-ಶೇಷಮೂರ್ತಿ ಅವಧಾನಿ
ಗುಲ್ಬರ್ಗ: ಕಳೆದ ತಿಂಗಳಷ್ಟೇ ಅನರ್ಹರಿಗೆ ಮೌಲ್ಯಮಾಪನ ಕೆಲಸ ಕೊಟ್ಟು ಸುದ್ದಿಯಾಗಿದ್ದ ಗುಲ್ಬರ್ಗ ವಿವಿ ಜ್ಞಾನಗಂಗೆ, ಇದೀಗ ಬಿಇಡಿ (ಬ್ಯಾಚಲರ್ ಆಫ್ ಎಜುಕೇಷನ್) ಪದವಿ ವಾರ್ಷಿಕ ವೇಳಾಪಟ್ಟಿ ಹಳಿ ತಪ್ಪುವುದರೊಂದಿಗೆ ಸುದ್ದಿಗೆ ಗ್ರಾಸವಾಗಿದೆ.
ಶೈಕ್ಷಣಿಕ ವೇಳಾಪಟ್ಟಿಯಂತೆ 1ನೇ ಸೆಮಿಸ್ಟರ್ 2014ರ ಜನವರಿಯಿಂದ ಶುರುವಾಗಿದ್ದು ಜೂ.2ರಿಂದ ಪರೀಕ್ಷೆಗಳು ನಡೆಯಬೇಕಿತ್ತು. ಆದರೆ ಆಗಸ್ಟ್ ಮೊದಲ ವಾರ ಕಳೆದರೂ ಪರೀಕ್ಷೆ ವಿಚಾರದಲ್ಲಿ ವಿವಿ ಚಕಾರವೆತ್ತುತ್ತಿಲ್ಲ. ಇದು ಶಿಕ್ಷಣ ರಂಗದಲ್ಲಿ ಗೊಂದಲ ಮೂಡಿಸಿದೆ. ಈ ಯಡವಟ್ಟು 2013-14ನೇ ಸಾಲಿನಲ್ಲಿ ಬಿಇಡಿ ಪ್ರವೇಶ ಪಡೆದ ಹೈ-ಕ ಭಾಗದ ಗುಲ್ಬರ್ಗ, ಯಾದಗಿರಿ, ಬೀದರ್, ರಾಯಚೂರು ಜಿಲ್ಲೆಗಳ ಸಾವಿರಾರು ವಿದ್ಯಾರ್ಥಿಗಳನ್ನು ತ್ರಿಶಂಕು ಸ್ಥಿತಿಗೆ ತಳ್ಳಿದೆ.
ತ್ರಿಶಂಕು ಸ್ಥಿತಿ: ವಿವಿ ತನ್ನ ಸುತ್ತೋಲೆಯಲ್ಲಿ ಮೊದಲ ಸೆಮಿಸ್ಟರ್ 2014ರ ಜನವರಿಯಲ್ಲಿ ಪ್ರಾರಂಭವಾಗಿ ಮೇ 31ರಂದು ಕೊನೆಗೊಳ್ಳಲಿದೆ ಎಂದು ನಮೂದಿಸಿದೆ. ಜ.17ರಂದು ನಡೆದ ಪ್ರಾಚಾರ್ಯ ಸಭೆಯ ಟಿಪ್ಪಣಿ, ಜ.18ರಂದು ಕುಲಪತಿಗಳ ಅಂಕಿತದೊಂದಿಗೆ ಶೈಕ್ಷಣಿಕ ವೇಳಾಪಟ್ಟಿಯನ್ನು ಎಲ್ಲ ಕಾಲೇಜುಗಳಿಗೆ ರವಾನಿಸಿ ವಿದ್ಯಾರ್ಥಿಗಳಿಗೂ ಈ ಮಾಹಿತಿ ನೀಡಿದೆ. ವೇಳಾಪಟ್ಟಿಯಂತೆ ಕಾಲೇಜಿನವರು ಬೋಧನೆ, ಪ್ರಯೋಗ ಪಾಠ ಎಲ್ಲವನ್ನೂ ಪೂರ್ಣಗೊಳಿಸಿದ್ದರೂ ವಿವಿ ಪರೀಕ್ಷೆ ದಿನಾಂಕ ಮಾತ್ರ ನಿಗದಿಪಡಿಸಿಲ್ಲ.
