ಯಾದಗಿರಿ: ಸುರಪುರ ತಾಲೂಕಿನ ಅಗ್ನಿ ಗ್ರಾಮದಲ್ಲಿನ ಜೈನ್ ತೀರ್ಥಂಕರ ಮೂರ್ತಿ ಸ್ಥಳಾಂತರ ಪ್ರಕರಣ ತಮ್ಮ ಗಮನಕ್ಕಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳೊಡನೆ ಚರ್ಚಿಸಿ, ಮೂರ್ತಿ ವಾಪಸ್ಸಾತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ ಹೇಳಿದರು. ಜಿಲ್ಲಾ ಅತಿಥಿ ಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಚ್ಯವಸ್ತುಗಳನ್ನು ಸ್ಥಳಾಂತರಿಸಲು ಯಾರಿಗೂ ಅಧಿಕಾರವಿಲ್ಲ. ಈಗಾಗಲೇ ಜಿಲ್ಲಾಡಳಿತದ ಕಡೆಯಿಂದ 26 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಶೀಘ್ರದಲ್ಲಿಯೇ ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದರು.
ಜವಳಿ ಪಾರ್ಕ್‌ಗೆ ಅಡೆತಡೆ ನಿವಾರಣೆ: ಈ ಹಿಂದೆ ಹೈಕೋರ್ಟ್ ಜವಳಿ ಪಾರ್ಕ್ ಕಾಮಗಾರಿಗೆ ತಡೆಯಾಜ್ಞೆ ನೀಡಿದ್ದರಿಂದ ಸುಮಾರು 40ಕ್ಕೂ ಹೆಚ್ಚು ಕಂಪೆನಿಗಳು ಫ್ಯಾಕ್ಟರಿ ತೆಗೆಯಲು ಹಿಂದೇಟು ಹಾಕಿದ್ದವು. ಜಿಲ್ಲೆಯಲ್ಲಿ ಜವಳಿ ಪಾರ್ಕ್ ನಿರ್ಮಾಣ ಮಾಡಲು ಅಡೆತಡೆಗಳು ನಿವಾರಣೆಯಾಗಿದ್ದು, ಹೆಚ್ಚಿನ ಪರಿಹಾರಕ್ಕಾಗಿ ಸಲ್ಲಿಸಿದ ಅರ್ಜಿಯನ್ನು ಗುಲ್ಬರ್ಗ ಹೈಕೋರ್ಟ್ ವಜಾಗೊಳಿಸಿದೆ. ಇದ್ದರಿಂದ ಪಾರ್ಕ್ ಕಾಮಗಾರಿ ಚುರುಕುಗೊಳಿಸಲಾಗುವುದು. ಆದ್ದರಿಂದ ಮತಷ್ಟು ಕಂಪೆನಿಗಳು ಬರಲಿವೆ ಎಂದು ಹೇಳಿದರು. ತಾಲೂಕಿನ ಬಾಲಚೇಡ ಗ್ರಾಮದ ಬಳಿ ಇರುವ 130 ಎಕರೆ ಸರ್ಕಾರಿ ಭೂಮಿಯಲ್ಲಿ ಈಗಾಗಲೇ ಮೊರಾರ್ಜಿ ವಸತಿ ಶಾಲೆ ಮತ್ತು ಸರ್ಕಾರಿ ಐಟಿಐ ಕಾಲೇಜುಗಳು ಮಂಜೂರಾಗಿದ್ದು, ಕೆಲವೇ ದಿನಗಳಲ್ಲಿ ಕಟ್ಟಡ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದರು.
