ಕ.ಪ್ರ.ವಾರ್ತೆ ಹಾಸನ ಡಿ.15
ಕನ್ನಡ ಸಾಹಿತ್ಯದ ಕೆಲವೊಂದನ್ನು ಬೂಸಾ ಸಾಹಿತ್ಯ ಎಂದು ಹೇಳಿದ ಬಸವಲಿಂಗಪ್ಪನವರು ಕರ್ನಾಟಕದ ಹಣೆ ಬರಹವನ್ನು ತಿದ್ದಿದ್ದಂತಹ ಮಹಾನ್ ವ್ಯಕ್ತಿ. ಅವರನ್ನು ಕರ್ನಾಟಕದ ಉಕ್ಕಿನ ಮನುಷ್ಯ ಎಂದು ಕರೆಯಬೇಕು ಎಂದು ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ ಕರೆ ನೀಡಿದರು.
ದಲಿತ ಸಾಹಿತ್ಯ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಾಗಭೂಮಿ ವಿವಿಧೋದ್ದೇಶ ಅಭಿವೃದ್ಧಿ ಸಂಘಗಳ ಆಶ್ರಯದಲ್ಲಿ ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಪ್ರಥಮ ಜಿಲ್ಲಾ ದಲಿತ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಸವಲಿಂಗಪ್ಪನವರು 73ರಲ್ಲಿ ಕನ್ನಡ ಸಾಹಿತ್ಯದ ಕೆಲವೊಂದನ್ನು ಬೂಸಾ ಸಾಹಿತ್ಯ ಎಂದು ಹೇಳಿದ ಪರಿಣಾಮದಿಂದ ಸಾಕಷ್ಟು ಅಲ್ಲೋಲ ಕಲ್ಲೋಲಗಳು ಉಂಟಾಗಿ ಅವರು ತಮ್ಮ ಸ್ಥಾನವನ್ನೇ ಕಳೆದುಕೊಳ್ಳಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಯಿತು ಎಂದರು.
ಮಾತು ಬುಲೆಟ್‌ನಂತೆ: ಬಿ.ಆರ್. ಅಂಬೇಡ್ಕರ್ ಅವರು ದೇಶದ ಹಣೆಬರಹ ಬರೆದರೆ, ಬಸವಲಿಂಗಪ್ಪನವರು ಕರ್ನಾಟಕದ ಹಣೆಬರಹವನ್ನು ತಿದ್ದಿದ್ದರು. ಅವರು ಕನ್ನಡ ಸಾಹಿತ್ಯದ ಕೆಲವೊಂದನ್ನು ಬೂಸಾ ಸಾಹಿತ್ಯ ಅಂದಿದ್ದಕ್ಕೆ ಸಾಹಿತಿ ಕುವೆಂಪು, ಅವರು ಇಡೀ ಕನ್ನಡ ಸಾಹಿತ್ಯವನ್ನೇ ಬೂಸಾ ಸಾಹಿತ್ಯ ಅಗಿದೆ ಅಂತ ಹೇಳಬೇಕಿತ್ತು ಎಂದರು. ಆಗ ಕನ್ನಡ ಸಾಹಿತ್ಯದ ಪುನರ್ ವಿಮರ್ಶೆಗಳು ನಡೆದವು ಎಂದ ಅವರು, ಬಸವಲಿಂಗಪ್ಪನವರು ಮಾತುಗಳು 303 ಬುಲೆಟ್‌ನಂತೆ ನಾಟುತ್ತಿದ್ದವು ಎಂದು ಹೇಳಿದರು.
ಸುಲಿಗೆ ಕೇಂದ್ರಗಳು: ಹಿಂದೂ ದೇವತೆಗಳನ್ನು ಗಟಾರಕ್ಕೆ ಬಿಸಾಡಿ ಅಂತ ಅಂದ್ರು. ಆಗ ಕೆಲವು ಸಾಂಪ್ರದಾಯಿಕ ಜನತೆಗೆ ಬಿಸಿ ತಟ್ಟಿತ್ತು. ದೇವರ ಹೆಸರಿನಲ್ಲಿ ಸುಲಿಗೆ ಕೇಂದ್ರಗಳು ಹೆಚ್ಚಾಗಿವೆ ಎಂದ ಅವರು, ಬೂಸಾ ಸಾಹಿತ್ಯ ಎಂದು ಕರೆಯಬೇಡಿ. ಅದನ್ನು ಬೂಸಾ ದಂಗೆ ಅಂತ ಕರೆಯಬೇಕು ಎಂದರು.
