ಆರೋಗ್ಯ ಕೇಂದ್ರ ಅವ್ಯವಸ್ಥೆಯ ಆಗರ

Updated on: 

-ಪಿ. ರವಿಕುಮಾರ್
ಹಾಸನ: ಇತಿಹಾಸ ಪ್ರಸಿದ್ಧ ಹಳೇಬೀಡಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತೆಯ ಅಭಾವ ಹೆಚ್ಚಾಗಿದೆ. ಇದರ ಪರಿಣಾಮ ಏನೆಂದರೆ ಗುಣಮುಖರಾಗಲು ಬರುವ ರೋಗಿಗಳು ಮತ್ತಷ್ಟು ಅನಾರೋಗ್ಯಕ್ಕೆ ತುತ್ತಾಗುವಂತಾಗಿದೆ.
  ಇಲ್ಲಿ ಕ್ಲೀನ್ ಅಂದ್ರೆ ಗೊತ್ತಿಲ ಕಂಡ್ರೀ ಹಾಗೂ ಇಲ್ಲಿನ ಸಿಬ್ಬಂದಿಗೆ ಕೆಲಸ ಮಾಡಿ ಅಂದ್ರೆ ತಾವೇ ಸರ್ವಾಧಿಕಾರಿಯಂತೆ ವರ್ತಿಸುತ್ತಾರೆ.ಇಂತಹ ಕೆಟ್ಟ ನಿರ್ಮಾಣವಾಗಿದ್ದು, ಒಟ್ಟಿನಲ್ಲಿ ಹಳೇಬೀಡಿನ ಸಮುದಾಯ ಆರೋಗ್ಯ ಕೇಂದ್ರ ಅವ್ಯವಸ್ಥೆಯ ಆಗರವಾಗಿದೆ.
 ಯಾವುದೇ ರೋಗಿ ಗುಣಮುಖನಾಗಲೂ ಮೊದಲು ಆತನ ಸುತ್ತಮುತ್ತಲಿನ ಪ್ರದೇಶ ಪರಿಶುದ್ಧವಾಗಿರಬೇಕು. ಸ್ವಚ್ಛತೆ ಇಲ್ಲದಿದ್ದರೆ ಅಲ್ಲಿ ರೋಗಿಗಳಿಗೆ ಹೈಟೆಕ್ ಟ್ರೀಟ್‌ಮೆಂಟ್ ನೀಡಿದರೂ ನಿಷ್ಪ್ರಯೋಜಕವಾಗುತ್ತದೆ. ಆರೋಗ್ಯ ಕೇಂದ್ರ ಎಂದ ಮೇಲೆ ಎಲ್ಲಾ ಸಮರ್ಪಕವಾಗಿರಬೇಕು. ಆದರೆ ಇಲ್ಲಿ ಸ್ವಚ್ಛತೆಯ ಅಭಾವದಿಂದ ರೋಗ ರುಜಿನಗಳು ಹೆಚ್ಚಾಗುತ್ತಿವೆ. ಸಮುದಾಯ ಆರೋಗ್ಯ ಕೇಂದ್ರ ಒಂದು ರೀತಿಯಲ್ಲಿ ರೋಗಗ್ರಸ್ಥ ಕೇಂದ್ರವಾಗಿ ಬದಲಾವಣೆ ಹೊಂದಿದೆ.
ಪಾಳು ಬಿದ್ದ ಕಟ್ಟಡದಂತೆ:  ಹಳೇಬೀಡು ಹೊಯ್ಸಳರು ಆಳಿದ ನಾಡು. ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ರೋಗಿಗಳನ್ನು ಗುಣಮುಖರನ್ನಾಗಿಸುವ ಬದಲು ಮತ್ತಷ್ಟು ರೋಗಗಳನ್ನು ಹೆಚ್ಚಿಸುವಂತೆ ಮಾಡುತ್ತಿದೆ. ಆಸ್ಪತ್ರೆ ಶೌಚಾಲಯದಲ್ಲಿ ಸ್ವಚ್ಛತೆ ಇಲ್ಲವೇ ಇಲ್ಲ. ಶೌಚಾಲಯದ ಒಳ ಪ್ರವೇಶಿಸುತ್ತಿದ್ದಂತೆ ಒಂದು ರೀತಿಯಲ್ಲಿ ಪಾಳು ಬಿದ್ದಿರುವ ಕಟ್ಟಡದಂತೆ ಭಾಸವಾಗುತ್ತದೆ.
