ಸಿಂಧನೂರು: ತುಂಗಭದ್ರಾ ಎಡದಂಡೆ ನಾಲೆಯ 55ನೇ ವಿತರಣಾ ಕಾಲುವೆ ಬಳಿ ಈಗಾಗಲೇ ತೆರವುಗೊಳಿಸಿದ 46 ಅಕ್ರಮ ಪೈಪ್‌ಗಳ ತೂಬುಗಳನ್ನು ಕೂಡಲೇ ಶಾಶ್ವತವಾಗಿ ಮುಚ್ಚಲು ಹಾಗೂ ಕೊನೆ ಭಾಗದವರೆಗೆ ಸಮರ್ಪಕ ನೀರು ಹರಿಸಲು ಒತ್ತಾಯಿಸಿ ಕೆಆರ್‌ಎಸ್ ಮತ್ತಿತರ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಬಳಗಾನೂರು- ರಾಗಲಪರ್ವಿ ಕ್ರಾಸ್ ಬಳಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ, ವಿತರಣಾ ಕಾಲುವೆ 55ರಲ್ಲಿ ಅಕ್ರಮ ಪೈಪ್‌ಗಳ ತೆರವಿಗಾಗಿ ಆಗ್ರಹಿಸಿ ಹಲವಾರು ಸುತ್ತಿನ ಉಗ್ರ ಸ್ವರೂಪದ ಹೋರಾಟವನ್ನು ನಡೆಸಲಾಗಿದೆ.
ಭರವಸೆ: ಸುಮಾರು 3 ಗಂಟೆ ನಡೆದ ರಸ್ತೆತಡೆಯಿಂದ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸ್ಥಳಕ್ಕೆ ಆಗಮಿಸಿದ ಸಹಾಯಕ ಆಯುಕ್ತ ಟಿ.ಯೋಗೇಶ್, ತಹಸೀಲ್ದಾರ್ ಗಂಗಪ್ಪ ಕಲ್ಲೂರು, ಮಾಜಿ ಶಾಸಕ ವೆಂಕಟರಾವ್ ನಾಡಗೌಡ, ಡಿವೈಎಸ್ಪಿ ಸೂರ್ಯವಂಶಿ, ಸಿಪಿಐ ರಮೇಶ ರೊಟ್ಟಿ, ನೀರಾವರಿ ಅಧಿಕಾರಿಗಳು ರಸ್ತೆ ಮಧ್ಯೆಯಲ್ಲಿ ಕುಳಿತು ರೈತ ಮುಖಂಡರ ಜೊತೆ ಸುದೀರ್ಘ ಚರ್ಚಿ ನಡೆಸಿ ಸಮಸ್ಯೆಯನ್ನು ಆದಷ್ಟು ತೀವ್ರವಾಗಿ ಬಗೆಹರಿಸುತ್ತೇವೆಂದು ಭರವಸೆ ನೀಡಿದರು.
ಅಧಿಕಾರಿಗಳ ಕುಮ್ಮಕ್ಕು
ಸಹಾಯಕ ಆಯುಕ್ತರ ನೇತೃತ್ವದಲ್ಲಿ ಭಾನುವಾರ 46 ಅಕ್ರಮ ಪೈಪ್ ತೆರವುಗೊಳಿಸಿದ್ದು ಅವೈಜ್ಞಾನಿಕವಾಗಿದೆ. ನೀರುಗಳ್ಳರು ಕೆಲವೇ ನಿಮಿಷಗಳಲ್ಲಿ ಅಕ್ರಮ ಪೈಪ್‌ಗಳ ತೂಬುಗಳಿಗೆ ಮರು ಸಂಪರ್ಕ ಪಡೆದುಕೊಳ್ಳುವಂತ ಸ್ಥಿತಿಯಲ್ಲಿ ತೆರವು ಕಾರ್ಯ ನಡೆಸಿದ್ದಾರೆ. ಅಧಿಕಾರಿಗಳ ಕುಮ್ಮಕ್ಕಿನಿಂದ ಈಗಾಗಲೇ ಮರು ಸಂಪರ್ಕ ಪಡೆದಿದ್ದಾರೆಂದು ದೂರಿದರು. ತೂಬುಗಳನ್ನು ಮುಚ್ಚಿ ಶಾಶ್ವತವಾಗಿ ನಾಶಗೊಳಿಸಲು ಸ.ಆಯುಕ್ತರು ಜು.12ರಂದು ರೈತರ ಸಭೆ ಕರೆದು ಸಿಂಧನೂರು ಬಂದ್ ಹೋರಾಟ ನಿಲ್ಲಿಸಿ ಅಕ್ರಮ ಪೈಪ್‌ಗಳ ತೂಬು ಶಾಶ್ವತವಾಗಿ ಮುಚ್ಚಲು ಲಿಖಿತ ಭರವಸೆಯನ್ನು ತಹಸೀಲ್ದಾರ್ ಸಮ್ಮುಖ ಅಧಿಕಾರಿಗಳು ನೀಡಿದ್ದರು.
ಡಿಸಿ ಆದೇಶ ಲೆಕ್ಕಕ್ಕಿಲ್ಲ
ಜಿಲ್ಲಾಧಿಕಾರಿಗಳು ಜು.25ರಂದು ಸ್ಪಷ್ಟ ಆದೇಶವನ್ನು ಹೊರಡಿಸಿ ಕೂಡಲೇ ವಿತರಣಾ ಕಾಲುವೆ 55ರಲ್ಲಿ 46 ಅಕ್ರಮ ಪೈಪ್‌ಗಳನ್ನು ತಕ್ಷಣ ಶಾಶ್ವತವಾಗಿ ಮುಚ್ಚಲು ಆದೇಶಿಸಿದ್ದರೂ ಈವರೆಗೆ ಯಾವುದೆ ಕ್ರಮ ಜರುಗಿಲ್ಲ. ಡಿಸಿ ಆದೇಶ ಪಾಲಿಸದ ನೀರಾವರಿ ಅಧಿಕಾರಿಗಳನ್ನು ಕೂಡಲೇ ಅಮಾನತಿನಲ್ಲಿಡಬೇಕೆಂದು ಒತ್ತಾಯಿಸಿದರು.
Advertisement