ದಲಿತ ಚಳುವಳಯು ನಿರಂತರವಾಗಿದ್ದು, 40 ವರ್ಷಗಳು ತುಂಬಿದೆ. ಕೆಲವು ಚಳುವಳಿಗಳು ಕೇವಲ ಹತ್ತಿಪ್ಪತ್ತು ವರ್ಷಗಳ ಇದ್ದು ತೆಪ್ಪಗಾಗಿವೆ. ಆದರೆ ದಲಿತ ಚಳುವಳಿ ಮಾತ್ರ ನಿಂತಲ್ಲ. ಕೆಲವರು ದಲಿತ ಚಳುವಳಿ ಮಂಕಾಗಿದೆ. ಮಂಪರು ಆಗಿದೆ, ನಿಂತಿದೆ, ಮಲಗಿ ಹೋಗಿದೆ ಅಂತಾರೆ. ಅದರೆ ಆ ರೀತಿಯ ಹೇಳುವವರ ಉಸಿರು ನಿಂತು ಹೋಗಿದೆ ಅಷ್ಟೇ. ದಲಿತ ಚಳುವಳಿ ಜೋಗ ಜಲಪಾತದಂತೆ ಧುಮ್ಮಿಕ್ಕಿ ಹರಿಯುವಂತಹದು. ಅದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಸಹಕಾರ ಮುಖ್ಯ: ಬೂಸಾ ಸಾಹಿತ್ಯದವರು ದಲಿತ ಸಾಹಿತ್ಯದ ಬಗ್ಗೆ ಮಾತನಾಡಬೇಕಾದರೆ ಎಂಟೆದೆ ಬೇಕು. ಕನ್ನಡ ಸಾಹಿತ್ಯಕ್ಕೆ ಬಸವಲಿಂಗಪ್ಪನವರ ದಲಿತ ಸಾಹಿತ್ಯ ಹೊಸ ಸಾಹಿತ್ಯದ ತಾತ್ವಿಕ ಮಾನದಂಡವನ್ನು ನೀಡಿತು. ಅವರು ವಾದ ಅನ್ನಕ್ಕಿಂದ ಸ್ವಾಭಿಮಾನವನ್ನು ಉಂಟು ಮಾಡಿತು. ದಲಿತರು ಸಾಮಾಜಿಕ ಸಮಸ್ಯೆಗಳಿಂದ ಹೊರಬರಬೇಕಾದರೆ ಕೇವಲ ದಲಿತರು ಮಾತ್ರವಲ್ಲದೆ ಇತರರು ಸಹಕಾರ ಬಹಳ ಮುಖ್ಯ ಎಂದರು.
ದಲಿತ ಸಾಹಿತ್ಯ ರಚನೆಯಾಗಬೇಕು: ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ ಮಾತನಾಡಿ, ಧರ್ಮಗಳು ಜನರನ್ನು ಮೂಢನಂಬಿಕೆಯತ್ತ ಕರೆದೊಯ್ಯುತ್ತಿದೆ. ದೇವರ ಹೆಸರಿನಲ್ಲಿ ಜಾತಿ ಪದ್ಧತಿ ಹಾಗೂ ಮೂಢನಂಬಿಕೆಗಳು ಹೆಚ್ಚಾಗುತ್ತಿದ್ದು, ಅದೊಂದು ಹಿಂದೂ ಮಾಫಿಯಾ ಅಗಿ ಮಾರ್ಪಟ್ಟಿದೆ. ರಾಮಾಯಣ, ಮಹಾಭಾರತ ಬೂಸಾ ಸಾಹಿತ್ಯದ ಅಧಿಕಾರಿ ಶಾಹಿಗಳಿಗೆ ಬೆಂಬಲವನ್ನು ನೀಡುತ್ತಿದೆ. ರೋಂ ನಲ್ಲಿ ಕ್ರಿಶ್ಚಿಯನ್ ಮಾಫಿಯಾ, ಅದೇ ರೀತಿಯ ಮುಸ್ಲಿಂ ದೇಶಗಳಲ್ಲಿ ಮುಸ್ಲಿಂ ಮಾಫಿಯಾ ಇದೆ. ಹಾಗೆಯೇ ಭಾರತದಲ್ಲಿ ಹಿಂದು ಮಾಫಿಯಾಗಳು ಹೆಚ್ಚಾಗುತ್ತಿವೆ. ಅದರ ವಿರುದ್ಧ ದಲಿತ ಸಾಹಿತ್ಯಗಳು ರಚನೆ ಆಗಬೇಕು ಎಂದರು.
