ಗುಲ್ಬರ್ಗ: ಆಚಾರ್ಯ ತುಳಸಿ ಅವರು ನೂರು ವರ್ಷಗಳ ಮುಂಚೆ ಬೋಧಿಸಿದ ಅಣುವ್ರತ ನಿಯಮಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಹಾಗೂ ನಿಯಮಿತವಾಗಿ ಪಾಲನೆ ಮಾಡಿದರೆ ಜೀವನದಲ್ಲಿ ಮಹಾಸಾಧನೆ ಮಾಡಲು ಸಾಧ್ಯ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವಲಯ ಮುಖ್ಯಸ್ಥ ರಾಜಯೋಗಿನಿ ಬಿ.ಕೆ.ವಿಜಯಾ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ನಗರದ ಶ್ರೀ ಸಂಕೇಶ್ವರ ಪಾರ್ಶ್ವನಾಥ ಜೈನ ಶ್ವೇತಾಂಬರ ಸಂಘ ಆಚಾರ್ಯ ತುಳಸಿ ಅವರ ಜನ್ಮ ಶತಾಬ್ಧಿ ನಿಮಿತ್ಯ ಏರ್ಪಡಿಸಿದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಆಚಾರ್ಯರು ಬೋಧಿಸಿದ ಜೀವನದ ಮೌಲ್ಯಗಳು ಕೇವಲ ಭಾಷಣಕ್ಕೆ ಮಾತ್ರ ಸೀಮಿತ ಆಗಬಾರದು. ಅವರ ಬೋಧನೆಗಳು ವ್ಯಕ್ತಿಯ ಶ್ರೇಷ್ಠ ಜೀವನ ಮಟ್ಟಕ್ಕೆ ಕೊಂಡೊಯುತ್ತದೆ. ಕಾರಣ ಪ್ರತಿಯೊಬ್ಬರು ಅಧ್ಯಾತ್ಮಿಕ ಜ್ಞಾನದ ಬೆಳಕಿನಲ್ಲಿ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.
ನಗರದ ಆದರ್ಶ ಮೆಡಿಕಲ್ ಹಾಲ್ ಮುಂಬಾಗ ಏರ್ಫಡಿಸಿದ್ದ ಅಣುವ್ರತ ಸಂಕಲ್ಪ ಯಾತ್ರೆಯನ್ನು ಶಾಸಕ ದತ್ತಾತ್ರೇಯ ಪಾಟೀಲ (ಅಪ್ಪುಗೌಡ) ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಅಣುವ್ರತ ಸಂಕಲ್ಪ ಯಾತ್ರೆ ರಾಜಸ್ಥಾನದಿಂದ ಪ್ರಾರಂಭಗೊಂಡು ಭಾರತದ ಎಲ್ಲ ರಾಜ್ಯಗಳಲ್ಲಿ ಪ್ರಯಾಣ ಮಾಡಲಿದೆ. ಹಾಗೂ ಕರ್ನಾಟಕಕ್ಕೆ ಆಗಮಿಸಿದ ಯಾತ್ರೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ವಾಗತಿಸಿದರೆಂದು ಉತ್ತರ ಕರ್ನಾಟಕದ ಸಂಕಲ್ಪ ಯಾತ್ರೆ ಸಂಯೋಜಕ ಸುರೇಶ್ ಕೊಠಾರಿ ಅವರು ಸ್ವಾಗತ ಕೋರಿ ವಿವರಿಸಿದರು.