ಏಕಲವ್ಯ ಶಾಲೆ ಬಾಲಚೇಡ ಗ್ರಾಮದಲ್ಲಿ: ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಬಸವಂತಪುರ ಗ್ರಾಮದಲ್ಲಿ ಏಕಲವ್ಯ ಶಾಲೆ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದರು. ಆದರೆ ಆ ಗ್ರಾಮದಲ್ಲಿ ಸ್ಥಳದ ಅಭಾವಿರುವುದರಿಂದ ಏಕಲವ್ಯ ಶಾಲೆಯನ್ನೂ ಸಹ ಬಾಲಚೇಡ ಗ್ರಾಮದಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ತಾಲೂಕಿನ ಯರಗೋಳ ಗ್ರಾಮದ ಬಹುದಿನಗಳ ಬೇಡಿಕೆಯಾಗಿದ್ದ 33 ಕೆ.ವಿ. ವಿದ್ಯುತ್ ಘಟಕ ಸ್ಥಾಪನೆಗೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅನುಮತಿ ನೀಡಿದ್ದಾರೆ. ಅದರಂತೆ ಮುಂದಿನ ತಿಂಗಳಲ್ಲಿ ಘಟಕ ಸ್ಥಾಪನೆಯಾಗಲಿದ್ದು, ಇದರಿಂದ ಯರಗೋಳ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ವಿದ್ಯುತ್ ಸಮಸ್ಯೆ ನಿವಾರಣೆಯಾಗಲಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮನೋಜ್ ಜೈನ್, ಜಿಪಂ ಅಧ್ಯಕ್ಷ ಸಿದ್ದನಗೌಡ ಕೆಂಭಾವಿ, ಸ್ಥಾಯಿ ಸಮಿತಿ ಅಧ್ಯಕ್ಷ ಭೀಮರಾಯ ಕಂದಕೂರ, ಸದಸ್ಯರಾದ ಶರಣೀಕಕುಮಾರ ದೋಖಾ, ಹನಮೇಗೌಡ ಮರಕಲ್, ಬಸವರಾಜ ಖಂಡ್ರೆ ಸೇರಿದಂತೆ ಇನ್ನಿತರರು ಇದ್ದರು.
ಪತ್ರಕರ್ತರಿಗೆ ಅಭಿವೃದ್ಧಿ ಕಾಣಲ್ವಂತೆ...
ಯಾದಗಿರಿ: ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ಆದರೆ ಪತ್ರಕರ್ತರ ಕಣ್ಣಿಗೆ ಕಾಣುತ್ತಿಲ್ಲ. ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದ್ದು, ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಜಿಲ್ಲಾ ಉಸ್ತುವಾರಿ ಸಚಿವರ ಬಾಬುರಾವ ಚಿಂಚನಸೂರ ಹೇಳಿದ ಉತ್ತರ ಇದು. ಜಿಲ್ಲಾ ಅತಿಥಿ ಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಾಗಿ ಐದು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಎಲ್ಲವನ್ನು ಹಂತ ಹಂತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಮಕ್ಕಳ ಕೈಯಲ್ಲಿರಬೇಕಾದ ಪುಸ್ತಕ ಜಾಲಿ ಕಂಟಿಯಲ್ಲಿ!