ಕ್ಲಸ್ಟರ್ ಸಿಸ್ಟಂನಲ್ಲೇ ಜೂ.2ರಿಂದಲೇ ಪರೀಕ್ಷೆಗಳು ಶುರುವುಗುವಾಗಿ ಸುತ್ತೋಲೆಯಲ್ಲಿ ಹೇಳಿದ್ದನ್ನು ವಿವಿ ಮರೆತಿದೆಯೇ ಎಂದು ಕಾಲೇಜುಗಳ ಆಡಳಿತ ಮಂಡಳಿ, ಬೋಧಕರು, ಪ್ರಶಿಕ್ಷಣಾರ್ಥಿಗಳು ಪ್ರಶ್ನಿಸುತ್ತಿದ್ದಾರೆ. ಹೀಗೆ ಪರೀಕ್ಷೆ ವಿಳಂಬವಾದರೆ 2ನೇ ಸೆಮಿಸ್ಟರ್ ಅಧ್ಯಯನ ಹೇಗೆ ಮಾಡೋದು ಎಂದು ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಬೋಧಕರೂ ಮೊದಲ ಸೆಮ್ ಪರೀಕ್ಷೆ ಪೂರ್ಣಗೊಳ್ಳದೆ 2ನೇ ಸೆಮ್ ಬೋಧನೆ ಶುರು ಮಾಡೋದೆಂದು, ಮುಗಿಸೋದೆಂದು ಎಂದು ಆತಂಕಿತರಾಗಿದ್ದಾರೆ.
ವಿಶ್ವವಿದ್ಯಾಲಯದಿಂದ ಹಾರಿಕೆ ಉತ್ತರ
ಪರೀಕ್ಷೆ ವಿಳಂಬದ ಬಗ್ಗೆ ಕಾಲೇಜುಗಳ ಪ್ರಾಚಾರ್ಯರು ವಿವಿ ಸಂಪರ್ಕಿಸಿ ವಿಚಾರಿಸಿದರೆ ಅಲ್ಲಿಂದ ಹಾರಿಕೆ ಉತ್ತರಗಳೇ ದೊರಕುತ್ತಿವೆಯಂತೆ. ಹೆಸರು ಬಹಿರಂಗಪಡಿಸುವುದು ಬೇಡವೆಂಬ ಷರತ್ತಿನ ಮೇಲೆ ಬಿಇಡಿ ಕಾಲೇಜಿನ ಬೋಧಕ ಸಿಬ್ಬಂದಿಯೊಬ್ಬರು 'ಕನ್ನಡಪ್ರಭ'ದೊಂದಿಗೆ ಮತನಾಡುತ್ತ ವಿವಿ ಪರೀಕ್ಷಾ ವಿಭಾಗದಿಂದ ಖಚಿತ ಮಾಹಿತಿಯೇ ದೊರಕುತ್ತಿಲ್ಲ. ಎಲ್ಲದಕ್ಕೂ ಹಾರಿಕೆ ಉತ್ತರಗಲೇ ಹೇಳುತ್ತಿದ್ದಾರೆ. ಅರ್ಹತಾ ಪ್ರಮಾಣ ಪತ್ರಗಳು ಬರಬೇಕು, ಅದು ಬಂದಿಲ್ಲ, ಇದು ಬಂದಿಲ್ಲ ಎಂಬ ನೆಪ ಹೇಳುತ್ತ ದಿನ ದೂಡುತ್ತಿದ್ದಾರೆ. ಇದರಿಂದ ಬಿಇಡಿ 2013-14ರ ವೇಳಾಪಟ್ಟಿಯೇ ಹಾದಿತಪ್ಪಿದಂತಾಗಿದೆ. ಇದರಿಂದ ವಿದ್ಯಾರ್ಥಿಗಳ ಮೇಲಷ್ಟೆ ಅಲ್ಲ, ಕಾಲೇಜಿನ ಶೈಕ್ಷಣಿಕ ವಾತಾವರಣದ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ ಎಂದು ಕಳವಳವ್ಯಕ್ತಪಡಿಸಿದ್ದಾರೆ.
ಪರೀಕ್ಷೆ ವಿಳಂಬದಿಂದ ಇವೆಲ್ಲ ತೊಂದರೆ
ವೇಳಾಪಟ್ಟಿಯಂತೆ ಮೊದಲ ಸೆಮ್ ಪರೀಕ್ಷೆ ನಡೆಯದೆ ವಿಳಂಬವಾದಲ್ಲಿ 2ನೇ ಸೆಮ್ ಅಧ್ಯಯನದ ಮೇಲೆ ಪ್ರತಿಕೂಲ ಪರಿಣಾಮ ನಿಶ್ಚಿತ.
