ಮಾಧ್ಯಮ ಸಹಕಾರ ಅಗತ್ಯ

Updated on: 

ಯಾದಗಿರಿ: ಅಭಿವೃದ್ಧಿಯಲ್ಲಿ ಪತ್ರಿಕೆಗಳ ಪಾತ್ರ ಮಹತ್ವವಾಗಿದ್ದು, ಜಿಲ್ಲಾಡಳಿತದೊಂದಿಗೆ ಸಹಕರಿಸಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ಮನೋಜ್ ಜೈನ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಮ್ಮಿಕೊಂಡಿದ ಪತ್ರಿಕಾ ದಿನಾಚರಣೆ ಮತ್ತು ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯಾದಗಿರಿ ಜಿಲ್ಲೆಯಾಗಿ ನಾಲ್ಕು ವರ್ಷ ಕಳೆದಿದೆ. ಆದರೂ ಜಿಲ್ಲೆಯ ಜನತೆ ಹಲವಾರು ಸಮಸ್ಯೆ ಎದುರಿಸುತ್ತಿದ್ದು, ಜಿಲ್ಲಾಡಳಿತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಎಲ್ಲರ ಸಹಕಾರದಿಂದ ಬರುವ ದಿನಗಳಲ್ಲಿ ಬದಲಾವಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಸ್ವಾತಂತ್ರ್ಯಪೂರ್ವದಿಂದಲೂ ಮಹತ್ವ: ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಗುರುಮಠಕಲ್ ಖಾಸಾಮಠದ ಶಾಂತವೀರ ಸ್ವಾಮೀಜಿ, ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಪತ್ರಿಕೆಗಳಿಗೆ ಹೆಚ್ಚಿನ ಮಹತ್ವವಿದೆ. ಅಂದಿನಿಂದ ಇಂದಿನವರೆಗೆ ನಿರಂತರ ತನ್ನದೇ ಆದ ಛಾಪು ಮೂಡಿಸುತ್ತ ಪ್ರಗತಿಗೆ ತನ್ನದೇ ಆದ ಕೊಡುಗೆ ನೀಡಿದೆ ಎಂದು ನುಡಿದರು.
ಪ್ರಸಕ್ತ ದಿನಗಳಲ್ಲಿ ಪತ್ರಿಕೆಗಳ ಮೇಲೆ ಅಗಾಧ ಜವಬ್ದಾರಿಯಿದೆ. ಪತ್ರಿಕೆಗಳ ಮೇಲೆ ಜನತೆಗೆ ವಿಶ್ವಾಸವಿದೆ. ಪತ್ರಕರ್ತರು ಅವರ ಭಾವನೆಗಳಿಗೆ ಧಕ್ಕೆಯಾಗದಂತೆ ಸಾಮಾಜಿಕ ಸೇವೆ ಗುರಿ ಇಟ್ಟುಕೊಂಡು ಕೆಲಸ ಮಾಡಬೇಕು. ಅಂದಾಗ ಮಾತ್ರ ಒಳ್ಳೆಯ ಕೀರ್ತಿ ಸಿಗುತ್ತದೆ ಎಂದು ಹೇಳಿದರು.
ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸಲಿ: ಪತ್ರಕರ್ತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇದರಿಂದ ಅವರು ಇನ್ನೂ ಉತ್ಸಾಹದಿಂದ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಗುಲ್ಬರ್ಗ ಜಿಲ್ಲಾ ಸಣ್ಣ ಪತ್ರಿಕೆಗಳ ಸಂಘದ ಜಿಲ್ಲಾಧ್ಯಕ್ಷ ವಿಶ್ವನಾಥ ಸ್ವಾಮೀಜಿ, ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಸಂಜೀವಕುಮಾರ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆ ಮೇಲೆ ಡಿವೈಎಸ್ಪಿ ಆರ್.ಬಿ. ಬಸರಗಿ, ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ವೆಂಕಟಗಿರಿ ದೇಶಪಾಂಡೆ ಇದ್ದರು.
ಇದೇ ವೇಳೆ ಪತ್ರಕರ್ತರಾದ ಭೀಮಾಶಂಕರ ಕಾಕಲವಾರ್, ಭೀಮಸೇನರಾವ್ ಕುಲ್ಕರ್ಣಿ, ವೀರಣ್ಣ ಹಾದಿಮನಿ ಹಾಗೂ ರವಿಕುಮಾರ ನರಿಬೋಳಿ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಜಿಲ್ಲೆಯ ಪತ್ರಕರ್ತರು ಭಾಗವಹಿಸಿದ್ದರು. ಪತ್ರಕರ್ತ ಅನೀಲ ಬಾಸುದೆ ಸ್ವಾಗತಿಸಿದರು. ಲಕ್ಷ್ಮೀಕಾಂತ ಕುಲ್ಕರ್ಣಿ ನಿರೂಪಿಸಿ ವಂದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com