ಹುಣಸಗಿ: ಹುಣಸಗಿ -ನಾರಾಯಣಪುರ ಮುಖ್ಯರಸ್ತೆ ಸಮೀಪದ ಯುಕೆಪಿ ಕ್ಯಾಂಪಿನ ಬಯಲು ಪ್ರದೇಶದಲ್ಲಿ ಸಿಮೆಂಟ್ ಪೈಪ್‌ನಲ್ಲಿ ಬಿಸಾಡಿದ ಅಂದಾಜು 500ಕ್ಕೂ ಹೆಚ್ಚು 7ನೇ ತರಗತಿಯ ಸಮಾಜ ವಿಜ್ಞಾನ, ಗಣಿತ ಪುಸ್ತಗಕಳು ಸೋಮವಾರ ಪತ್ತೆಯಾಗಿವೆ. ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ಹುಣಸಗಿ ಕರವೇ ಅಧ್ಯಕ್ಷ ನಂದಣ್ಣ ದೊರಿ, ಗೌರವಾಧ್ಯಕ್ಷ ಈರಣ್ಣ ಅಗ್ನಿ, 2014ನೇ ಸಾಲಿನ ಪುಸ್ತಕಗಳು ವಿದ್ಯಾರ್ಥಿಗಳ ಕೈ ಸೇರದೆ ಬಯಲು ಗಿಡಗಂಟೆಯಲ್ಲಿ ಸಿಕ್ಕು ಶಿಕ್ಷಣ ಪ್ರೇಮಿಗಳಿಗೆ ನೋವುಂಟು ಮಾಡಿದೆ ಎಂದು ತಿಳಿಸಿದರು. ಸುರಪುರ ಬಿಇಒ ಎ.ವಿ. ಕೆಂಪರಂಗಯ್ಯ ಅವರನ್ನು 'ಕನ್ನಡಪ್ರಭ' ಸಂಪರ್ಕಿಸಿದಾಗ, ಸರ್ಕಾರಿ ಶಾಲೆಯ ಪಠ್ಯ ಪುಸ್ತಕಗಳ ಮೇಲೆ ಉಚಿತ ಎಂದು ಮುದ್ರಣವಾಗಿರುತ್ತದೆ. ಇಲ್ಲಿ ಲಭ್ಯವಾಗಿರುವ ಪುಸ್ತಕಗಳ ಮೇಲೆ ಬೆಲೆ ಸಹಿತ ಮುದ್ರಣವಾಗಿದೆ ಎಂದು ತಿಳಿದು ಬಂದಿದೆ. ಇಂತಹ ಪುಸ್ತಕಗಳನ್ನು ಖಾಸಗಿ ಶಾಲೆಯವರು ಹಣವನ್ನು ಧರಿಸಿ ಪಡೆದಿರುತ್ತಾರೆಂದು ತಿಳಿಸಿದರು. ಗಿರೆಪ್ಪ ಪೂಜಾರಿ ಎಂಬ ವೃದ್ಧ ಅವುಗಳನ್ನು ರಕ್ಷಣೆ ಮಾಡಿ ಪುಟ್ಟದಾದ ಸಿಮೆಂಟ್ ಪೈಪ್‌ನಲ್ಲಿಟ್ಟು ಅವುಗಳನ್ನು ರಕ್ಷಣೆ ಮಾಡಿದ್ದಾನೆ. ಈ ವಿಷಯವ ಬಿಇಒ ಗಮನಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ಯಾವ ರೀತಿಯ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದ.ೆ
ಬಿಜೆಪಿ ಪ್ರತಿಭಟನೆ 8ರಂದು
ಸುರಪುರ: ತಾಲೂಕಿನ ಪೇಠ ಅಮ್ಮಾಪುರ ಗ್ರಾಮದಲ್ಲಿ ದಲಿತರ ಮೇಲೆ ದೌರ್ಜನ್ಯ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ಖಂಡಿಸಿ ಆ.8ರಂದು ಗಾಂಧಿವೃತ್ತದಲ್ಲಿ ಮಾಜಿ ಸಚಿವ ರಾಜುಗೌಡರ ನೇತೃತ್ವದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಮ್ಮಾಪುರದಲ್ಲಿ ಇದುವರೆಗೂ ನಡೆದ ಕೊಲೆ, ಮಾರಣಾಂತಿಕ ಹಲ್ಲೆ ಸೇರಿದಂತೆ ವಿವಿಧ ಪ್ರಕರಣಗಳ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕಾದರೆ ಸಿಒಡಿ ಅಥವಾ ಲೋಕಾಯುಕ್ತರಿಗೆ ವರ್ಗಾಯಿಸಬೇಕು. ಇಲ್ಲದಿದ್ದರೆ ಮುಂದೆ ಹಂತ ಹಂತವಾಗಿ ಉಗ್ರ ಹೋರಾಟ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಯಾವುದೇ ಅಹಿತಕರ ಘಟನೆ ನಡೆದಲ್ಲಿ ಜಿಲ್ಲಾಡಳಿತವೇ ನೇರಹೊಣೆಯಾಗಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರದಲ್ಲಿ ರಾಜುಗೌಡ ತಿಳಿಸಿದ್ದಾರೆ.
Advertisement