೀ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು. ಶಹಾಪುರ ತಾಲೂಕಿನ ಹತ್ತಿಗುಡೂರಿಂದ ರಸ್ತೆ ನಿರ್ಮಾಣಕ್ಕೆ ಈಗಾಗಲೇ 26 ಕೋಟಿ ಬಿಡುಗಡೆಯಾಗಿದ್ದು, ಶೀಘ್ರವೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.
ಈ ವೇಳೆ ಸಿದ್ದರಾಮ ಕಾಡಂನೋರ, ಶ್ರೀನಿವಾಸರಡ್ಡಿ ಕಂದಕೂರ, ಮರೆಪ್ಪ ಬಿಳಾರ, ಮಲ್ಲಿಕಾರ್ಜುನ, ಶಂಕರೆಡ್ಡಿ ಬಿಳ್ಳಾರ, ಬಸವರಾಜ ಮಾಲಿಪಾಟೀಲ, ಶರಣು ಇಟಗಿ, ತೇಜಸ್‌ಗೌಡ, ಬಸವರಾಜ ಸೊನ್ನದ, ಸ್ಯಾಮಸನ್, ಸುರೇಶ ಜೈನ್, ಡಾ. ಸುಭಾಷ್, ಅಂಬರೀಷ್ ಸಾಹುಕಾರ, ಲೋಕೋಪಯೋಗಿ ಅಧಿಕಾರಿ ನಾಟಿಕಾರ ಮತ್ತಿತರರು ಇದ್ದರು.
ಗಿರಿಜಾಪುರ ಬಳಿ ಬ್ರಿಜ್ ನಿರ್ಮಾಣಕ್ಕೆ ಆಗ್ರಹ
ಯಾದಗಿರಿ: ಕೃಷ್ಣಾ ನದಿಯ ಎಡಭಾಗದಲ್ಲಿರುವ ಯಾದಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳ ಜನತೆಯ ಅನುಕೂಲಕ್ಕಾಗಿ ರಾಯಚೂರು ಜಿಲ್ಲೆಯ ಗಿರಿಯಾಪುರ ಬಳಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಬೇಕೆಂದು ಶಾಸಕ ಡಾ. ಎ.ಬಿ. ಮಾಲಕರಡ್ಡಿ ಆಗ್ರಹಿಸಿದ್ದಾರೆ. ಈ ಸಂಬಂಧ ಇತ್ತೀಚೆಗೆ ಬೆಂಗಳೂರಿನಲ್ಲಿ ಇಂಧನ ಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿರುವ ಅವರು, ಶಕ್ತಿನಗರದ ರಾಯಚೂರು ಶಾಖೋತ್ಪನ್ನ ಕೇಂದ್ರಕ್ಕೆ ನೀರು ಸರಬರಾಜು ಮಾಡಲು ಗಿರಿಜಾಪುರದ ಬಳಿ ನಿರ್ಮಿಸಲುದ್ದೇಶಿರುವ ಚಿಕ್ಕ ಬ್ಯಾರೇಜ್ ಬದಲು ನನ್ನ ಮತಕ್ಷೇತ್ರದ ಗ್ರಾಮಗಳ ಜನತೆಗೆ ಅನುಕೂಲವಾಗುವಂತೆ ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸಬೇಕೆಂದು ಒತ್ತಾಯಿಸಿದ್ದಾರೆ. ಶಾಸಕರ ಮನವಿಗೆ ಸ್ಪಂದಿಸಿದ ಸಚಿವ ಡಿ.ಕೆ. ಶಿವಕುಮಾರ್, ತಮ್ಮ ಕ್ಷೇತ್ರದ 30ಕ್ಕೂ ಹೆಚ್ಚು ಗ್ರಾಮಗಳ ರೈತರಿಗೆ ಮತ್ತು ಎರಡು ಜಿಲ್ಲೆಗಳ ಜನರಿಗೆ ಅನುಕೂಲವಾಗುವುದಾದರೆ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
Advertisement