ಮೊದಲ ಸೆಮ್ ಪರೀಕ್ಷೆಗಳೇ ನಡೆದಿಲ್ಲ. ವೇಳಾಪಟ್ಟಿಯಂತೆ 2ನೇ ಸೆಮ್ ಜು.7ರಿಂದ ಶುರು ಮಾಡೋದು ಹೇಗೆಂದು ಕಾಲೇಜುಗಳಲ್ಲಿ ಗೊಂದಲ.
1ನೇ ಪರೀಕ್ಷೆ ನಡೆದಿಲ್ಲ, 2ನೇ ಸೆಮ್ ತರಗತಿ ಅಟೆಂಡ್ ಮಾಡೋದು ಹೇಗೆ ವಿದ್ಯಾರ್ಥಿಗಳ ಗೊಂದಲ, ಓದಿದ್ದೆಲ್ಲ ಮರೆತು ಹೋಗೋ ಭಯ.
ಪರೀಕ್ಷೆಗಳ ವಿಳಂಬದಿಂದಾಗಿ 2013-14ನೇ ಸಾಲಿನ ಬಿಇಡಿ ಪದವಿ ಪ್ರಕ್ರಿಯೆಯೇ ವಿಳಂಬವಾಗುವ ಭೀತಿ.
ಹಳಿತಪ್ಪಿರುವ ಬಿಇಡಿ ಪದವಿ ವೇಳಾಪಟ್ಟಿಯಿಂದಾಗಿ ಬಿಇಡಿ ಪದವಿಯ ಗುಣಮಟ್ಟವೇ ಕುಸಿಯುವ ಭೀತಿ.
ಪಾಠ-ಪ್ರವಚನಗಳ ಮೇಲೆ, ಶಾಲೆ-ಕಾಲೇಜು ಆಧಾರಿತ ತರಬೇತಿಗಳ ಮೇಲೆ ವಿಳಂಬರಾಕ್ಷಸನ ಹಾವಳಿ.
ಜ್ಞಾನಗಂಗೆ ಸುತ್ತೋಲೆ ಸುತ್ತಮುತ್ತ
2014, ಜ.21ರಂದೇ ಜ್ಞಾನಗಂಗೆ ತನ್ನ ವ್ಯಾಪ್ತಿಯ ಬಿಇಡಿ ಕಾಲೇಜುಗಳಿಗೆ ವಾರ್ಷಿಕ ಶೈಕ್ಷಣಿಕ ವೇಳಾಪಟ್ಟಿಯ ಸುತ್ತೋಲೆ ರವಾನಿಸಿದ್ದು ಅದರಲ್ಲಿರುವ ಮುಖ್ಯಾಂಶಗಳು ಹೀಗಿವೆ.
ಪ್ರವೇಶ ಪ್ರಕ್ರಿಯೆ ಆರಂಭ- 20.1.2014ರಿಂದ 31.1.2014
ಕಾಲೇಜು ಆರಂಭ, ಮೊದಲ ಸೆಮ್ ಆರಂಭದ ದಿನ- 24.1.2014
ಮೂಲ ಪ್ರಮಾಣಪತ್ರ ಸಲ್ಲಿಕೆ- 3.3.2014
ಕಾಲೇಜುಗಳಿಗೆ ಅರ್ಹತಾ ಪ್ರಮಾಣಪತ್ರ ನೀಡುವ ಕೊನೆ ದಿನ- 21.4.2014
ಹಾಲ್ ಟಿಕೆಟ್ ಮತ್ತು ಕ್ಲಸ್ಟರ್ ಪಟ್ಟಿ ನೀಡಿಕೆ- 26.5.2014
ಮೊದಲ ಸೆಮ್ ಪರೀಕ್ಷೆ ಆರಂಭದ ದಿನ- ಜೂ.2, 2014
ಮೊದಲ ಸೆಮ್ ಫಲಿತಾಂಶ ಘೋಷಣೆ- ಜುಲೈ 2014
ಎರಡನೇ ಸೆಮ್ ಆರಂಭ- ಜು.7, 2014
2ನೇ ಸೆಮ್ ಥಿಯರಿ ಪರೀಕ್ಷೆಗಳು- ಡಿ.8, 2014
2ನೇ ಸೆಮ್ ಫಲಿತಾಂಶ ಘೋಷಣೆ- ಜನವರಿ 2015.
Advertisement