ಯಾದಗಿರಿ: ಪ್ರವಾಹದಿಂದ ಹಲವು ಸಮಸ್ಯೆಗಳಿಂದ ಜರ್ಜರಿತರಾಗಿ ನರಳುತ್ತಿರುವ ನೀಲಕಂಠರಾಯನ ಗಡ್ಡೆ ಗ್ರಾಮಸ್ಥರಿಗೆ ಸುಲಭ ಸಂಚಾರವಾಗುವಂತೆ ಕೃಷ್ಣಾ ನದಿಗೆ ಅಡ್ಡಲಾಗಿ ಶಾಶ್ವತ ಬ್ರಿಜ್ ನಿರ್ಮಾಣ ಮಾಡಲಾಗುವುದು ಎಂದು ಸುರಪುರ ಶಾಸಕ ರಾಜಾ ವೆಂಕಟಪ್ಪನಾಯಕ ಹೇಳಿದರು.
ಪ್ರವಾಹ ಹಿನ್ನೆಲೆಯಲ್ಲಿ ಸೋಮವಾರ ನೀಲಕಂಠರಾಯನ ಗಡ್ಡೆಗೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನೀಲಕಂಠರಾಯನ ಗಡ್ಡೆ ಸಮಸ್ಯೆ ಸರ್ಕಾರಕ್ಕೆ ಗೊತ್ತಾಗಿದೆ. ಈ ಕುರಿತು ತೂಗು ಸೇತುವೆ ಅಥಾವ ಬ್ರಿಜ್ ನಿರ್ಮಾಣಕ್ಕೆ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ಸರ್ಕಾರಕ್ಕೆ ಒತ್ತಡ ಹಾಕಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ಭಾರೀ ಗಾತ್ರದ ಬೋಟ್ ತರಿಸಲಾಗುವುದು. ಪ್ರವಾಹ ಇರುವುದರಿಂದ ಯಾವುದೇ ಕಾರಣಕ್ಕೂ ನದಿಗೆ ಇಳಿಯಬಾರದು, ಆಗೊಂದು ವೇಳೆ ಪರಿಸ್ಥಿತಿ ಉದ್ಭವಿಸಿದಾಗ ನೇರವಾಗಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಶಾಸಕರನ್ನು ಭೇಟಿಯಾದ ಗಡ್ಡೆಯ ಜನರಿಗೆ ತಿಳಿಸಿದರು.
ಗರ್ಭಿಣಿ ಯಲ್ಲಮ್ಮ ಮನೆಗೆ ಭೇಟಿ: ಪ್ರವಾಹದಲ್ಲಿ ನದಿ ಈಜಿದ ತುಂಬ ಗರ್ಭಿಣಿ ಯಲ್ಲಮ್ಮ ಅವರ ತವರೂರು ಗೋನಾಟ್ಲರ ದೊಡ್ಡಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿದರು. 10 ಸಾವಿರ ಪರಿಹಾರ ವಿತರಿಸಿದರು.
ಈ ಸಂದರ್ಭ ಮುಖಂಡರಾದ ವಿಠಲ ಯಾದವ, ವೇಣುಗೋಪಾಲನಾಯಕ, ಪರಮಣ್ಣ ಗುತ್ತೇದಾರ, ಗುಂಡಪ್ಪ ಸೊಲ್ಲಾಪುರ, ನಂದಣ್ಣ ದೇಸಾಯಿ, ನಂದಣ್ಣ ಪೂಜಾರಿ, ಲಕ್ಷ್ಮಣ ಲಿಂಗದಳ್ಳಿ, ಜಟೆಪ್ಪ ದಳಾ, ಲಕ್ಷ್ಮಣ ಗಡ್ಡಿ, ಬಸವರಾಜ ರೊಟ್ಲರ್ ಇದ್ದರು. ಕಂದಾಯ ನಿರೀಕ್ಷಕ ಸಂಗಮೇಶ, ಗ್ರಾಮ ಲೆಕ್ಕಾಧಿಕಾರಿ ಸಂತೋಷ ರೆಡ್ಡಿ, ಮದನಸಾಬ ಇದ್ದರು.
Advertisement