  ಪ್ರತಿ ತಿಂಗಳು ಆಸ್ಪತ್ರೆ ಸ್ವಚ್ಛತೆಗೆ ಸಾವಿರಾರು ರು. ಖರ್ಚು ಮಾಡಲಾಗುತ್ತಿದೆ. ಇಲಾಖೆಯಿಂದ ಬರುವ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಈ ಬಗ್ಗೆ ಹಳೇಬೀಡಿನ ಜನತೆ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದ್ದರೂ ಈವರೆಗೂ ಆಸ್ಪತ್ರೆ ಬದಲಾವಣೆಹೊಂದದೆ ರೋಗಗ್ರಸ್ಥವಾಗಿಯೇ ಇದೆ.
  ಆಸ್ಪತ್ರೆಯಲ್ಲಿ 4 ಮಂದಿ ನಾನ್ ಕ್ಲಿನಿಕಲ್ ಸೇವಕರಿದ್ದಾರೆ. ಇವರು ಆಸ್ಪತ್ರೆಯ ಕೆಲಸಗಳನ್ನು ನಿರ್ವಹಿಸದೇ ಕರ್ತವ್ಯ ಲೋಪ ಎಸಗುತ್ತಿದ್ದಾರೆ. ಪ್ರತಿ ತಿಂಗಳು ಸರ್ಕಾರದಿಂದ ಬರುವ ಹಣ ಮಾತ್ರ ಲೂಟಿ ಮಾಡುತ್ತಿದ್ದಾರೆ. ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸದ ಕಾರಣ ಆಸ್ಪತ್ರೆಯಲ್ಲಿ ಅವ್ಯವಸ್ಥೆಗಳ ಆಗರವಾಗಿ ಪರಿಣಮಿಸಿದೆ.
ನಾಚಿಕೆಗೇಡಿನ ಸಂಗತಿ:  ಅಷ್ಟೇ ಅಲ್ಲ ಚಿಕಿತ್ಸೆಗೆಂದು ಇಲ್ಲಿಗೆ ಬರುವಂತಹ ರೋಗಿಗಳಿಗೆ ಕುಡಿಯುಲು ಯೋಗ್ಯವಾದ ಒಂದು ತೊಟ್ಟು ನೀರು ಸಹ ಸಿಗೋದಿಲ್ಲ. ಬರಗಾಲದಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಆಸ್ಪತ್ಪೆಯಲ್ಲಿ ಒಳ್ಳೆಯ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸದಿರುವುದು ನಾಚಿಕೆಗೇಡಿನ ಸಂಗತಿ.
  ಸರ್ಕಾರಿ ಸೇವೆ ದೇವರ ಸೇವೆ ಎನ್ನುತ್ತಾರೆ. ಆದರೆ ಆಂತಹ ದೇವರ ಸೇವೆಯನ್ನೇ ಇಲ್ಲಿನ ಸಿಬ್ಬಂದಿ ಸಂಪೂರ್ಣವಾಗಿ ಮರೆತಿದ್ದಾರೆ. ಮೂಲಭೂತವಾಗಿ ಆರೋಗ್ಯ ಕೇಂದ್ರಕ್ಕೆ ಬೇಕಾಗಿರುವಂತಹ ವ್ಯವಸ್ಥೆ ಇಲ್ಲದೆ ರೋಗಿಗಳು ಪರದಾಡುವಂತಹ ಪರಿಸ್ಥಿತಿ.
  ಆದ್ದರಿಂದ ನಾನ್ ಕ್ಲಿನಿಕಲ್ ಗುತ್ತಿಗೆದಾರರು ಬದಲಾಯಿಸಿ ಆಸ್ಪತ್ರೆಯ ಶುಚಿತ್ವ ಕಾಪಾಡಿ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
  ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ಯಾಮಲಾ ದೇವಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೂ ಅವ್ಯವಸ್ಥೆ ಯಾವುದೂ ಸರಿಯಾಗಿಲ್ಲ. ಸಂಬಂಧಪಟ್ಟವರಿಗೆ ಸ್ವಚ್ಛತೆ ಕಾಪಾಡುವಂತೆ ಹಾಗೂ ಮೂಲಭೂತ ಸೌಕರ್ಯ ಒದಗಿಸುವಂತೆ ಸೂಚಿಸಿದ್ದರೂ ಏನೂ ಪ್ರಯೋಜನವಾಗಿಲ್ಲ. ಇನ್ನಾದರೂ ಮೇಲಾಧಿಕಾರಿಗಳು ಇತ್ತ ಗಮನ ಹರಿಸಬೇಕಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com