ಹೋರಾಡಬೇಕು: ಜಗತ್ತಿನಲ್ಲಿ ನಾವು ಸೂರ್ಯಮಂಡಲವನ್ನು ಭೇದಿಸಿ ಮುಂದೆ ಹೋಗಿದ್ದರೂ, ಸಹ ಸಾಮಾಜಿಕ ಜೀವನವನ್ನು ಅಧಿಕಾರ ಕೇಂದ್ರಗಳು ನಿಯಂತ್ರಿಸುತ್ತಿವೆ. ಭಾರತದಲ್ಲಿ ಹಿಂದು ಧರ್ಮ ನಮ್ಮನ್ನು ನಿಯಂತ್ರಿಸುತ್ತಿದೆ. ಸಾವಿರಾರು ಜಾತಿಗಳನ್ನು ಹುಟ್ಟುಹಾಕಿ ವೈಶಮ್ಯಗಳನ್ನು ಬಿತ್ತುತ್ತಿದೆ. ಅದಕ್ಕೆ ವಿರುದ್ಧವಾದ ಸಾಹಿತ್ಯವನ್ನು ಧ್ವಂಸ ಮಾಡುತ್ತಿದೆ ಎಂದ ಅವರು, ಮೂರು ಮೇಲ್ಜಾತಿಗಳನ್ನು ಹೊರತುಪಡಿಸಿ ಉಳಿದೆಲ್ಲ ಜಾತಿಯವರು ಒಟ್ಟಾಗಿ ಈ ಮಾಫಿಯಾ ವಿರುದ್ಧ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.
ದಲಿತ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಅರ್ಜುನ ಗೊಳಸಂಗಿ ಮಾತನಾಡಿ, ಅಖಿತ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ಮೂರ್ನಾಲ್ಕು ಕೋಟಿ ರು.ಗಳನ್ನು ವೆಚ್ಚ ಮಾಡುತ್ತದೆ. ಆದರೆ ಅರ್ಥಪೂರ್ಣವಾಗಿ ನಡೆಯುವಂತಹ ದಲಿತ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ಕನಿಷ್ಟ 1 ಕೋಟಿ ರು. ಅನುದಾನವನ್ನು ನೀಡಬೇಕು ಎಂದ ಅವರು, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವಂತಹ ಕೆಲವರು ಮುಂದಿನ ತಿಂಗಳು ನಡೆಯುವಂತಹ ಸಾಹಿತ್ಯ ಸಮ್ಮೇಳನಗಳಿಗೆ ದಲಿತ ಸಾಹಿತಿಗಳಾದ ಸಿದ್ದಲಿಂಗಯ್ಯನವರು, ದೇವನೂರು ಮಹಾದೇವ, ಅರವಿಂದ ಮಾಲಗತ್ತಿಯಂತಹವರನ್ನು ಸಮ್ಮೇನಾಧ್ಯಕ್ಷರನ್ನಾಗಿ ಮಾಡಿದಾಗ ಸಾಮಾಜಿಕ ನ್ಯಾಯ ಲಭ್ಯವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷ ದುದ್ದ ಶ್ರೀನಿವಾಸ್, ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್, ಪತ್ರಕರ್ತ ಕೃಷ್ಣಮೂರ್ತಿ ಚಮರಂ, ಶ್ರೀಗಂಧ ಸೇವಾ ಸಂಸ್ಥೆಯ ಅಧ್ಯಕ್ಷ ರಂಗಸ್ವಾಮಿ ಹಾಗೂ ಇತರರು ಇದ್ದರು.
ಸಮ್ಮೇಳನದ ಮೆರವಣಿಗೆ
ಇದಕ್ಕೂ ಮುನ್ನು ಬೆಳಗ್ಗೆ ಪರಿಷತ್‌ನ ಧ್ವಜಾರೋಹಣ ಹಾಗೂ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಇರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮೆರವಣಿಗೆ ಮೂಲಕ ಅಂಬೇಡ್ಕರ್ ಭವನಕ್ಕೆ ಬರಲಾಯಿತು. ಮೆರವಣಿಗೆಯಲ್ಲಿ ಸಿದ್ದಾರ್ಥ ಯುವಕ ಸಂಘ ಮೂತಿಕೆರೆ(ನಾಸಿಕ್ ಡೋಲ್), ತಮಟೆ ವೆಂಕಟಯ್ಯ ತಂಡ ಕಬ್ಬಳಿ, ಬಸವರಾಜು ಮತ್ತು ತಂಡ (ಕೋಲಾಟ) ಹಿರಿಕಡಲೂರು, ಲಕ್ಕಮ್ಮ ಮತ್ತು ಬಿಸ್ಲಮ್ಮ ತಂಡ ಸೋಬಾನೆ ಪದ ಜೋಡಿ ಕೃಷ್ಣಾಪುರ, ಡೊಳ್ಳು ಕುಣಿತ ಮತ್ತು ವೀರಗಾಸೆ ಸಾಗಿಬಂತು.
ಬಸವಲಿಂಗಪ್ಪನವರು 73ರಲ್ಲಿ ಕನ್ನಡ ಸಾಹಿತ್ಯದ ಕೆಲವೊಂದನ್ನು ಬೂಸಾ ಸಾಹಿತ್ಯ ಎಂದು ಹೇಳಿದ ಪರಿಣಾಮದಿಂದ ಸಾಕಷ್ಟು ಅಲ್ಲೋಲ ಕಲ್ಲೋಲಗಳು ಉಂಟಾಗಿ ಅವರು ತಮ್ಮ ಸ್ಥಾನವನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
-ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ
Advertisement